ಸಾರಾಂಶ
- ಕಾಂಗ್ರೆಸ್, ಬಿಜೆಪಿಯಿಂದ ಯಾರೇ ಗೆದ್ರೂ ಇಲ್ಲಿ ಹೊಸ ಇತಿಹಾಸ ಸೃಷ್ಟಿ । ಸೋಲು-ಗೆಲವು ಇಂದೇ ತೀರ್ಮಾನ
- ದಾವಣಗೆರೆ ಕ್ಷೇತ್ರದಲ್ಲಿ ಗೆಲ್ಲುವ ಪಕ್ಷ ಪರ ಭಾರಿ ಬಾಜಿ ಕಟ್ಟೋರಿಗೆ ಬರ । ಪಕ್ಷೇತರ ಅಭ್ಯರ್ಥಿ ಮೇಲೂ ಎಲ್ಲರ ಕಣ್ಣು- - -
ನಾಗರಾಜ ಎಸ್. ಬಡದಾಳ್
ಕನ್ನಡಪ್ರಭ ವಾರ್ತೆ, ದಾವಣಗೆರೆದಾವಣಗೆರೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲೇ ಶೇ.76.98 ದಾಖಲೆಯ ಮತದಾನವಾಗಿದ್ದು, ಇದೇ ಮೊದಲ ಬಾರಿಗೆ ಇಲ್ಲಿ ಯಾರೇ ಗೆದ್ದರೂ ಹೊಸ ಇತಿಹಾಸ ನಿರ್ಮಾಣವಾಗಲಿದೆ.
ಸದ್ಯಕ್ಕೆ ಕ್ಷೇತ್ರದ ಫಲಿತಾಂಶದ ಮೇಲೆ ಬಾಜಿ ಕಟ್ಟುವ ರುಸ್ತುಂಗಳು ಸಹ ಇದೇ ಮೊದಲ ಬಾರಿಗೆ ಬಾಜಿ ಕಟ್ಟುವುದೋ, ಬೇಡವೋ ಎಂಬ ದ್ವಂಧ್ವಕ್ಕೆ ಒಳಗಾಗುವಂತೆ ಮಾಡಿದೆ ಈ ಬಾರಿಯ ಚುನಾವಣೆ.ಸತತ 4 ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ ಬದಲಿಗೆ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಪಕ್ಷ ಇಲ್ಲಿ ಕಣಕ್ಕಿಳಿಸಿದೆ. ಕಾಂಗ್ರೆಸ್ಸಿನ ಪಾಲಿಕೆ ಕಬ್ಬಿಣದ ಕಡಲೆಯಂತಾಗಿದ್ದ ದಾವಣಗೆರೆ ಕ್ಷೇತ್ರವನ್ನು ಹುರಿಗಡಲೆಯಂತಾಗಿಸಲು ಕಾಂಗ್ರೆಸ್ ಹೈಕಮಾಂಡ್ ಇದೇ ಮೊದಲ ಸಲ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಕಣಕ್ಕಿಳಿಸಿದೆ. ಇವರ ಮಧ್ಯೆ ಕಾಂಗ್ರೆಸ್ ಟಿಕೆಟ್ ವಂಚಿತ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಪಕ್ಷೇತರನಾಗಿ ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದರು.
ಯಾರೇ ಗೆದ್ದರೂ ಇತಿಹಾಸ!:ಬೀಗರಾದ ಮಾಜಿ ಸಂಸದ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಅವರ ಹಿರಿಯ ಸೊಸೆ, ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಕಿರಿಯ ಸೊಸೆ ಮಧ್ಯೆ ನಡೆಯುತ್ತಿರುವ ಚುನಾವಣೆ ಈ ಬಾರಿಯದು ಎಂಬುದು ವಿಶೇಷ. ಸಾಂಪ್ರಾದಾಯಿಕ ವೈರಿಗಳಾದ ಬಿಜೆಪಿ- ಕಾಂಗ್ರೆಸ್ ವೈರತ್ವದ ಜೊತೆಗೆ ಇಲ್ಲಿ ಎರಡು ಕುಟುಂಬಗಳ ರಾಜಕೀಯ ಜಿದ್ದಾಜಿದ್ದಿಯೂ ನಾಡಿನ ಗಮನ ಸೆಳೆದಿತ್ತು. ಒಂದು ಕಡೆ ಸಂಸದ ಜಿ.ಎಂ. ಸಿದ್ದೇಶ್ವರ ಪತ್ನಿಗೆ ಗೆಲ್ಲಿಸಲು ಟೊಂಕಕಟ್ಟಿ ನಿಂತರೆ, ಮತ್ತೊಂದು ಕಡೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪತ್ನಿ ಗೆಲ್ಲಿಸಲು ಸೆಡ್ಡು ಹೊಡೆದು ನಿಂತಿದ್ದರು. ಇಲ್ಲಿ ಈಗ ಯಾರೇ ಮಹಿಳಾ ಅಭ್ಯರ್ಥಿ ಗೆದ್ದರೂ ಅದು ಕ್ಷೇತ್ರದ ಇತಿಹಾಸವಾಗಲಿದೆ.
ಪ್ರತಿ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್-ಬಿಜೆಪಿ ಪರ ಬಾಜಿ ಕಟ್ಟುವವರ ಸಂಖ್ಯೆ ಇಲ್ಲಿ ಕಡಿಮೆಯೇ ಇರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ದಾಖಲೆಯ ಮತದಾನವಾದ ಕ್ಷೇತ್ರದಲ್ಲಿ ಬಾಜಿ ಕಟ್ಟಿ, ಮೀಸೆ ತಿರುವವರ ಸಂಖ್ಯೆ ಕಡಿಮೆಯೆಂದರೂ ಅತಿಶಯೋಕ್ತಿಯೇನಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತೋಟ ಕಟ್ಟುವೆ, ಗದ್ದೆ ಪಣಕ್ಕಿಡುವೆ, ಅಷ್ಟು ಲಕ್ಷ ಕಟ್ಟುವೆ, ಇಷ್ಟು ಲಕ್ಷ ಕಟ್ಟುವೆ, ಈ ವಾಹನ ಬೆಟ್ ಕಟ್ಟುವೆ, ಆ ವಾಹನ ಕಟ್ಟುವೆ, ಮನೆ ಪಣಕ್ಕಿಡುವೆ ಅಂತೆಲ್ಲಾ ಹೇಳುವವರ ಅದಕ್ಕಷ್ಟೇ ಸೀಮಿತವಾಗಿರುವುದು ಸ್ಪಷ್ಟವಾಗಿದೆ.ಮತದಾರರ ಆಶೀರ್ವಾದ ಯಾರಿಗಾಗಿದೆಯೋ?:
ಹಿಂದೆಲ್ಲಾ ಎಸ್.ಎಸ್. ಮಲ್ಲಿಕಾರ್ಜುನ- ಜಿ.ಎಂ. ಸಿದ್ದೇಶ್ವರ ಸ್ಪರ್ಧೆ ಇದ್ದಾಗ ತೊಡೆ ತಟ್ಟಿ ಹಣ, ಭೂಮಿ, ವಾಹನ ಪಣಕ್ಕಿಟ್ಟು ಗಿಟ್ಟಿಸಿಕೊಂಡವರು, ಕಳೆದುಕೊಂಡವರಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಳೆದುಕೊಂಡರು, ವಿಧಾನಸಭೆ ಚುನಾವಣೆಯಲ್ಲಿ ದುಂಡಗಾದವರೂ ಇದ್ದಾರೆ. ಆದರೆ, ಅದ್ಯಾಕೋ ಈ ಸಲದ ಫಲಿತಾಂಶ ಮಾತ್ರ ಬೂದಿ ಮುಚ್ಚಿದ ಕೆಂಡದಂತೆ ಇದೆ. ಮತದಾರ ಪ್ರಭುವಿನ ಆಶೀರ್ವಾದ ಯಾವ ಅಭ್ಯರ್ಥಿ, ಪಕ್ಷದ ಪರ ಇದೆಯೆಂಬುದನ್ನು ಸ್ಪಷ್ಟವಾಗಿ ಹೇಳಲಾಗದ ಸ್ಥಿತಿ ಇದೆ. ಸ್ಪಷ್ಟವಾಗಿ ಹೇಳಿದರೂ ಕೇಳದೇ, ತಮ್ಮದೇ ತರ್ಕ ಮಂಡಿಸುವವರ ಸಂಖ್ಯೆ ಕಡಿಮೆ ಇಲ್ಲ.ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು ಇಲ್ಲಿವರೆಗೆ ತಮ್ಮ ಮಾವ, ಪತಿ, ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿದವರಷ್ಟೇ. ಎಂದಿಗೂ ಸಕ್ರಿಯ ರಾಜಕಾರಣದಲ್ಲಿ ಬೆರೆತವರಲ್ಲ. ಅಲ್ಲದೇ, ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿದವರೂ ಇಲ್ಲ. ನೇರವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಹೊಸ ಮುಖಗಳು. ಇಬ್ಬರ ಬಗ್ಗೆ ಜನರಿಗೂ ಅಷ್ಟೇ ಸಾಮಾಜಿಕ, ಧಾರ್ಮಿಕ, ಜನೋಪಯೋಗಿ ಕಾರ್ಯಗಳ ಮೂಲಕವಷ್ಟೇ ಪರಿಚಯ. ಆದರೆ, ರಾಜಕೀಯವಾಗಿ ಇಬ್ಬರೂ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕಿಳಿಸಿದ್ದಾರೆ. ಈ ಇಬ್ಬರಿಗೆ ಮತ್ತೊಂದು ಹೊಸ ಮುಖವಾದ ಜಿ.ಬಿ. ವಿನಯಕುಮಾರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದೇ ತಲೆನೋವಾಗಿದೆ.
ಸಾಮಾನ್ಯವಾಗಿ ಕಾಂಗ್ರೆಸ್- ಬಿಜೆಪಿ ನೇರಾನೇರ ಸ್ಪರ್ಧೆಯ ಈ ಕ್ಷೇತ್ರಲ್ಲಿ ಮುಂಚೆಯೆಲ್ಲಾ ಕಾಂಗ್ರೆಸ್ಸಿನ ಏಕಸ್ವಾಮ್ಯ ಇತ್ತು. ಅನಂತರ ಇದು ಬಿಜೆಪಿ ಭದ್ರಕೋಟೆಯಾಗಿತ್ತು. ಆದರೆ, ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳು, ಸಿದ್ದರಾಮಯ್ಯ ವರ್ಚಸ್ಸು, ಪ್ರಭಾವ, ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನರ ಕೊಡುಗೆ, ಡಾ.ಪ್ರಭಾ ಮಲ್ಲಿಕಾರ್ಜುನರ ವೈಯಕ್ತಿಕ ವರ್ಚಸ್ಸು ಎಷ್ಟರಮಟ್ಟಿಗೆ ಕೆಲಸ ಮಾಡಿದೆ ಎಂಬುದು ಜೂ.4ರ ಮಧ್ಯಾಹ್ನಕ್ಕೆ ಸ್ಪಷ್ಟವಾಗಲಿದೆ. ಅದೇ ರೀತಿ, ನಾಲ್ಕು ಪತಿ ಸತತವಾಗಿ ಗೆದ್ದ ಲೋಕಸಭಾ ಕ್ಷೇತ್ರದಲ್ಲಿ ಪಾರಮ್ಯ ಮುಂದುವರಿಸಲು ಗಾಯತ್ರಿ ಸಿದ್ದೇಶ್ವರ ಮುಂದಾಗಿದ್ದಾರೆ.ಒಟ್ಟಾರೆ, ಮತದಾರರ ಪ್ರಭುವಿನ ಗುಪ್ತ ಆದೇಶ ಬಾಜಿ ಕಟ್ಟಿ ಮೀಸೆ ತಿರುವಲು ಹೊರಟಿದ್ದವರ ಕೈಗಳನ್ನೇ ಕಟ್ಟಿ ಹಾಕಿರುವುದು ಸ್ಪಷ್ಟ.
- - - ಬಾಕ್ಸ್ * ಬಾಜಿ ಕಟ್ಬೇಡಿ-ಎದುರಾಳಿ ಮಿತ್ರರ ಕಿವಿಮಾತು!ಕಾಂಗ್ರೆಸ್ಸೇ ದಾವಣಗೆರೆಯಲ್ಲಿ ಗೆಲ್ಲುತ್ತೇ. 1 ರು.ಗೆ 100 ರು. ಕೊಡ್ತೀನಿ ಎಂಬುದಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಚುನಾವಣೆ ನಂತರ ಸವಾಲು ಹಾಕಿದ್ದರು. ಅದರ ಬೆನ್ನಲ್ಲೇ ಸಂಸದ ಜಿ.ಎಂ. ಸಿದ್ದೇಶ್ವರ ಸಹ ನಾನು ₹50 ಕೋಟಿ ಕೊಡ್ತೀನಿ. ಇಲ್ಲಿ ನಾವೇ ಗೆಲ್ಲೋದು. ಕೇಳು ಕೊಡ್ತಾರಾ ಅಂತಾ ಪ್ರತಿ ಸವಾಲು ಹಾಕಿದ್ದ ಕ್ಷೇತ್ರ ಇದು. ಆದರೆ, ಎರಡೂ ಪಕ್ಷದವರಿಗೆ ಗೆಲ್ಲುವ ವಿಶ್ವಾಸವಂತೂ ಇದೆ.ಸದ್ಯಕ್ಕೆ ಫಲಿತಾಂಶ ಏನಾದರೂ ಆಗಬಹುದೆಂಬ ಮಾತು ಸ್ಪಷ್ಟ. ಯಾರೇ ಗೆದ್ದರೂ ಕೆಲವೇ ಸಾವಿರ ಮತಗಳ ಅಂತರದಲ್ಲಿ ಫಲಿತಾಂಶ ಸಾಧ್ಯತೆ ಇದೆ. ಕೆಲವರಂತೂ ವಾರ್ಡ್‌ವಾರು, ಕ್ಷೇತ್ರವಾರು ಲೀಡ್ ಪಟ್ಟಿ ಹಿಡಿದು, ಎದುರು ಪಕ್ಷದ ತಮ್ಮ ಆತ್ಮೀಯ ಸ್ನೇಹಿತರಿಗೆ ಹೇಳಿ, ಬಾಜಿ ಕಟ್ಟದಂತೆ ತಿಳಿಸಿರುವ ನಿದರ್ಶನಗಳೂ ಇವೆ. ಆದರೂ, ಅಲ್ಲಲ್ಲಿ ಸಣ್ಣ ಮಟ್ಟದಲ್ಲಿ, ಅಲ್ಪ ಮೊತ್ತಕ್ಕೆ, ಕೆಲವೇ ಲಕ್ಷಗಳ ಬಾಜಿ ಕಟ್ಟಿರುವ ನಿದರ್ಶನಗಳಿವೆ.
ಚುನಾವಣೆ ಇವತ್ತು, ಇರತ್ತೇ. ನಾಳೆ ಹೋಗತ್ತೆ. ನಮ್ಮ ಪ್ರೀತಿ, ವಿಶ್ವಾಸ, ಸ್ನೇಹ ಮುಖ್ಯ. ಈ ಚುನಾವಣೆಗೆ ಬಾಜಿ ಕಟ್ಟುವ ಕೆಲಸ ಬೇಡ ಎಂಬ ಮಾತುಗಳನ್ನು ಹೇಳಿ, ಎದುರಾಳಿ ಪಕ್ಷದ ತಮ್ಮ ಸ್ನೇಹಿತರು, ಹಿತೈಷಿಗಳ ಮನವೊಲಿಸಿರುವ ನಿದರ್ಶನಗಳೂ ಇವೆ. ಸದ್ಯಕ್ಕೆ ಫಲಿತಾಂಶ ಮಾತ್ರ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದೆ.- - - -3ಕೆಡಿವಿಜಿ7:
ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುವ ದಾವಿವಿ ಮತ ಎಣಿಕಾ ಕೇಂದ್ರದಲ್ಲಿ ಜೂ.4ರಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ ಮತ ಎಣಿಕಾ ಸಿದ್ಧತೆ ಪರಿಶೀಲಿಸಿದರು.- - -
-3ಕೆಡಿವಿಜಿ8: ಗಾಯತ್ರಿ ಸಿದ್ದೇಶ್ವರ-3ಕೆಡಿವಿಜಿ9: ಡಾ.ಪ್ರಭಾ ಮಲ್ಲಿಕಾರ್ಜುನ
-3ಕೆಡಿವಿಜಿ10: ಜಿ.ಬಿ.ವಿನಯಕುಮಾರ