ಮುಗಿದ ಮತದಾನ, ಇನ್ನೇನಿದ್ದರೂ ಲೆಕ್ಕಾಚಾರ, 6 ರಂದು ಫಲಿತಾಂಶ

| Published : Jun 04 2024, 12:34 AM IST

ಮುಗಿದ ಮತದಾನ, ಇನ್ನೇನಿದ್ದರೂ ಲೆಕ್ಕಾಚಾರ, 6 ರಂದು ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ನಾಲ್ಕು ಅವಧಿಯಿಂದಲೂ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮರಿತಿಬ್ಬೇಗೌಡ ಸತತ ಐದನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಅವರ ಮೊದಲ ಬಾರಿ ಕಾಂಗ್ರೆಸ್, ಎರಡನೇ ಬಾರಿ ಪಕ್ಷೇತರ, ಮೂರು ಮತ್ತು ನಾಲ್ಕನೇ ಬಾರಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಈ ಬಾರಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ಅಂಶಿ ಪ್ರಸನ್ನಕುಮಾರ್ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯ ಮತದಾನ ಮುಗಿದಿದ್ದು, ಫಲಿತಾಂಶ ಏನಾಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.ಕಳೆದ ನಾಲ್ಕು ಅವಧಿಯಿಂದಲೂ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮರಿತಿಬ್ಬೇಗೌಡ ಸತತ ಐದನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಅವರ ಮೊದಲ ಬಾರಿ ಕಾಂಗ್ರೆಸ್, ಎರಡನೇ ಬಾರಿ ಪಕ್ಷೇತರ, ಮೂರು ಮತ್ತು ನಾಲ್ಕನೇ ಬಾರಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಈ ಬಾರಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ಜೆಡಿಎಸ್ ಅಭ್ಯರ್ಥಿಯಾಗಿರುವ ಕೆ. ವಿವೇಕಾನಂದ ಅವರದು ಇದೇ ಮೊದಲ ಪ್ರಯತ್ನ. ಅವರು ಅರಣ್ಯ ವಸತಿ ಮತ್ತು ವಿಹಾರಧಾಮದ ಅಧ್ಯಕ್ಷರಾಗಿದ್ದರು. ಇದೇ ಮೊದಲ ಬಾರಿಗೆ ಬಿಜೆಪಿಯು ಕಣದಲ್ಲಿ ಇಲ್ಲ. ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಇದಕ್ಕೆ ಕಾರಣ.2000. 2006. 2012 ರಲ್ಲಿ ಬಿಜೆಪಿಯಿಂದ ಪ್ರೊ.ಎಸ್.ಎಂ. ಗುರುನಂಜಯ್ಯ, 2018 ರಲ್ಲಿ ಬಿಜೆಪಿಯಿಂದ ಬಿ. ನಿರಂಜನಮೂರ್ತಿ ಕಣದಲ್ಲಿದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವಿನ ತ್ರಿಕೋನ ಹೋರಾಟದಲ್ಲಿ ಮರಿತಿಬ್ಬೇಗೌಡರು ಗೆಲ್ಲುತ್ತಾ ಬರುತ್ತಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿ ಕಣದಲ್ಲಿ ಇರಲಿಲ್ಲ. ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. 2006 ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ವಿರುದ್ಧ ಗೆದ್ದಿದ್ದ ಮರಿತಿಬ್ಬೇಗೌಡರು ಈ ಬಾರಿ ಗೆದ್ದರೆ ದಾಖಲೆ. ಏಕೆಂದರೆ ಸತತ ಐದನೇ ಬಾರಿ ಗೆದ್ದಂತೆ ಆಗುತ್ತದೆ. ಅಲ್ಲದೇ ಮರಿತಿಬ್ಬೇಗೌಡರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂಬ ಮಾತು ನಿಜವಾಗುತ್ತದೆ.ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ವಿರುದ್ಧ ಗೆಲ್ಲಲು ಕೊನೆಯ ಸುತ್ತಿನವರೆಗೂ ಹೋರಾಡಿದ್ದ ಮರಿತಿಬ್ಬೇಗೌಡರನ್ನು ಈ ಬಾರಿ ಜೆಡಿಎಸ್- ಬಿಜೆಪಿ ಮೈತ್ರಿಕೂಟ ಕಟ್ಟಿಹಾಕಲು ಸಫಲವಾಗುತ್ತವೆಯೇ? ಎಂಬ ಕುತೂಹಲ ಉಂಟಾಗಿದೆ.ಇದಲ್ಲದೇ ಮತ್ತೆ ಮತ್ತೆ ಸ್ಪರ್ಧಿಸುತ್ತಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ, ವಿಧಾನಸಭಾ ಮಾಜಿ ಸದಸ್ಯ ವಾಟಾಳ್ ನಾಗರಾಜ್ ಎಷ್ಟು ಮತಗಳನ್ನು ಪಡೆಯಬಹುದು?. ಬಿಎಸ್ಪಿ ಬೆಂಬಲಿತ ಅಭ್ಯರ್ಥಿ ಡಾ.ಹ.ರಾ. ಮಹೇಶ್ ಅವರ ಪ್ರಭಾವ ಎಷ್ಟು?. ಮೈಸೂರು, ಚಾಮರಾಜನಗರದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ಕೆಲಸ ಮಾಡಿ, ನಿವೃತ್ತರಾಗಿರುವ ನಾಗಮಲ್ಲೇಶ್ ಅವರು ಶಿಕ್ಷಕರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿರಬಹುದು?.ಇತರೆ ಅಭ್ಯರ್ಥಿಗಳಾದ ಎಂ.ನಾಗೇಂದ್ರ ಬಾಬು [ಕರ್ನಾಟಕ ಜನತಾಪಕ್ಷ], ಡಾ.ಎಸ್. ಅನಿಲ್‌ಕುಮಾರ್, ಎನ್. ಅಂಬರೀಷ್, ಎಸ್. ನಿಂಗರಾಜ, ಕೆ. ರಾಜು [ಪಕ್ಷೇತರರು] ಎಷ್ಟು ಮತಗಳನ್ನು ಸೆಳೆಯಬಹುದು? ಎಂಬ ಚರ್ಚೆ ನಡೆಯುತ್ತಿದೆ. 6 ರಂದು ಮತ ಎಣಿಕೆ

ಮೈಸೂರು ಪ್ರಾದೇಶಿಕ ಆಯುಕ್ತ ಡಾ.ಜೆ.ಸಿ. ಪ್ರಕಾಶ್ ಚುನಾವಣಾಧಿಕಾರಿಯಾಗಿದ್ದಾರೆ. ಜೂ.6 ರಂದು ಬೆಳಗ್ಗೆ 8 ರಿಂದ ಮೈಸೂರಿನ ಜೆಎಲ್ಬಿ ರಸ್ತೆಯ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.-- ಬಾಕ್ಸ್‌--

--ಆಯ್ಕೆ ಹೇಗೆ?--

ಇದು ಪ್ರಾಶಸ್ತ್ಯದ ಮತಗಳ ಚುನಾವಣೆ. ತಿರಸ್ಕೃತ ಮತಗಳನ್ನು ಹೊರತುಪಡಿಸಿ, ಸಿಂಧುವಾದ ಮತಗಳಿಗೆ ಕೋಟಾ ನಿಗದಿ ಮಾಡಲಾಗುತ್ತದೆ. ಹೀಗಾಗಿ ಗೆಲ್ಲಲು ಮೊದಲ ಪ್ರಾಶಸ್ತ್ಯದಲ್ಲಿಯೇ ಶೇ.50 ಪ್ಲಸ್ 1 ಮತ ಪಡೆಯಬೇಕು. ಯಾವುದೇ ಅಭ್ಯರ್ಥಿಗೆ ಅಷ್ಟು ಮತಗಳು ಬಾರದಿದ್ದಲ್ಲಿ ಕಡಿಮೆ ಮತಗಳಿರುವ ಅಭ್ಯರ್ಥಿಯನ್ನು ಹೊರಹಾಕುವ ಪ್ರಕ್ರಿಯೆ ಆರಂಭವಾಗುತ್ತದೆ. ಅವರ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಇತರರಿಗೆ ಹಂಚಲಾಗುತ್ತದೆ. ಯಾವುದೇ ಅಭ್ಯರ್ಥಿ ನಿಗದಿತ ಕೋಟಾ ತಲುಪಿದ ಕೂಡಲೇ ಮತ ಎಣಿಕೆ ಪ್ರಕ್ರಿಯೆ ಸ್ಥಗಿತಗೊಳಿಸಿ, ಆತ ಇಷ್ಟನೇ ಸುತ್ತಿನಲ್ಲಿ ವಿಜೇತ ಎಂದು ಘೋಷಿಸಲಾಗುತ್ತದೆ. ಒಂದು ವೇಳೆ ನಿಗದಿತ ಕೋಟಾ ತಲುಪದಿದ್ದರೂ ಕೊನೆಯಲ್ಲಿ ಉಳಿಯುವ ಇಬ್ಬರ ಪೈಕಿ ಕಡಿಮೆ ಇರುವವರ ದ್ವಿತೀಯ ಪ್ರಾಶಸ್ತ್ಯತ ಮತಗಳನ್ನು ಮೊದಲನೇಯವನಿಗೆ ಹಂಚಿಕೆ ಮಾಡಲಾಗುತ್ತದೆ. ಆಗಲೂ ನಿಗದಿತ ಕೋಟಾ ತಲುಪದಿದ್ದರೂ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಮತಗಳನ್ನು ಗಳಿಸಿದ ಆಧಾರದ ಮೇಲೆ ಆತನನ್ನೇ ವಿಜೇತ ಎಂದು ಘೋಷಿಸಲಾಗುತ್ತದೆ.