ಸಾರಾಂಶ
ದೊಡ್ಡಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ನಡೆಯಲಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಮುನ್ನೆಲೆಗೆ ಬಂದಿದ್ದು, ಪ್ರಮುಖ ಅಭ್ಯರ್ಥಿಗಳ ಬೆಂಬಲಿಗರು ಹಲವು ಲೆಕ್ಕಾಚಾರಗಳಲ್ಲಿ ಮುಳುಗಿದ್ದಾರೆ.
ಅಭ್ಯರ್ಥಿಗಳ ಸೋಲು-ಗೆಲುವಿನ ವಿಚಾರದಲ್ಲಿ ದೊಡ್ಡ ಮಟ್ಟದ ಬೆಟ್ಟಿಂಗ್ ನಡೆದಿದೆ. ಎರಡೂ ಬಣಗಳಲ್ಲಿ ಗೆಲುವಿನ ವಿಶ್ವಾಸವಿದ್ದು, ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯ ಹೊರತಾಗಿಯೂ ಗೆಲ್ಲುವ ಕುದುರೆಯ ಮೇಲಿನ ಭರವಸೆಯಲ್ಲಿ ಹೇಳಿಕೊಳ್ಳುವಂತಹ ಏರಿಳಿತಗಳೇನೂ ಆಗಿಲ್ಲ.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಇದೀಗ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಹಲವು ಸಮೀಕ್ಷೆಗಳು ಎನ್‌ಡಿಎ ಅಭ್ಯರ್ಥಿ ಪರ ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸಿವೆ. ಆದರೆ ಉಭಯ ಅಭ್ಯರ್ಥಿಗಳು ತಮ್ಮದೇ ಆದ ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.
ಗ್ಯಾರಂಟಿಗಳು "ಕೈ " ಹಿಡಿಯುವ ವಿಶ್ವಾಸ:ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ, ಕ್ಷೇತ್ರ ವ್ಯಾಪ್ತಿಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿರುವ ಪಕ್ಷೇತರ ಶಾಸಕರಿರುವುದು ಮತ್ತು ಈ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಂಘಟಿತ ಪ್ರಯತ್ನ ತಮ್ಮ ಗೆಲುವಿನ ಭರವಸೆ ಹೆಚ್ಚಿಸಿದೆ. ಜೊತೆಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತದಾರರ ಮೇಲೆ ಪರಿಣಾಮ ಬೀರಿದ್ದು, ಪಕ್ಷಕ್ಕೆ ಬೆಂಬಲ ಹೆಚ್ಚಿದೆ. ಹೀಗಾಗಿ ಗೆಲವು ನಿಶ್ಚಿತ ಎಂಬ ವಿಶ್ವಾಸದಲ್ಲಿದ್ದಾರೆ.
ಜೊತೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಣಾಯಕ ಎನಿಸಿರುವ ಹಿಂದುಳಿದ ವರ್ಗಗಳ ಮತದಾರರ ಒಲವು ಗಳಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ. ಅಲ್ಪ ಸಂಖ್ಯಾತ ಮತದಾರರೂ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ ಎಂಬ ಲೆಕ್ಕಾಚಾರವೂ ಗೆಲುವಿನ ಸಾಧ್ಯತೆಗಳ ಮೇಲೆ ಪರಿಣಾಮ ಬೀರುವುದು ನಿಶ್ಚಿತ.ಮೋದಿ ನಾಯಕತ್ವಕ್ಕೆ ಬೆಂಬಲ ನಿರೀಕ್ಷೆ:
ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ.ಕೆ.ಸುಧಾಕರ್, ಬಿಜೆಪಿಯ ರಾಷ್ಟ್ರೀಯ ನಾಯಕತ್ವದ ವಿಚಾರವೇ ತಮ್ಮ ಗೆಲುವಿಗೆ ಶ್ರೀರಕ್ಷೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಅದಕ್ಕೆ ಪೂರಕವಾಗಿ ಪ್ರಬಲ ಒಕ್ಕಲಿಗ ಸಮುದಾಯದ ಅಭ್ಯರ್ಥಿ ಎಂಬುದೂ ಮತ ಕ್ರೋಢೀಕರಣದ ಭಾಗವಾಗಿದೆ. ಕ್ಷೇತ್ರ ಎಲ್ಲ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಒಕ್ಕಲಿಗ ಸಮುದಾಯ ನಿರ್ಣಾಯಕ ಸಂಖ್ಯೆಯ ಮತದಾರರನ್ನು ಹೊಂದಿದೆ. ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸಿದ್ದು, ಕಳೆದ ಚುನಾವಣೆಯ ಅಂಕಿ-ಸಂಖ್ಯೆಗಳ ಲೆಕ್ಕಾಚಾರದಲ್ಲಿ ಬಿಜೆಪಿ ಗೆಲುವಿಗೆ ಸಾಕಾಗುವಷ್ಟು ಮತಗಳಿಕೆಗೆ ಅವಕಾಶ ಕಲ್ಪಿಸಲಿದೆ ಎನ್ನಲಾಗಿದೆ.ಸುಧಾಕರ್ ಇಡೀ ಕ್ಷೇತ್ರದಲ್ಲಿ ಪರಿಚಿತ ರಾಜಕಾರಣಿ ಎಂಬುದೂ ಧನಾತ್ಮಕ ಅಂಶ. ಆದರೆ ಬಿಜೆಪಿಯ ಕೆಲ ನಾಯಕರ ತೆರೆಮರೆಯ ಮುನಿಸು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂಬ ವಾದ ಅಷ್ಟಾಗಿ ಚರ್ಚೆಯಲ್ಲಿಲ್ಲ. ಅಂತಿಮ ಹಂತದಲ್ಲಿ ಮೋದಿ ನಾಯಕತ್ವ ಮತ್ತು ಬಿಜೆಪಿ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಾಯಕರು ಕೆಲಸ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಗೆಲ್ಲಲಿದೆ ಎಂಬ ಚರ್ಚೆಗೆ ಪುಷ್ಠಿ ನೀಡಿವೆ.
ಎರಡೂ ಪಕ್ಷಗಳಿಗೆ ಪ್ರತಿಷ್ಠೆ:ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ ಇದು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. 15 ಚುನಾವಣೆಗಳಲ್ಲಿ 13 ಬಾರಿ ಕಾಂಗ್ರೆಸ್ ಗೆದ್ದಿದೆ. 1996ರಲ್ಲಿ ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಜನತಾದಳದಿಂದ ಮತ್ತು ಕಳೆದ ಬಾರಿ ಬಿಜೆಪಿಯಿಂದ ಬಿ.ಎನ್.ಬಚ್ಚೇಗೌಡ ಗೆಲುವು ಸಾಧಿಸಿದ್ದು, ಈ ಇಬ್ಬರು ಮಾತ್ರ ಕ್ಷೇತ್ರದಲ್ಲಿ ಗೆಲುವು ಕಂಡ ಕಾಂಗ್ರೆಸ್ಸೇತರ ಅಭ್ಯರ್ಥಿಗಳಾಗಿದ್ದಾರೆ. ಆದರೆ ಆರ್.ಎಲ್.ಜಾಲಪ್ಪ ನಂತರದ ದಿನಗಳಲ್ಲಿ 3 ಬಾರಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ 2 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಕಳೆದ ಬಾರಿ ಕಾಂಗ್ರೆಸ್ ಕೈತಪ್ಪಿರುವ ಕ್ಷೇತ್ರವನ್ನು ಮರಳಿ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿ ಕಾಂಗ್ರೆಸ್ ಇದೆ.
ಮತ್ತೊಂದು ಕಡೆ ಕಳೆದ ಬಾರಿ ತನ್ನ ತೆಕ್ಕೆಗೆ ಪಡೆದಿರುವ ಬಿಜೆಪಿ, ಈ ಬಾರಿಯೂ ಶತಾಯ ಗತಾಯ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳುವ ನಿರ್ಣಾಯಕ ಪ್ರಯತ್ನ ಮಾಡಿದೆ. ಅಲ್ಲದೆ ಕ್ಷೇತ್ರದ ಇತಿಹಾಸದಲ್ಲಿ ಈವರೆಗೆ ಇಬ್ಬರೇ ಒಕ್ಕಲಿಗ ಸಂಸದರನ್ನು ಕಂಡಿರುವ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ ಗೆಲ್ಲುವ ಮೂಲಕ ಪ್ರಬಲ ನಾಯಕರಾಗಿ ಬೆಳೆಯುವ ನಿರೀಕ್ಷೆ ಹೊಂದಿದ್ದಾರೆ.ಕುತೂಹಲಗಳಿಗೆ ತೆರೆ:
ಇಂದು ಮಧ್ಯಾಹ್ನದ ವೇಳೆಗೆ ಎಲ್ಲ ನಿರೀಕ್ಷೆಗಳಿಗೆ ತೆರೆ ಬೀಳಲಿದ್ದು, ಕ್ಷೇತ್ರದ ಸ್ಪಷ್ಟ ಫಲಿತಾಂಶ ಮಧ್ಯಾಹ್ನ 12 ಗಂಟೆ ಬಳಿಕ ಪ್ರಕಟವಾಗುವ ಸಾಧ್ಯತೆ ಇದೆ. ಇಡೀ ಕ್ಷೇತ್ರದ ಜನತೆ ಫಲಿತಾಂಶವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.3ಕೆಡಿಬಿಪಿ1-ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನಕ್ಷೆ.3ಕೆಡಿಬಿಪಿ2-
ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್.3ಕೆಡಿಬಿಪಿ3- ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ.