ಕನ್ನಡಪ್ರಭ ವಾರ್ತೆ ಅಥಣಿ ಅಥಣಿ ಪುರಸಭೆ ಇನ್ನೇನು ನಗರಸಭೆಯಾಗಿ ಮೇಲ್ದರ್ಜೆಗೇರುವ ಹಂತದಲ್ಲಿದೆ. ಆದರೆ, ಪುರಸಭೆ ಆಡಳಿತ ಮಂಡಳಿಯಿಂದ ಜನರಿಗೆ ಸಮಪರ್ಕ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಅಥಣಿ ಪಟ್ಟಣಕ್ಕೆ ತರಕಾರಿ, ಹಣ್ಣು ಹಂಪಲುಗಳ ಮಾರಾಟಕ್ಕೆ ಗ್ರಾಮೀಣ ಪ್ರದೇಶದಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ, ಶುಭ ಸಮಾರಂಭಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಪಟ್ಟಣಕ್ಕೆ ನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ.

ಅಣ್ಣಾಸಾಹೇಬ ತೆಲಸಂಗ

ಕನ್ನಡಪ್ರಭ ವಾರ್ತೆ ಅಥಣಿ

ಅಥಣಿ ಪುರಸಭೆ ಇನ್ನೇನು ನಗರಸಭೆಯಾಗಿ ಮೇಲ್ದರ್ಜೆಗೇರುವ ಹಂತದಲ್ಲಿದೆ. ಆದರೆ, ಪುರಸಭೆ ಆಡಳಿತ ಮಂಡಳಿಯಿಂದ ಜನರಿಗೆ ಸಮಪರ್ಕ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಅಥಣಿ ಪಟ್ಟಣಕ್ಕೆ ತರಕಾರಿ, ಹಣ್ಣು ಹಂಪಲುಗಳ ಮಾರಾಟಕ್ಕೆ ಗ್ರಾಮೀಣ ಪ್ರದೇಶದಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ, ಶುಭ ಸಮಾರಂಭಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಪಟ್ಟಣಕ್ಕೆ ನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಪಟ್ಟಣದ ತರಕಾರಿ ಪೇಟೆಯಲ್ಲಿ ಮತ್ತು ಮುಖ್ಯ ಬೀದಿ ಸೇರಿದಂತೆ ಆಯ್ದ ಸ್ಥಳಗಳಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಸಾಧ್ಯವಾಗಿಲ್ಲ. ಅಥಣಿ ಪುರಸಭೆಯಲ್ಲಿ ಮಹಿಳೆಯರೇ ಆಡಳಿತ ನಡೆಸುತ್ತಿದ್ದರೂ ಮಹಿಳೆಯರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೇ ಅಗತ್ಯವಾಗಿ ಶೌಚಾಲಯಗಳನ್ನು ನಿರ್ಮಿಸದಿರುವುದಕ್ಕೆ ಆಕ್ರೋಶಕ್ಕೆ ಕಾರಣವಾಗಿದೆ.

ಪುರಸಭೆಯ ಅಧ್ಯಕ್ಷ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ ನೇತೃತ್ವದ 27 ವಾರ್ಡ್ ಸದಸ್ಯ ಬಲ ಹೊಂದಿರುವ ಪುರಸಭೆ ಆಡಳಿತದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಪುರಸಭೆ ವಾಣಿಜ್ಯ ಮಳಿಗೆಗಳಲ್ಲೂ ಅವ್ಯವಸ್ಥೆ:

ಪುರಸಭೆ ಆಡಳಿತದ ಆದಾಯದ ಮೂಲವಾಗಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ, ತರಕಾರಿ ಮಾರುಕಟ್ಟೆಯಲ್ಲಿ, ತೋಟಗಾರಿಕೆ ಇಲಾಖೆ ಮುಂಭಾಗದಲ್ಲಿ ಅನೇಕ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದು, ಈ ಮಳಿಗೆಯ ವ್ಯಾಪಾರಸ್ಥರಿಗೆ, ಇಲ್ಲಿ ಬರುವ ಸಾರ್ವಜನಿಕರಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮತ್ತು ಮೂಲಭೂತ ಸೌಲಭ್ಯವಾದ ಶೌಚಾಲಯ ನಿರ್ಮಾಣ ಮಾಡದಿರುವುದು ಸಾರ್ವಜನಿಕರ ಬಹಳಷ್ಟು ಅನಾನುಕೂಲವಾಗಿದೆ. ಬೇರೆ ಬೇರೆ ಊರುಗಳಿಂದ ಆಗಮಿಸುವ ಪ್ರಯಾಣಿಕರು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಾರಿಗೆ ಬಸ್ ಗಳಿಂದ ಹಿಡಿದು ನಂತರ ಶೌಚಕ್ಕೆ ಹೋಗಲು ಪರದಾಡುತ್ತಾರೆ. ಪುರಸಭೆಯ ನಿರ್ಲಕ್ಷ್ಯದಿಂದಾಗಿ ಪಟ್ಟಣದಲ್ಲಿ ಮಹಿಳೆಯರು ನರಕಯಾತನೆ ಅನುಭವಿಸುವಂತಾಗಿದೆ. ಆಡಳಿತದಲ್ಲಿರುವ ಮಹಿಳಾ ಸದಸ್ಯರೇ ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೂಡಲೇ ಸುಲಭ ಶೌಚಾಲಯಗಳನ್ನು ನಿರ್ಮಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ನಿರ್ವಹಣೆ ಇಲ್ಲದೆ ಪಾಳು ಬಿದ್ದ ಶೌಚಾಲಯ:

ಪುರಸಭೆ ವ್ಯಾಪ್ತಿಯ ಅನೇಕ ಬಡಾವಣೆಗಳಲ್ಲಿ ವಿವಿಧ ಹಣಕಾಸು ಯೋಜನೆಯಡಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯಗಳು ಆಡಳಿತದ ನಿರ್ಲಕ್ಷಕ್ಕೆ ಒಳಗಾಗಿದ್ದು, ಅನೇಕ ವರ್ಷಗಳಿಂದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಈ ಶೌಚಾಲಯಗಳಲ್ಲಿ ಕಸ ಕಡ್ಡಿ ತುಂಬಿಕೊಂಡಿದ್ದು, ಹಂದಿ, ಬೀದಿ ನಾಯಿಗಳ ವಾಸಸ್ಥಾನವಾಗಿದೆ. ಸುತ್ತಲೂ ಗಿಡಗಂಟಿಗಳು ಬೆಳೆದುಕೊಂಡಿದ್ದು, ಸುತ್ತಮುತ್ತಲಿನ ನಿವಾಸಿಗಳು ಮತ್ತು ವ್ಯಾಪಾರಸ್ಥರು ಇದೇ ಸ್ಥಳಗಳಲ್ಲಿ ಕಸದ ರಾಶಿಯನ್ನು ಹಾಕುತ್ತಿದ್ದಾರೆ.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹತ್ತಿರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯಕ್ಕೆ ಅನೇಕ ದಿನಗಳಿಂದ ಬೀಗ ಬಿದ್ದಿದೆ. ಇದು ಆರಂಭಗೊಳ್ಳುವ ಮುನ್ನವೇ ಹಾಳಾಗುತ್ತಿದೆ. ಈ ಶೌಚಾಲಯವನ್ನು ಕೂಡಲೇ ಜನರ ಬಳಕೆಗೆ ಅನುಕೂಲ ಕಲ್ಪಿಸಬೇಕೆಂಬುದು ಸಾರ್ವಜನಿಕರ ಆಗ್ರಹ.

-----

ಕೋಟ್‌

ಪುರಸಭೆ ಆಡಳಿತ ಕೇವಲ ಆದಾಯದ ಮೂಲವನ್ನು ನೋಡಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಬಾರದು. ಮಳಿಗೆಗಳಿಗೆ ಬರುವ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ಕೂಡಲೇ ನಿರ್ಮಿಸುವ ಅಗತ್ಯವಿದೆ.

- ಪ್ರಶಾಂತ ತೋಡಕರ, ಅಧ್ಯಕ್ಷರು ಅಥಣಿ ಜಿಲ್ಲಾ ಹೋರಾಟ ಸಮಿತಿ.

------

ಕೋಟ್‌

ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ಸುಲಭ ಶೌಚಾಲಯಗಳನ್ನು ನಿರ್ಮಿಸಲು ಪುರಸಭೆ ಆಡಳಿತ ಸಿದ್ಧವಿದೆ, ಆದರೆ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ತಂಟೆ ಮಾಡುತ್ತಿರುವುದರಿಂದ ಅದನ್ನು ಮುಂದೂಡುತ್ತಾ ಬರಲಾಗಿದೆ. ಮುಂಬರುವ ದಿನಗಳಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆ ಆಡಳಿತದಿಂದ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತೇವೆ.

- ಶಿವಲೀಲಾ ಬುಟಾಳಿ, ಅಧ್ಯಕ್ಷರು ಪುರಸಭೆ, ಅಥಣಿ.

------

ಕೋಟ್‌

ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ, ಮತ್ತು ಬೆಣ್ಣೆಪೇಟೆಯಲ್ಲಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸಲು ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಿ ಮಹಿಳೆಯರ ಶೌಚಾಲಯ ನಿರ್ಮಿಸಲಾಗುವುದು. ಸಾರ್ವಜನಿಕರು ಸ್ವಚ್ಛತೆ ಹಾಗೂ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆಗೆ ಸಹಕಾರ ನೀಡಬೇಕು.

- ಅಶೋಕ ಗುಡಿಮನಿ, ಪುರಸಭೆ ಮುಖ್ಯಾಧಿಕಾರಿ, ಅಥಣಿ.

ಫೋಟೋ ಶೀರ್ಷಿಕೆ: ಅಥಣಿ ಪುರಸಭೆಯ ಕಾರ್ಯಾಲಯದ ದೃಶ್ಯ