ದೇಶ ಮುನ್ನಡೆಸಲು ಕಾಂಗ್ರೆಸ್ಸಲ್ಲಿ ಯಾರಿದ್ದಾರೆ?

| Published : Apr 29 2024, 01:35 AM IST

ಸಾರಾಂಶ

ಒಂದು ಕಡೆ ಬಿಜೆಪಿ ದೇಶ ಮುನ್ನಡೆಸುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್ ದೇಶ ಹಿಂದಕ್ಕೆ ಎಳೆಯುವ ಕೆಲಸ ಮಾಡುತ್ತಿದೆ. ವಿಕಸಿತ ಭಾರತಕ್ಕಾಗಿ ದಣಿವರಿಯದೆ 24X7ನಂತೆ 2047ರ ಗುರಿ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್‌ ದೇಶ ಒಡೆದು ಹಾಕುವ, ಅಭಿವೃದ್ಧಿಗೆ ತಡೆಯೊಡ್ಡುವ ಕೆಲಸ ಮಾಡಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಒಂದು ಕಡೆ ಬಿಜೆಪಿ ದೇಶ ಮುನ್ನಡೆಸುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್ ದೇಶ ಹಿಂದಕ್ಕೆ ಎಳೆಯುವ ಕೆಲಸ ಮಾಡುತ್ತಿದೆ. ವಿಕಸಿತ ಭಾರತಕ್ಕಾಗಿ ದಣಿವರಿಯದೆ 24X7ನಂತೆ 2047ರ ಗುರಿ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್‌ ದೇಶ ಒಡೆದು ಹಾಕುವ, ಅಭಿವೃದ್ಧಿಗೆ ತಡೆಯೊಡ್ಡುವ ಕೆಲಸ ಮಾಡಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ನಗರದ ಹೈಸ್ಕೂಲ್ ಮೈದಾನದಲ್ಲಿ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಹಾವೇರಿ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡಿದ ಅವರು, ದೇಶದ ಏಕತೆ ಒಡೆಯಲು, ರಾಷ್ಟ್ರದ ಅಭಿವೃದ್ಧಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ಹೊರಟಿದೆ ಎಂದರು.

ಕಾಂಗ್ರೆಸ್ಸಿನವರ ಬಳಿ ದೇಶ ಮುನ್ನಡೆಸುವ ನಾಯಕರ ಪೈಕಿ ಯಾರ ಹೆಸರಾದರೂ ಇದೆಯಾ? ಹೆಸರೇ ಇಲ್ಲದ ನೀವುಗಳು ದೇಶ ಮುನ್ನಡೆಸುತ್ತೀರಾ? ಕಾಂಗ್ರೆಸ್ ತನ್ನ ಐಎನ್‌ಡಿಐ ಕೂಟದ ಮಿತ್ರ ಪಕ್ಷಗಳನ್ನು ಸಂತೋಷಪಡಿಸಲು ಐದು ವರ್ಷದಲ್ಲಿ ಪ್ರತಿ ವರ್ಷ ಒದೊಂದು ಪರ್ಷದವರಿಗೆ ಪ್ರಧಾನಿ ಮಾಡುವ ಆಸೆ ತೋರಿಸಿ, ನಂಬಿಸಿದೆ. ಇಂತಹ ಕಾಂಗ್ರೆಸ್ಸಿಗೆ ಮತದಾರರು ಮತ ಹಾಕಿ, ನಿಮ್ಮ ಅಮೂಲ್ಯ ಮತ ವ್ಯರ್ಥ ಮಾಡಬೇಡಿ. ನಿಮ್ಮ ಮಕ್ಕಳ ಭವಿಷ್ಯ, ರಾಷ್ಟ್ರದ ಸುರಕ್ಷತೆ, ಐಕ್ಯತೆಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಭಾರತವನ್ನು 2047ಕ್ಕೆ ವಿಶ್ವದ ನಂಬರ್ ಒನ್ ರಾಷ್ಟ್ರವಾಗಿ ಮಾಡೋಣ. ರಾಜ್ಯದಲ್ಲಿ ಹಿಂದೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮಾಡಿದ್ದ ಅಭಿವೃದ್ಧಿ ಕಾರ್ಯ ಕೆಡಿಸುವ ಕೆಲಸವನ್ನು ಈಗಿನ ಕಾಂಗ್ರೆಸ್ ಸರ್ಕಾರ ಮಾಡಲು ಹೊರಟಿದೆ. ಈಗ ಕಾಂಗ್ರೆಸ್ಸಿನಲ್ಲೇ ಅಧಿಕಾರಕ್ಕಾಗಿ ಪರಸ್ಪರ ಕಿತ್ತಾಟ ನಡೆಯುತ್ತಿದೆ. ರಾಜ್ಯ ಅಭಿವೃದ್ಧಿಪಡಿಸಲಾಗದೇ, ಯುವಕರು, ಜನಸಾಮಾನ್ಯರು, ವಿದ್ಯಾವಂತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಎರಡೂವರೆ ವರ್ಷ ನೀರು, ಎರಡೂ ವರ್ಷ ನಾನು ಎಂಬುದಾಗಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ಸಿಗರು ಕಿತ್ತಾಡುತ್ತಿದ್ದಾರೆ ಎಂದು ಟೀಕಿಸಿದರು.

ದೇಶ‍ನ್ನು 5 ವರ್ಷ ಕಾಲ ಯಾರಿಗೆ ನೀಡಬೇಕೆಂಬ ಬಗ್ಗೆ ಜನ ಯೋಚಿಸುತ್ತಾರೆ. ಯಾರೋ ಕೇಳಿದರೆಂದು ಅಧಿಕಾರ ಕೊಡುವುದಿಲ್ಲ. ಎಲ್ಲಾ ಮಾರ್ಗ ನೋಡಿ, ಮತ ಚಲಾಯಿಸುತ್ತಾರೆ. ಜನರಿಗೆ ತಿಳಿಸಲು ಕಾಂಗ್ರೆಸ್ಸಿನವರ ಬಳಿ ಏನಿದೆ? ಹೀಗೆ ಕತ್ತಲಲ್ಲಿ ಏನೇ ಮಾಡಿದರೂ ಜನರು ಒಪ್ಪಲು ಸಾಧ್ಯವಿಲ್ಲ. ವರ್ಷಕ್ಕೊಬ್ಬ ಪ್ರಧಾನಿಯಾದರೆ ದೇಶದ ಅಭಿವೃದ್ಧಿ ಯಾವ ರೀತಿ ಆದೀತು? ನಿಮ್ಮ ಮಕ್ಕಳ ಭವಿಷ್ಯ, ರಾಜ್ಯ, ರಾಷ್ಟ್ರದ ಹಿತ ದೃಷ್ಟಿಯಿಂದ ಮತ ಚಲಾಯಿಸಿ, ದೇಶದ ಅಭಿವೃದ್ಧಿಗೆ ಬಿಜೆಪಿ ಜೊತೆ ಕೈಜೋಡಿಸಿ ಎಂದು ತಿಳಿಸಿದರು.

ದೆಹಲಿಯಲ್ಲೇ ಕಾಂಗ್ರೆಸ್ಸಿಗೆ ಖಾತೆ ತೆಗೆಯುವ ಸಂಭವ ಇಲ್ಲದಂತಾಗಿದೆ. ಅದೇ ರೀತಿ ಕರ್ನಾಟಕದ ಜನತೆಯೂ ಕಾಂಗ್ರೆಸ್ಸಿನ ಪಾಪಕ್ಕೆ ತಕ್ಕ ಶಿಕ್ಷೆ ನೀಡಲಿದ್ದಾರೆ. ಕಾಂಗ್ರೆಸ್ ನಾಯಕರ ಮಧ್ಯೆ ಅಧಿಕಾರಕ್ಕಾಗಿ ನಡೆದಿರುವ ಗೃಹ ಯುದ್ಧವೂ ಬೀದಿಗೆ ಬರಲಿದೆ. ಒಬ್ಬರ ತಲೆಯ ಮೇಲೆ ಮತ್ತೊಬ್ಬರು ಮುಗಿ ಬೀಳುತ್ತಿದ್ದಾರೆ. ಹಿಂದೆಲ್ಲಾ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳು ಸರಿಯಲ್ಲವೆಂದು ಹೇಳುತ್ತಿದ್ದರು. ಸುಪ್ರೀಂ ಕೋರ್ಟ್‌ ಕಾಂಗ್ರೆಸ್ ಕಪಾಳಕ್ಕೆ ಹೊಡೆದಂತೆ ಚಾಟಿ ಬೀಸಿದೆ. ಈವರೆಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಇವಿಎಂ ಬಗ್ಗೆ ಸುಳ್ಳು ಹೇಳಿ, ಕೆಲಸ ಮಾಡಿಸಿಕೊಳ್ಳುತ್ತಿದ್ದ ಕಾಂಗ್ರೆಸ್ಸಿನ ನಾಯಕರಿಗೆ ಈಗ ನೆಪ ಹೇಳಲು ಏನೂ ಇಲ್ಲದಂತಾಗಿದೆ ಎಂದು ನರೇಂದ್ರ ಮೋದಿ ವ್ಯಂಗ್ಯವಾಡಿದರು.

ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಹಾವೇರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಚಿತ್ರದುರ್ಗ ಅಭ್ಯರ್ಥಿ ಗೋವಿಂದ ಕಾರಜೋಳ, ಸಂಸದರಾದ ಜಿ.ಎಂ.ಸಿದ್ದೇಶ್ವರ, ಮಂಡ್ಯ ಸಂಸದೆ ಸುಮಲತಾ, ಹಾವೇರಿಯ ಶಿವಕುಮಾರ ಉದಾಸಿ, ಶಾಸಕ ಬಿ.ಪಿ.ಹರೀಶಗೌಡ, ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ, ಬಿ.ಸಿ. ಪಾಟೀಲ, ಎಂ.ಪಿ. ರೇಣುಕಾಚಾರ್ಯ, ಜಿ. ಕರುಣಾಕರ ರೆಡ್ಡಿ, ವಿಪ ವಿಪಕ್ಷ ಮುಖ್ಯ ಸಚೇತಕ ಎನ್‌. ರವಿಕುಮಾರ, ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ಎಸ್.ವಿ.ರಾಮಚಂದ್ರಪ್ಪ, ಎಚ್.ಪಿ.ರಾಜೇಶ, ವಿಪ ಸದಸ್ಯರಾದ ಭಾರತಿ ಶೆಟ್ಟಿ, ನವೀನ, ಅರುಣಕುಮಾರ, ಜೆಡಿಎಸ್ ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಹಿರಿಯ ಮುಖಂಡ ಆನಂದಪ್ಪ ಮಾಯಕೊಂಡ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಧನಂಜಯ ಕಡ್ಲೇಬಾಳ್, ಜಿ.ಎಸ್‌.ಅನಿತಕುಮಾರ, ಬಿ.ಜಿ.ಅಜಯಕುಮಾರ, ಎಂ.ಬಸವರಾಜ ನಾಯ್ಕ, ಮಾಡಾಳ ಮಲ್ಲಿಕಾರ್ಜುನ, ಎಸ್.ಎಂ.ವೀರೇಶ ಹನಗವಾಡಿ, ಬಿ.ಎಸ್.ಜಗದೀಶ, ಲೋಕಿಕೆರೆ ನಾಗರಾಜ, ಅನಿಲಕುಮಾರ ನಾಯ್ಕ ಇತರರು ಇದ್ದರು.

ನಾನು ಎಂದಿಗೂ ಸುಸ್ತಾಗಲ್ಲ, ಯಾರಿಗೂ ಬಗ್ಗಲ್ಲ, ಜಗ್ಗಲ್ಲ

ರಾಜ್ಯದಲ್ಲಿ ಏ.26ರ ನಂತರ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ನಡುಕ ಶುರುವಾಗಿದ್ದು, ಮೊದಲ ಹಂತದಲ್ಲೇ ಕರ್ನಾಟಕದ ಮಾತೆಯರು, ಮಹಿಳೆಯರು, ಯುವ ಜನರು ಚಮತ್ಕಾರವನ್ನೇ ಮಾಡಿದ್ದಾರೆ. ಮೇ 7ರಂದು ಇದೇ ರೀತಿಯಾದರೆ ಏನು ಮಾಡುವುದೆಂದು ಕಾಂಗ್ರೆಸ್ಸಿಗರು ಚಿಂತೆಗೊಳಗಾಗಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ನಗರದಲ್ಲಿ ಹೈಸ್ಕೂಲ್ ಮೈದಾನದಲ್ಲಿ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದಿನ ದಿನಗಳೇ ಬೇರೆಯಾಗಿದ್ದು, 2024ರ ದಿನಗಳೇ ಬೇರೆ. ಕಳೆದೊಂದು ದಶಕದಲ್ಲಿ ದೇಶದ ಜನತೆ ಮೋದಿಯನ್ನು ಸಾಕಷ್ಟು ತಿದ್ದಿದ್ದಾರೆ. ಎಲ್ಲಾ ಕೆಲಸ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. 10 ವರ್ಷ ಕಠಿಣ ಕಾಲದಿಂದ ಹೊರ ಬಂದು ಈಗ ಮೋದಿ ದೇಶದ ಜನತೆಗೆ ಎಲ್ಲವನ್ನೂ ನೀಡಲು ಮುಂದಾಗಿದ್ದಾರೆ. ಮೋದಿಗೆ ಮಹಿಳೆಯರು, ಸಹೋದರಿಯರು ನನ್ನ ಕೋಟೆ ಇದ್ದಂತೆ ಎಂದು ತಿಳಿಸಿದರು.

ಏಳು ದಶಕಗಳ ಕಾಂಗ್ರೆಸ್ ಆಳ್ವಿಕೆಯಲ್ಲಿ ದೇಶ ಕೆಟ್ಟು ಹೋಗಿತ್ತು. ನಂತರ ದೇಶದ ಜನತೆ ನನಗೆ ಸೇವೆ ಮಾಡಲು ಆಯ್ಕೆ ಮಾಡಿದರು. ಇದು ನನ್ನ ಪುಣ್ಯವಾಗಿದೆ. ಭಗವಂತನೇ ನಿಮ್ಮ ಸೇವೆಗಾಗಿ ನನ್ನನ್ನು ಕಳಿಸಿದ್ದಾನೆ. ನಿಮ್ಮ ಸೇವೆ ಸೇವೆಗೆ ನೀವೇ ನನ್ನನ್ನು ಆಯ್ಕೆ ಮಾಡಿಕೊಂಡಿದ್ದೀರಿ. ನನ್ನ ಬಳಿ ನಿಮಗೆ ಕೊಡುವುದಕ್ಕೆ ಏನೂ ಇಲ್ಲ. ನನ್ನ ಬಳಿ ಇರುವುದು ಸಂವೇದನೆ, ಸ್ಪಂದನೆ, ಮೌನ ಮಾತ್ರ. ನಾನು ಸದಾ ತಲೆ ಬಾಗಿಸಿ ನಿಮಗೆ ನಮಸ್ಕರಿಸುವೆ. ನಮ್ರತೆಯಿಂದ ಶಿರಬಾಗಿ ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಹೇಳಿದರು.

ನಾನು ಎಂದಿಗೂ ಸುಸ್ತಾಗುವುದಿಲ್ಲ. ನಾನು ಯಾರಿಗೂ ಬಗ್ಗಲ್ಲ, ಯಾರಿಗೂ ಜಗ್ಗಲ್ಲ. ನಿಮಗಾಗಿ ನಾನು ಸೇವೆ ಮಾಡುವೆ. ಇದು ನಿಮಗೆಲ್ಲರಿಗೂ ಮೋದಿಯ ಗ್ಯಾರಂಟಿ. ದೇಶದ ಎಲ್ಲಿಯೇ ಹೋದರೂ ಕೇವಲ ಮೋದಿ ಮತ್ತೊಮ್ಮೆ ಎಂಬ ಕೂಗು ಕೇಳಿ ಬರುತ್ತಿದೆ. ದಾವಣಗೆರೆ ಮಹತ್ವವು ಈ ಚುನಾವಣೆಯೊಂದಿಗೆ ಮತ್ತಷ್ಟು ಹೆಚ್ಚಾಗಲಿದೆ. ದೇಶದ ಜನತಾ ಜನಾರ್ದನನ ಜೊತೆಗೆ ರಾಜಕೀಯ ಮಾಡುವುದು ಬೇಡ. ಶ್ರೀ ಬಸವೇಶ್ವರರ ಈ ನಾಡಿನಲ್ಲಿ ಮಾರಕ ನಿರ್ಣಯ ಕೈಗೊಂಡು ಕಾಂಗ್ರೆಸ್ ತಪ್ಪು ಮಾಡುತ್ತಿದೆ. ವೇಗದ ಅಭಿವೃದ್ಧಿ ಇಂತಹವರಿಂದ ಸಾಧ್ಯವಿಲ್ಲ. ದೇಶದ ಅಭಿವೃದ್ಧಿಯನ್ನೇ ಕೆಡಿಸುವ ಇಂತಹವರಿಂದ ದೇಶಕ್ಕೆ ಭವಿಷ್ಯವೂ ಇಲ್ಲ, ಅಭಿವೃದ್ಧಿಯೂ ಆಗುವುದಿಲ್ಲ ಎಂದು ತಿಳಿಸಿದರು.

ಹಿಂದೆಲ್ಲಾ ಕಾಂಗ್ರೆಸ್ ಆಳ್ವಿಕೆಯಲ್ಲಿ 1 ರು.ನೀಡಿದರೆ, ಫಲಾನುಭವಿಗೆ 15 ಪೈಸೆ ಮಾತ್ರ ತಲುಪುತ್ತಿತ್ತು. ಉಳಿದ 85 ಭಾಗ ಎಲ್ಲಿಗೆ ಹೋಗುತ್ತಿತ್ತು? ನೀವೆಲ್ಲರೂ ಒಮ್ಮೆ ಯೋಚಿಸಿ. ಹುಟ್ಟದೇ ಇರುವ, ಸತ್ತ ವ್ಯಕ್ತಿಗಳು, ವಿಧವೆಯರ ಹೆಸರಿನಲ್ಲಿ 10 ಕೋಟಿಗೂ ಹೆಚ್ಚು ನಕಲಿ ದಾಖಲೆ ಸೃಷ್ಟಿಸಿ, ಕಾಂಗ್ರೆಸ್ಸಿಗರು ಹಣ ಲೂಟಿ ಮಾಡುತ್ತಿದ್ದರು. ಹುಟ್ಟದಿರುವ ವ್ಯಕ್ತಿಗಳ ಹೆಸರಿನಲ್ಲಿ ಕಾಂಗ್ರೆಸ್ ದೇಶ ಕೊಳ್ಳೆ ಹೊಡೆದಿದೆ. ಅಷ್ಟರ ಮಟ್ಟಿಗೆ ಭ್ರಷ್ಟಾಚಾರ ಎಸಗಿದೆ. ಆದರೆ, ನಾವು ಆಧಾರ್ ಜೋಡಣೆ ಮಾಡಿ, ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗೆ ಖಾತೆಗೆ ಹಣ ವರ್ಗಾವಣೆಯಾಗುವಂತೆ ಮಾಡಿದ್ದೇವೆ. ದಲಿತರು, ಹಿಂದುಳಿದವರು, ಮಹಿಳೆಯರ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದರು.