ಸಾರಾಂಶ
ಮಂಜುನಾಥ ಕೆ.ಎಂ.
ಬಳ್ಳಾರಿ: ಬಿಜೆಪಿಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪಕ್ಷದ ನಾಯಕರಲ್ಲಿ ಪೈಪೋಟಿ ಶುರುವಾಗಿದೆ. ಶೀಘ್ರದಲ್ಲಿಯೇ ಪಕ್ಷದ ನೂತನ ಜಿಲ್ಲಾಧ್ಯಕ್ಷ ನೇಮಕ ಪ್ರಕ್ರಿಯೆ ಬೆಂಗಳೂರಿನಲ್ಲಿ ಜರುಗಲಿದ್ದು, ಈ ಸಂಬಂಧ ಆಕಾಂಕ್ಷಿಗಳು ತೆರೆಮರೆಯ ಪ್ರಯತ್ನ ನಡೆಸಿದ್ದಾರೆ.
ನಗರಕ್ಕೆ ಇತ್ತೀಚೆಗೆ ವೀಕ್ಷಕರಾಗಿ ಆಗಮಿಸಿದ್ದ ಪಕ್ಷದ ಹಿರಿಯ ಮುಖಂಡ ಅರುಣ್ ಶಹಾಪೂರ್ ಪಕ್ಷದ ಮುಖಂಡರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಭೆಯಲ್ಲಿ ಅನೇಕರ ಹೆಸರು ಪ್ರಸ್ತಾಪವಾಗಿವೆ. ವಿಧಾನಪರಿಷತ್ ಸದಸ್ಯ, ವೀರಶೈವ ಸಮುದಾಯದ ಮುಖಂಡ ವೈ.ಎಂ. ಸತೀಶ್, ಹಾಲಿ ಅಧ್ಯಕ್ಷ ಅನಿಲ್ ನಾಯ್ಡು, ಗೋನಾಳ್ ರಾಜಶೇಖರಗೌಡ ಹೆಸರನ್ನು ಅಂತಿಮಗೊಳಿಸಲಾಗಿದೆ.
ಈ ಮೂವರ ಪೈಕಿ ಓರ್ವರಿಗೆ ಪಕ್ಷದ ಜಿಲ್ಲಾ ಸಾರಥ್ಯ ವಹಿಸುವ ಅವಕಾಶ ಸಿಗಲಿದೆ.
ಆಕಾಂಕ್ಷಿಗಳು ಯಾರಿದ್ದರು?: ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಡೇದ್ ಸುರೇಶ್, ಮಾಜಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಐನಾಥ ರೆಡ್ಡಿ, ದರಪ್ಪ ನಾಯಕ, ಪಕ್ಷದ ನಗರ ಘಟಕ ಅಧ್ಯಕ್ಷ ವೆಂಕಟೇಶ್ ಆಕಾಂಕ್ಷಿಗಳಾಗಿದ್ದು, ಸಭೆಯಲ್ಲಿ ಇವರ ಹೆಸರು ಪ್ರಸ್ತಾಪಿಸಲಾಗಿದೆ.
ಗೋನಾಳ್ ರಾಜಶೇಖರ ಗೌಡ ಸಭೆಯಲ್ಲಿ ಗೈರಾಗಿದ್ದು ಇವರ ಪರವಾಗಿ ಬೆಂಬಲಿಗರು ಹೆಸರು ಪ್ರಸ್ತಾಪಿಸಿದ್ದಾರೆ. ಇದೇ ವೇಳೆ ವಿಪ ಸದಸ್ಯ ವೈ.ಎಂ. ಸತೀಶ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಬೇಕು. ಸತೀಶ್ ಕುಟುಂಬ ಹಿನ್ನೆಲೆ, ಸಂಘಟನಾ ಶಕ್ತಿ ಪರಿಗಣಿಸಬೇಕು. ಸಮುದಾಯದ ಮುಖಂಡ, ಚುನಾಯಿತ ಪ್ರತಿನಿಧಿಯಾಗಿರುವುದರಿಂದ ಸಂಘಟನೆಗೆ ಹೆಚ್ಚು ಶಕ್ತಿ ಬರಲಿದೆ ಎಂದು ಸಭೆಯಲ್ಲಿದ್ದ ಕೆಲ ನಾಯಕರು ಸತೀಶ್ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿದ ಅರುಣ್ ಶಹಾಪೂರ್ ಮೂವರ ಹೆಸರನ್ನು ಅಂತಿಮಗೊಳಿಸಿ, ಪಕ್ಷದ ರಾಜ್ಯ ಸಮಿತಿಗೆ ನೀಡಿದ್ದಾರೆ. ಶೀಘ್ರವೇ ನೂತನ ಅಧ್ಯಕ್ಷ ಹೆಸರು ಯಾರೆಂಬುದು ಬಹಿರಂಗಗೊಳ್ಳಲಿದೆ.
ಅನಿಲ್ ವಿರುದ್ಧ ಅಸಮಾಧಾನ?: ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಪಕ್ಷದ ಜವಾಬ್ದಾರಿ ವಹಿಸಿಕೊಂಡು ವರ್ಷವಾಗಿದೆ. ಆದರೆ, ಪಕ್ಷದ ರಾಷ್ಟ್ರ, ರಾಜ್ಯ, ಜಿಲ್ಲಾ ಸಮಿತಿಗಳನ್ನು ನೂತನವಾಗಿ ರಚನೆಗೆ ಮುಂದಾಗಿರುವುದರಿಂದ ಬಳ್ಳಾರಿಯಲ್ಲೂ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಲಿದೆ.
ಪಕ್ಷದ ಮೂಲಗಳ ಪ್ರಕಾರ ಅನಿಲ್ ನಾಯ್ಡು ಪರ ಕೆಲ ನಾಯಕರು ಇದ್ದರೆ, ಹಲವರ ವಿರೋಧವೂ ಇದೆ ಎಂದು ಹೇಳಲಾಗುತ್ತಿದೆ. ವರ್ಷದಲ್ಲಿ ಸಂಘಟನಾ ಸಾಮರ್ಥ್ಯ ನಿರೂಪಿಸುವಲ್ಲಿ ಯಶಸ್ವಿಯಾಗಿಲ್ಲ ಎಂಬ ಆರೋಪವಿದೆ. ಪಕ್ಷದಲ್ಲಿ ಈ ರೀತಿಯ ಬೆಳವಣಿಗೆಗಳು ಸಹಜವಾದರೂ ಪಕ್ಷದ ರಾಜ್ಯ ಸಮಿತಿ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದರ ಮೇಲೆ ಎಲ್ಲವೂ ನಿಂತಿದೆ. ವಿಪ ಸದಸ್ಯ ಸತೀಶ್ ಪಕ್ಷದ ಜಿಲ್ಲಾ ಜವಾಬ್ದಾರಿ ನೀಡಿದರೆ ನಿಭಾಯಿಸುವುದಾಗಿ ಹೇಳಿದ್ದು, ಮೂವರ ಪೈಪೋಟಿಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ದಕ್ಕುವುದು ಯಾರಿಗೆ ಎಂಬ ಕೌತುಕವಿದೆ.