ಕೊಳಗೇರಿ ನಿವಾಸಿಗಳ ಕೂಗು ಕೇಳುವವರಿಲ್ಲ!

| Published : Dec 04 2024, 12:35 AM IST

ಸಾರಾಂಶ

ಸರ್ಕಾರಗಳು ಕೇವಲ ಬಾಯಿಮಾತಿನಲ್ಲಿ ಕೊಳಗೇರಿ ಅಭಿವೃದ್ಧಿ ಕುರಿತು ಮಾತನಾಡುತ್ತಿವೆಯೇ ಹೊರತು ನಿರೀಕ್ಷಿತ ಮಟ್ಟದಲ್ಲಿ ಕೊಳಗೇರಿ ಪ್ರದೇಶಗಳ ಅಭಿವೃದ್ಧಿ ಆಗಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಈ ನಡುವೆ ಸ್ಲಂಗಳಲ್ಲಿ ವಾಸಿಸುವ ಜನರ ಜೀವನಮಟ್ಟ ಇನ್ನಷ್ಟು ಹದಗೆಟ್ಟಿದೆ.

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ:

ಕುಡಿಯುವ ನೀರಿನ ಸಮಸ್ಯೆ, ಸಮರ್ಪಕ ರಸ್ತೆ ಇಲ್ಲ, ಚರಂಡಿ ಅವ್ಯವಸ್ಥೆ, ಎಲ್ಲೆಂದರಲ್ಲಿ ಬೀಳುವ ಕಸ, ದುರ್ನಾತ, ನಾಯಿ, ಹಂದಿಗಳ ಉಪಟಳ, ಮಳೆ ಬಂದರೆ ಮನೆಗೆ ನುಗ್ಗುವ ನೀರು...

ಇದು ಮಹಾನಗರದ ಬಹುತೇಕ ಕೊಳಗೇರಿ ನಿವಾಸಿಗಳು ಅನುಭವಿಸುತ್ತಿರುವ ನರಕಯಾತನೆ.

ಆಡಳಿತ ವ್ಯವಸ್ಥೆ ಕೊಳಗೇರಿ ಪ್ರದೇಶವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎನ್ನುವ ಸಾರ್ವಜನಿಕರ ಆರೋಪಕ್ಕೆ ಇದು ಸಾಕ್ಷಿಯಾಗಿದೆ.

ಕರ್ನಾಟಕದ ನಗರ, ಪಟ್ಟಣ ಪ್ರದೇಶದಲ್ಲಿ ಇರುವ ಕೊಳಚೆ ಪ್ರದೇಶಗಳ ನಿವಾಸಿಗಳ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ 1974ರ ನ. 1ರಂದು ಕರ್ನಾಟಕ ಕೊಳಚೆ ಪ್ರದೇಶ (ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ 1973ನ್ನು ಜಾರಿಗೆ ತಂದಿದೆ. ರಾಜ್ಯದ ನಗರ ಪ್ರದೇಶಗಳಲ್ಲಿ ವಾಸಿಸುವ ಬಡಜನರ, ಕೊಳಚೆ ನಿವಾಸಿಗಳ ಜೀವನಮಟ್ಟವು ಅತೀ ಕೆಳಮಟ್ಟದಲ್ಲಿರುವುದನ್ನು ಅರಿತು ಆರೋಗ್ಯ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸಲು ಹಾಗೂ ಕೊಳಗೇರಿ ನಿವಾಸಿಗಳ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯನ್ನು 1975ರ ಜುಲೈನಲ್ಲಿ ಸ್ಥಾಪಿಸಲಾಯಿತು. ಬಳಿಕ 2010ರಲ್ಲಿ ಮಂಡಳಿಯನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಾಗಿ ಮರು ನಾಮಕರಣ ಮಾಡಲಾಗಿದೆ. ಆದರೆ ವಸತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಮನೆ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಆದರೆ ಇಲ್ಲಿ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಲು ಸ್ಥಳೀಯ ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಮುಂದೆ ಬರುವುದು ತುಂಬಾ ವಿರಳವೆನ್ನುವಂತಾಗಿದೆ. ಅದಕ್ಕೆ ಬಡವರ ಕೂಗು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕೇಳುವುದಿಲ್ಲ ಎಂದು ಕೊಳಗೇರಿ ನಿವಾಸಿಗಳ ಪದೇ ಪದೇ ಆಕ್ರೋಶ ಹೊರಹಾಕುತ್ತಿರುತ್ತಾರೆ.

ಸ್ಮಾರ್ಟ್‌ಸಿಟಿ ಆಗುತ್ತಿರುವ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಕೊಳಗೇರಿಗಳ ಸಮಸ್ಯೆಯ ಕೂಗು ಕೇಳುತ್ತಿಲ್ಲ. ಮೊದಲು ಕೊಳಗೇರಿ ಸ್ಮಾರ್ಟ್‌ ಆಗಬೇಕಿದೆ. ಆ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಕಣ್ತೆರೆದು ನೋಡಬೇಕಿದೆ. ಕಾರ್ಮಿಕರು, ಹಮಾಲರು, ರಿಕ್ಷಾ ಚಾಲಕರು, ಪೌರ ಕಾರ್ಮಿಕರು ಸೇರಿದಂತೆ ಬಹುತೇಕ ದಲಿತರು, ಹಿಂದುಳಿದವರೇ ವಾಸಿಸುವ ಪ್ರದೇಶಗಳು ಅಭಿವೃದ್ಧಿಯಿಂದ ವಂಚಿತಗೊಂಡಿವೆ.

ರಾಜ್ಯದಲ್ಲಿ ಗುರುತಿಸಿದ ಒಟ್ಟು ಸ್ಲಂಗಳ ಸಂಖ್ಯೆ 2804, ಅದರಲ್ಲಿ ಘೋಷಿತ 2397, ಅಘೋಷಿತ 40 ಇವೆ. ಇನ್ನು ಧಾರವಾಡ ಜಿಲ್ಲೆಯಲ್ಲಿ ಒಟ್ಟು 87 ಸ್ಲಂಗಳಿವೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 68 ಘೋಷಿತ ಸ್ಲಂಗಳಿವೆ. ಅಘೋಷಿತ ಸ್ಲಂಗಳ ಸಂಖ್ಯೆ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಗೊತ್ತಿಲ್ಲ.

ಎಲ್ಲೆಂದರಲ್ಲಿ ಬೀಳುವ ಕಸ:

ಹುಬ್ಬಳ್ಳಿಯ ಸ್ಲಂಗಳಲ್ಲಿ ಕಾಲಿಟ್ಟರೆ ಸಾಕು ರಸ್ತೆಯ ಎರಡು ಬದಿ ಕಸದ ರಾಶಿ, ದುರ್ನಾತ ಕಂಡು ಬರುತ್ತಿದೆ. ಕೆಲ ಪ್ರದೇಶಗಳು ನಾಯಿ, ಹಂದಿ, ಕ್ರಿಮಿಕೀಟಗಳ ಸಾಮ್ರಾಜ್ಯವಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿಯೂ ಕಾಡುತ್ತಿದೆ. ಇನ್ನು ಮಳೆ ಬಂದರಂತೂ ಇಲ್ಲಿನ ಜನರ ಪಾಡು ದೇವರ ಪ್ರೀತಿ ಎಂಬಂತಿರುತ್ತದೆ. ಸೋರುವ ಮನೆ, ಮನೆಗೆ ನುಗ್ಗುವ ಮಳೆ ನೀರು ಜತೆಗೆ ಕಸ. ಬೇಸಿಗೆಯಲ್ಲಿ ಧೂಳು ಹೊದ್ದು ಮಲಗುವ ಇಲ್ಲಿನ ರಸ್ತೆಗಳು ಮಳೆಗಾಲದಲ್ಲಿ ಕೆರೆಯಂತಾಗುತ್ತವೆ. ಹಾಗಾಗಿ ಇಲ್ಲಿನ ನಿವಾಸಿಗಳ ಜೀವನ ನಿತ್ಯ ನರಕ ಎನ್ನುವಂತಿದೆ.

ಬಡ ಜನರ ಬದುಕು ಬೀದಿಯಲ್ಲಿದೆ. ವೋಟಿಗಾಗಿ ಐದು ವರ್ಷಕ್ಕೊಮ್ಮೆ ಬರುವ ರಾಜಕಾರಣಿಗಳ ಗೆದ್ದ ಬಳಿಕ ನಮ್ಮ ಕಡೆ ತಲೆಯೆತ್ತಿಯೂ ನೋಡುವುದಿಲ್ಲ. ನಮ್ಮ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರೂ ಕ್ಯಾರೇ ಎನ್ನುವುದಿಲ್ಲ ಎನ್ನುತ್ತಾರೆ ಇಲ್ಲಿನ ಗಿರಣಿಚಾಳದ ನಿವಾಸಿಗಳು.

ಹತ್ತಾರು ವರ್ಷಗಳಿಂದ ರಸ್ತೆಯನ್ನು ಕಾಣದ ಅನೇಕ ಪ್ರದೇಶಗಳನ್ನು ನಾವು ನೋಡಿದ್ದೇವೆ. ಸಮರ್ಪಕ ಕುಡಿಯುವ ನೀರು ಪೂರೈಕೆ, ಉತ್ತಮ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯವೆನ್ನುವುದು ನಮಗೆ ಗಗನಕುಸುಮವಾಗಿದೆ. ಕಸ ಸಂಗ್ರಹಿಸುವ ವಾಹನಗಳು ನಮ್ಮ ಪ್ರದೇಶಗಳಿಗೆ ಸಮರ್ಪಕವಾಗಿ ಬರುವುದಿಲ್ಲ ಎನ್ನುತ್ತಾರೆ ಆನಂದ ನಗರದ ನಿವಾಸಿಗಳು.

ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸುವ ಕೆಲಸವಾಗುತ್ತಿಲ್ಲ

ಇದೇ ಭಾಗದ ಶಾಸಕ ಪ್ರಸಾದ ಅಬ್ಬಯ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದು, ಈ ಸಮಸ್ಯೆಗಳತ್ತ ಗಮನ ಹರಿಸಬೇಕಿದೆ. ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸುವ ಕೆಲಸ ಈ ವರೆಗೂ ಆಗಿಲ್ಲ ಎನ್ನುವ ಆರೋಪ ಕೊಳಗೇರಿ ನಿವಾಸಿಗಳದ್ದು. ಇಡೀ ಸ್ಮಾರ್ಟ್ ಸಿಟಿಯೇ ಗಬ್ಬೆದ್ದು ನಾರುತ್ತಿರುವಾಗ ಕೊಳಗೇರಿ ಪ್ರದೇಶವನ್ನು ಕಣ್ಣೆತ್ತಿ ನೋಡುವವರು ಯಾರು? ಎಂದು ಜನರು ಕುಹಕವಾಡುತ್ತಿದ್ದಾರೆ.

ಮಹಾನಗರದ ಕೊಳಗೇರಿ ಪ್ರದೇಶಗಳು

ಹುಬ್ಬಳ್ಳಿಯ ಕರಿಗಣ್ಣನ ಹಕ್ಕಲ, ಯಲ್ಲಾಪುರ ಓಣಿ, ಕೆಸಿಟಿ ಮಿಲ್‌, ಶಿಕ್ಕಾಲಿಗರ ಓಣಿ, ಗಿರಣಿಚಾಳ, ಯಾವಗಲ್‌ ಪ್ಲಾಟ್‌, ವೀರ ಮಾರುತಿ ನಗರ, ಚಾಮುಂಡೇಶ್ವರ ನಗರ, ವೀರಾಪುರ ಓಣಿ, ಆನಂದ ನಗರ, ನೇಕಾರ ನಗರ, ಜನ್ನತ ನಗರ, ಮಾರುತಿ ನಗರ, ಮಹಾದೇವ ನಗರ, ರಾಮಲಿಂಗೇಶ್ವರ ನಗರ, ಚಿಟಿಗುಪ್ಪಿ ಚೌಲ, ನಂದೀಶ್ವರ ನಗರ, ತಾರಿಹಾಳ ಸೇರಿದಂತೆ 32 ಸ್ಲಂಗಳಿವೆ.

ಧಾರವಾಡದ ಸರಸ್ವತಪುರ, ಲಕಮನಹಳ್ಳಿ, ನಗರಕರ ಕಾಲನಿ, ಕುಂಬಾರ ಓಣಿ, ಗೊಲ್ಲರ ಓಣಿ, ಹೊಸಯಲ್ಲಾಪುರ, ಸಿದ್ದರಾಮೇಶ್ವರ ಸ್ಲಂ, ಗೌಳಿಗಲ್ಲಿ, ಬಾರ ಕೊಟ್ರಿ, ಚಪ್ಪರ ಬಂದ್‌ ಕಾಲನಿ, ಮಸಾಲಗಾರ ಓಣಿ ಸೇರಿದಂತೆ 36 ಕೊಳಗೇರಿ ಪ್ರದೇಶಗಳಿವೆ.