ಲೋಕಸಭಾ ಚುನಾವಣೆ: ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ

| Published : Jun 04 2024, 12:33 AM IST

ಲೋಕಸಭಾ ಚುನಾವಣೆ: ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರಿನ ಎಸ್ ಆರ್ ಪಿ ಎಸ್ ಹಾಗೂ ಎಲ್ ವಿ ಡಿ ಮಹಾವಿದ್ಯಾಲಯದಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆ ಸೇರಿ ಪಕ್ಕದ ಯಾದಗಿರಿಯನ್ನೊಳಗೊಂಡ 6-ರಾಯಚೂರು ಲೋಕಸಭಾ ಚುನಾವಣೆ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಮಂಗಳವಾರ ಮತ ಎಣಿಕೆ ಕಾರ್ಯಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಜಿಲ್ಲಾಡಳಿತದಿಂದ ಮಾಡಿಕೊಳ್ಳಲಾಗಿದೆ.

ಕಳೆದ ಮೇ.7 ರಂದು ಮತದಾನ ಪ್ರಕ್ರಿಯೇ ಶಸ್ವಿಯಾಗಿ ಪೂರ್ಣಗೊಂಡಿದ್ದು, ಮಂಗಳವಾರ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರದ ಎಸ್ ಆರ್ ಪಿ ಎಸ್ ಹಾಗೂ ಎಲ್ ವಿ ಡಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯವನ್ನು ನಡೆಸಲು ಅಗತ್ಯವಾದ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಕ್ಷೇತ್ರದ ವ್ಯಾಪ್ತಿಯ 36-ಶೋರಾಪೂರ (ಸುರಪುರ), 37-ಶಹಪುರ, 38-ಯಾದಗಿರಿ ಹಾಗೂ 56-ದೇವದುರ್ಗ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಗಳನ್ನು ಎಲ್ ವಿ ಡಿ ಕಾಲೇಜಿನಲ್ಲಿ ಉಳಿದಂತೆ 53-ರಾಯಚೂರು ಗ್ರಾಮೀಣ, 54- ರಾಯಚೂರು ನಗರ, 55- ಮಾನ್ವಿ ಮತ್ತು 57-ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಮತಗಳನ್ನು ಎಸ್ ಆರ್ ಪಿ ಎಸ್ ಕಾಲೇಜಿನಲ್ಲಿ ಮತ ಎಣಿಕೆ ನಡೆಸಲು ಅಗತ್ಯವಾದ ಕೋಠಡಿ, ಟೇಬಲ್‌, ಅಧಿಕಾರಿ, ಸಿಬ್ಬಂದಿ ವರ್ಗದವರನ್ನು ನಿಯೋಜಿಸಿದೆ.

ಮಂಗಳವಾರ ಬೆಳಗ್ಗೆ 7 ಗಂಟೆಗೆ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು ಬೆಳಿಗ್ಗೆ 8 ಗಂಟೆಗೆ ಅಂಚೆ ಮತ ಹಾಗೂ ಇವಿಎಂ ಮತಗಳ ಎಣಿಕೆ ಪ್ರಾರಂಭವಾಗುತ್ತವೆ. ಅದಕ್ಕಾಗಿ ಮತ ಎಣಿಕೆಗಾಗಿ 159 ಮೇಲ್ವಿಚಾರಕರು, 168 ಮೈಕ್ರೋ ಅಬ್ಸರ್ವರ್ ಹಾಗೂ 159 ಮತ ಎಣಿಕೆ ಸಹಾಕಯರನ್ನು ನೇಮಕ ಮಾಡಲಾಗಿದೆ.

ಮತ ಎಣಿಕೆ ನಡೆಸಲು ಇಟಿಪಿಬಿಎಸ್‌ ಸ್ಕ್ಯಾನಿಂಗ್‌ ಮತ್ತು ಎಣಿಕೆ, ಪಿಬಿ ಎಣಿಕೆ, ಇವಿಎಂ ಎಣಿಕೆ,ವಿವಿಪ್ಯಾಟ್ ಸ್ಲಿಪ್‌ ಎಣಿಕೆ ನಡೆಸುತ್ತಿದ್ದು, ಇಟಿಪಿಬಿಎಸ್‌ ಸ್ಕ್ಯಾನಿಂಗ್‌ ಮತ್ತು ಎಣಿಕೆ ಪ್ರಾರಂಭವಾದ 30 ನಿಮಿಷಗಳ ನಂತರ ಇವಿಎಂ ಎಣಿಕೆಯನ್ನು ಆರಂಭಿಸಲಾಗುತ್ತಿದೆ, ಇವಿಎಂ ಕೌಂಟಿಂಗ್‌ ಮುಕ್ತಾಯದ ಬಳಿಕ ವಿವಿಪ್ಯಾಟ್‌ ಸ್ಲಿಪ್ಗಳ ಎಣಿಕೆಯನ್ನು ಮಾಡಲಾಗುತ್ತಿದೆ.

14 ಟೇಬಲ್, ಮತಗಟ್ಟೆ ಸುತ್ತು : ಮತ ಎಣಿಕೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 14 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅದರಂತೆ ಶೋರಾಪುರಕ್ಕೆ 317 ಮತಗಟ್ಟೆಗಳಿದ್ದು 23 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ, ಶಹಪುರಕ್ಕೆ 265 ಕ್ಕೆ 19, ಯಾದಗಿರಿಗೆ 268 ಮತಗಟ್ಟೆಗಳಿಗೆ 20 ಸುತ್ತು, ರಾಯಚೂರು ಗ್ರಾಮೀಣಕ್ಕೆ 275 ಕ್ಕೆ 20 ಸುತ್ತು, ರಾಯಚೂರು ನಗರಕ್ಕೆ 250 ಕ್ಕೆ 18 ಸುತ್ತು, ಮಾನ್ವಿಗೆ 276 ಕ್ಕೆ 20, ದೇವದುರ್ಗಕ್ಕೆ 267 ಕ್ಕೆ 20 ಮತ್ತು ಲಿಂಗಸುಗೂರು ಕ್ಷೇತ್ರಕ್ಕೆ 285 ಮತಗಟ್ಟೆಗಳಿಗೆ 21 ಸುತ್ತಿನ ಮತ ಎಣಿಕೆ ಕಾರ್ಯವು ನಡೆಯಲಿದೆ.

ಇನ್ನು ಮತ ಎಣಿಕೆ ಪ್ರಕ್ರಿಯೇಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತಮ್ಮ ಏಜೆಂಟರನ್ನು ನೇಮಿಸಿಕೊಂಡಿದ್ದು, ಅದರಂತೆ ವಿಇಒ ಎಣಿಕೆಗಾಗಿ ಪ್ರತಿ ಕ್ಷೇತ್ರಕ್ಕೆ 14 ರಂದು 112, ಪಿಬಿ ಎಣಿಕೆಗೆ 8, ಇಟಿಪಿಬಿಎಸ್‌ ಸ್ಕ್ಯಾನಿಂಗ್‌ ಮತ್ತು ಎಣಿಕೆಗೆ 2 ಮತ್ತು ಆರ್‌ ಒ ಟೇಬಲ್‌ಗೆ 1 ರಂದು ಒಟ್ಟು 123 ಏಜೆಂಟರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ.

ಮತ ಎಣಿಕೆ ಕಾರ್ಯ ಎಲ್ಲೆಡೆ ಬಿಗಿ ಭದ್ರತೆ

ಮತ ಎಣಿಕೆ ಕಾರ್ಯದ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಇಲಾಖೆಯಿಂದ ಅಗತ್ಯ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ.ಮತ ಎಣಿಕೆ ಕಾರ್ಯಕ್ಕಾಗಿ ಒಬ್ಬರು ಎಸ್ಪಿ, ಇಬ್ಬರು ಹೆಚ್ಚುವರಿ ಎಸ್ಪಿ, 4 ಡಿಎಸ್ಪಿ, 17 ಸಿಪಿಐ, 44 ಪಿಎಸ್ಐ,111 ಎಎಸ್‌ಐ, 288 ಎಚ್‌ಸಿ-ಪಿಸಿ,79 ಮಹಿಳಾ ಎಚ್‌ಸಿ,ಪಿಸಿ ಸೇರಿ ಒಟ್ಟು 645 ಜನ ಪೊಲೀಸ್‌ ಅಧಿಕಾರಿ,ಸಿಬ್ಬಂದಿಯನ್ನು ನಿಯೋಜಿಸಿದ್ದು ಇದರ ಜೊತೆಗೆ 200 ಗೃಹ ರಕ್ಷಕ ದಳ, 3 ಕೆಎಸ್‌ಆರ್‌ಪಿ ತುಕಡಿ, 1 ಸಿಎಪಿಎಫ್ ತುಕಡಿ,10 ಡಿಎಆರ್‌ ತುಕಡಿ, 1 ಎಸ್‌ಸಿ ಪೂರ್ಣ ಪ್ರಮಾಣದ ತಂಡ, 2 ವೈದ್ಯಕೀಯ ತಂಡ (ಆಂಬ್ಯುಲೇನ್ಸ್‌), 2 ಅಗ್ನಿ ಶಾಮಕ ಹಾಗೂ ಮೊಬೈಲ್‌ ಸುರಕ್ಷತೆಗಾಗಿ 2 ಕೌಂಟರ್‌ಗಳನ್ನು ತೆರೆಯಲಾಗಿದೆ.

ಮತಎಣಿಕೆ ಕೇಂದ್ರದ ಸುತ್ತಲು ನಿಷೇಧಾಜ್ಞೆ ಜಾರಿ ಗೊಳಿಸಿದ್ದು, ಸಂಭ್ರಮಾಚರಣೆಯನ್ನು ನಿರ್ಭಂದಿಸಲಾಗಿದೆ. ಇದರೊಂದಿಗೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಆಯಾ ವಿಧಾನಸಭಾ ಕ್ಷೇತ್ರದ ನಗರ, ಪಟ್ಟಣ, ಹೋಬಳಿ ಹಾಗೂ ಗ್ರಾಮೀಣ ಭಾಗದ ಪೊಲೀಸ್‌ ಠಾಣೆಗಳಿಂದಲೂ ಸಹ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಇಲಾಖೆಯಿಂದ ವಹಿಸಲಾಗಿದೆ. ಇಡೀ ಮತ ಎಣಿಕೆ ಕಾರ್ಯವು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಎಣಿಕೆ ಕೊಠಡಿಗಳು ಸೇರಿದಂತೆ ಕೇಂದ್ರ ಸುತ್ತಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಅಧಿಕಾರಿಗಳ ಭೇಟಿ ಪರಿಶೀಲನೆ

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ಜೂ.4 ಮಂಗಳವಾರ ಮತ ಎಣಿಕೆ ಪ್ರಕ್ರಿಯೆ ಜರುಗುತ್ತಿರುವುದರಿಂದ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕ ಅಜಯ್ ಪ್ರಕಾಶ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಅವರು ಮತ ಎಣಿಕೆ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಅಂತಿಮ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಿದರು.

ನಗರದ ಎಸ್ ಆರ್ ಪಿ ಎಸ್ ಹಾಗೂ ಎಲ್ ವಿ ಡಿ ಮಹಾವಿದ್ಯಾಲಯದಲ್ಲಿರುವ ಮತ ಎಣಿಕೆ ಕೇಂದ್ರಗಳು, ಭದ್ರತಾ ಕೊಠಡಿಗಳನ್ನು ವೀಕ್ಷಿಸಿ ಮತ ಎಣಿಕೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸರಿಗಿಡದ್, ತಹಶೀಲ್ದಾರ ಸುರೇಶ ವರ್ಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.