ಕೆಸಿಸಿ ಬ್ಯಾಂಕ್‌ - ಯಾರಿಗೆ ಅಧ್ಯಕ್ಷ-ಉಪಾಧ್ಯಕ್ಷ ಗಾದಿ?

| Published : Nov 18 2023, 01:00 AM IST

ಕೆಸಿಸಿ ಬ್ಯಾಂಕ್‌ - ಯಾರಿಗೆ ಅಧ್ಯಕ್ಷ-ಉಪಾಧ್ಯಕ್ಷ ಗಾದಿ?
Share this Article
  • FB
  • TW
  • Linkdin
  • Email

ಸಾರಾಂಶ

ಅಖಂಡ ಧಾರವಾಡ ಜಿಲ್ಲಾ ವ್ಯಾಪ್ತಿ ಹೊಂದಿರುವ ಇಲ್ಲಿಯ ಕೆಸಿಸಿ ಬ್ಯಾಂಕ್‌ ಆಡಳಿತ ಮಂಡಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ನರಗುಂದ ತಾಲೂಕಿನ ಫಲಿತಾಂಶ ಪ್ರಕಟಗೊಳ್ಳುವುದರೊಂದಿಗೆ ಬ್ಯಾಂಕ್‌ ನೂತನ ಆಡಳಿತ ಮಂಡಳಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಅಖಂಡ ಧಾರವಾಡ ಜಿಲ್ಲಾ ವ್ಯಾಪ್ತಿ ಹೊಂದಿರುವ ಇಲ್ಲಿಯ ಕೆಸಿಸಿ ಬ್ಯಾಂಕ್‌ ಆಡಳಿತ ಮಂಡಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ನರಗುಂದ ತಾಲೂಕಿನ ಫಲಿತಾಂಶ ಪ್ರಕಟಗೊಳ್ಳುವುದರೊಂದಿಗೆ ಬ್ಯಾಂಕ್‌ ನೂತನ ಆಡಳಿತ ಮಂಡಳಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.

ಕಳೆದ ಸೆಪ್ಟೆಂಬರ್‌ 30ರಂದು ಆಡಳಿತ ಮಂಡಳಿಯ 20 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಆದರೆ, ವಿವಿಧ ಕಾರಣಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದರಿಂದ ಆರು ಕ್ಷೇತ್ರಗಳನ್ನು ಹೊರತು ಪಡಿಸಿ 14 ಕ್ಷೇತ್ರಗಳ ಫಲಿತಾಂಶ ಮಾತ್ರ ಪ್ರಕಟಿಸಲಾಗಿತ್ತು. ತದ ನಂತರ ಅ. 13ರಂದು ಐದು ಕ್ಷೇತ್ರಗಳ ಫಲಿತಾಂಶ ನ್ಯಾಯಾಲಯದ ಆದೇಶದಂತೆ ಪ್ರಕಟಿಸಿದ್ದು ನರಗುಂದ ಕ್ಷೇತ್ರದ ಒಂದು ಸ್ಥಾನದ ಫಲಿತಾಂಶ ಮಾತ್ರ ಬಾಕಿ ಇತ್ತು. ಇದೀಗ ಅದೂ ಸಹ ಪ್ರಕಟಗೊಂಡಿದೆ. ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಮತ ಏಣಿಕೆಯಲ್ಲಿ ಮಹಾಬಳೇಶ್ವರ ಗೌಡ ಶಿದ್ದನಗೌಡ ಪಾಟೀಲ 13 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಅವರ ಪ್ರತಿಸ್ಪರ್ಧಿ ಮಲ್ಲನಗೌಡ ತಿಮ್ಮನಗೌಡ ಎಂಟು ಮತಗಳನ್ನು ಪಡೆದು ಸೋಲು ಅನುಭವಿಸಿದರು.

ಯಾರಿಗೆ ಅಧ್ಯಕ್ಷ-ಉಪಾಧ್ಯಕ್ಷ ಗಾದಿ?

ಎಲ್ಲ 20 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನ. 23ರಂದು ನಡೆಸಲು ತೀರ್ಮಾನಿಸಿದ್ದು, ಈ ಸಂಬಂಧ ಆಡಳಿತ ಮಂಡಳಿ ಸದಸ್ಯರಿಗೆ ಅಧಿಕೃತ ಮಾಹಿತಿ ಕೂಡಾ ರವಾನೆಯಾಗಿದೆ.

ಬ್ಯಾಂಕ್‌ ಅವಿಭಜಿತ ಜಿಲ್ಲೆ ವ್ಯಾಪ್ತಿ ಹೊಂದಿರುವುದರಿಂದ ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಯ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ. ಬ್ಯಾಂಕ್‌ನ 20 ಜನ ಸದಸ್ಯರ ಪೈಕಿ 11 ಕಾಂಗ್ರೆಸ್‌ ಬೆಂಬಲಿತರಿದ್ದು, ಒಂಭತ್ತು ಬಿಜೆಪಿ ಬೆಂಬಲಿತರಿದ್ದಾರೆ. ಅಲ್ಲದೇ, ಬ್ಯಾಂಕ್‌ ಕೇಂದ್ರ ಕಚೇರಿ ಹೊಂದಿರುವ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಮತಧಿಕಾರ ಹೊಂದಿದ್ದಾರೆ. ಒಟ್ಟು 21 ಸದಸ್ಯರಲ್ಲಿ ಯಾರು 12 ಸದಸ್ಯರ ಬೆಂಬಲ ಪಡೆಯುತ್ತಾರೆಯೋ ಅವರೇ ಅಧ್ಯಕ್ಷ-ಉಪಾಧ್ಯಕ್ಷರು. 11 ಸದಸ್ಯರ ಬಲಾಬಲ ಹೊಂದಿರುವ ಕಾಂಗ್ರೆಸ್‌ ಬೆಂಬಲಿಗರಿಗೆ ಸಹಕಾರ ಸಂಘಗಳ ಉಪ ನಿಬಂಧಕರು ರಾಜ್ಯದಲ್ಲಿ ಆಡಳಿತ ಹೊಂದಿರುವ ಕಾಂಗ್ರೆಸ್‌ಗೆ ಬಹುತೇಕ ಬೆಂಬಲಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸದ್ಯಕ್ಕೆ 12 ಸಂಖ್ಯಾಬಲ ಹೊಂದಿದಂತಾಗಿದ್ದು ಹೆಚ್ಚಿನ ಅವಕಾಶ ಕಾಂಗ್ರೆಸ್ಸಿಗಿದೆ.

ಯಾರು ಆಕಾಂಕ್ಷಿಗಳು..

ಕಾಂಗ್ರೆಸ್ಸಿನಲ್ಲಿ ಹಾವೇರಿ ಕ್ಷೇತ್ರದ ಕೊಟ್ರೇಶಪ್ಪ ಬಸೇಗಣ್ಣಿ, ಗದಗನ ಶಿವಕುಮಾರ ಪಾಟೀಲ ಮತ್ತು ಧಾರವಾಡದ ಮಂಜುನಾಥ ಗೌಡ ಮುರಳ್ಳಿ ಸದ್ಯಕ್ಕೆ ಅಧ್ಯಕ್ಷ ಗಾದಿಗೆ ಮುಂಚೂಣಿಯಲ್ಲಿದ್ದಾರೆ.

ಕೊಟ್ರೇಶಪ್ಪ ಮತ್ತು ಶಿವಕುಮಾರಗೌಡ ಸಚಿವ ಎಚ್‌.ಕೆ. ಪಾಟೀಲ ಅವರ ಕೃಪಾಕಟಾಕ್ಷವಿದೆ. ಧಾರವಾಡದ ಮಂಜುನಾಥಗೌಡ್ರಗೆ ಸಚಿವ ಸಂತೋಷ ಲಾಡ್‌ ಅವರ ಬೆಂಬಲವಿದೆ. ಹೀಗಾಗಿ, ಈ ಮೂವರಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಸದ್ಯ ಚರ್ಚಿತ ವಿಷಯವಾಗಿದೆ.

ಇತ್ತ ಬಿಜೆಪಿಯ ಸದಸ್ಯರು ಸುಮ್ಮನಿಲ್ಲ. ಈ ಮೊದಲಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಹೊರಕೇರಿ ಪರವಾಗಿ ಸಹಕಾರಿ ಧುರೀಣ ದಿ. ಪಿ.ಎಲ್‌. ಪಾಟೀಲ ಅವರ ಪುತ್ರ ಜಿ.ಪಿ. ಪಾಟೀಲ ಆಡಳಿತದ ಚುಕ್ಕಾಣಿ ಹಿಡಿಯಲು ಸಿದ್ಧರಾಗಿದ್ದಾರೆ. ಗೆಲುವಿಗೆ ಅಗತ್ಯ ಬಲ ಕ್ರೂಡೀಕರಿಸುವ ನಿಟ್ಟಿನಲ್ಲಿ ತಮ್ಮ ರಾಜಕೀಯ ಮುಖಂಡರ ಮೂಲಕ ಪ್ರಯತ್ನ ನಡೆಸುತ್ತಿದ್ದಾರೆ. ಇಬ್ಬರು ಕಾಂಗ್ರೆಸ್‌ ಬೆಂಬಲಿತರನ್ನು ಬಿಜೆಪಿಗೆ ಸೆಳೆದುಕೊಳ್ಳಲು ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇನ್ನು, ಕೆಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚು ಮಹತ್ವ ಇರುವ ಕಾರಣ ಇದಾದ ನಂತರ ಉಪಾಧ್ಯಕ್ಷ ಸ್ಥಾನದ ಪೈಪೋಟಿ ಬಗ್ಗೆ ಸದಸ್ಯರು ಚಿಂತನೆ ಮಾಡುವ ಕಾರಣ ಸದ್ಯಕ್ಕೆ ಈ ವಿಷಯದ ಬಗ್ಗೆ ಅಷ್ಟೊಂದು ಚರ್ಚೆಗಳು ನಡೆಯುತ್ತಿಲ್ಲ.

ಈ 20 ಸದಸ್ಯರು ಯಾವುದೇ ಪಕ್ಷಗಳಿಗೆ ನೇರವಾಗಿ ಸಂಪರ್ಕ ಇರದೇ ಇದ್ದರೂ ವಿವಿಧ ಪಕ್ಷಗಳ ಬೆಂಬಲಿತ ಸದಸ್ಯರು. ಹೀಗಾಗಿ ಕೊನೆ ಕ್ಷಣದಲ್ಲಿ ಯಾವ ಪಕ್ಷಕ್ಕಾದರೂ ಬೆಂಬಲ ಸೂಚಿಸುವುದರಿಂದ ಕೊನೆ ಕ್ಷಣದ ವರೆಗೂ ಯಾರು ಯಾರಿಗೆ ಬೆಂಬಲಿಸುತ್ತಾರೆ ಎಂಬುದು ಸ್ಪಷ್ಟವಾಗಿ ಹೇಳುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ನ. 23ರಂದು ನಡೆಯಲಿರುವ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಯ್ಕೆ ಸದಸ್ಯರ ಬಲಾಬಲದ ಪರೀಕ್ಷೆಯಾಗಿದೆ ಎಂದೇ ಹೇಳಲಾಗುತ್ತಿದೆ.