ಗಣೇಶ್ ತಮ್ಮಡಿಹಳ್ಳಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗಜಿಲ್ಲಾ ಆಸ್ಪತ್ರೆ ಮೆಗ್ಗಾನ್‌ನಲ್ಲಿ ವೈದ್ಯಾಧಿಕಾರಿಗಳ ಮಟ್ಟಿಗೆ ಎಲ್ಲವೂ ಸರಿ ಇದೆ. ಆದರೆ, ರೋಗಿಗಳ ಪಾಲಿಗೆ ಯಾವುದೂ ಇಲ್ಲ!.
ಶಿವಮೊಗ್ಗ ಸೇರಿದಂತೆ ಹೊರ ಜಿಲ್ಲೆಯಿಂದಲೂ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಪ್ರತಿನಿತ್ಯ 2000ಕ್ಕೂ ಹೆಚ್ಚು ಒಳ ಹಾಗೂ ಹೊರ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಲ್ಲಿಗೆ ಹೆಚ್ಚಿನ ಪಾಲು ಬಡವರ್ಗದ ಜನರು ಬರುತ್ತಿದ್ದಾರೆ. ರೋಗಿಗಳ ಚಿಕಿತ್ಸೆಗಾಗಿ ಇರುವ ದೊಡ್ಡಾಸ್ಪತ್ರೆಯ ಸ್ಥಿತಿಯೇ ತೀವ್ರ ಹದಗೆಟ್ಟಿದೆ. ಮೆಗ್ಗಾನ್ ಆಸ್ಪತ್ರೆಗೆ ಸರ್ಕಾರ ಕೋಟಿ ಕೋಟಿ ಹಣ ವ್ಯಹಿಸಿ ಎಲ್ಲ ಸೌಲಭ್ಯ ಕೊಟ್ಟರೂ ಇದ್ಯಾವುದೂ ಇಲ್ಲಿನ ರೋಗಿಗಳಿಗೆ ಸಿಗುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ರಕ್ತ ಪರೀಕ್ಷೆ, ಸ್ಕ್ಯಾನಿಂಗ್, ಔಷಧಿ ಹೀಗೆ ಎಲ್ಲವನ್ನೂ ಹಣ ಕೊಟ್ಟು ಹೊರಗೆ ಮಾಡಿಸುವ ಅನಿವಾರ್ಯತೆಗೆ ರೋಗಿಗಳು ಒಳಗಾಗಿದ್ದಾರೆ.
ಈ ಮಧ್ಯೆ ಆಸ್ಪತ್ರೆಯ ಬಹಳಷ್ಟು ಸಿಬ್ಬಂದಿ ವರ್ತನೆಯೂ ರೋಗಿ ಹಾಗೂ ಅವರೊಂದಿಗೆ ಬರುವ ಸಂಬಂಧಿಕರ ತೀವ್ರ ಅಸಹನೆಗೆ ಕಾರಣವಾಗಿದೆ. ಬಡವರ ಆರೋಗ್ಯಕರ ಬದುಕಿಗೆ ಆಸರೆಯಾಗಬೇಕಿದ್ದ ಆಸ್ಪತ್ರೆ ಹಣ ಮಾಡುವವರ ತಾಣವಾಗಿ ಮಾರ್ಪಟ್ಟಿದೆ ಎಂಬ ಆರೋಪವೂ ಮುನ್ನೆಲೆಗೆ ಬಂದಿದೆ.
ಸರ್ಕಾರಿ ಆಸ್ಪತ್ರೆಗೆ ಖಾಸಗಿ ಮೆಡಿಸಿನ್: ‘ಎಂಟು ದಿನಗಳ ಹಿಂದೆ ಇಲ್ಲಿಗೆ ಬಂದಿದ್ದೇವೆ. ಬಿಪಿಎಲ್ ಕಾರ್ಡ್ ಇದ್ದರೂ ಮೊದಲು ನಾಲ್ಕು ದಿನ ಎಲ್ಲದಕ್ಕೂ ಬಿಲ್ ಪಾವತಿ ಮಾಡಿದ್ದೆ. ಮೊದಲ ದಿನ ಎರಡು ರಕ್ತ ಪರೀಕ್ಷೆಗೆ ಖಾಸಗಿ ಲ್ಯಾಬ್‌ಗೆ ಬರೆದುಕೊಟ್ಟಿದ್ದರು. ಅಲ್ಲಿ ಸಿಕ್ಕಾಪಟ್ಟೆ ದುಬಾರಿ. 3,000 ರು. ಖರ್ಚು ಆಗಿತ್ತು. ಇಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ. ಇಲ್ಲ ಎಂದರೆ ಪರದಾಡಬೇಕಾಗುತ್ತದೆ. ನಾವು ಬಡವರು, ಹಣ ಕೊಟ್ಟು ಚಿಕಿತ್ಸೆ ಪಡೆಯುವುದಿದ್ದರೆ ಸರ್ಕಾರಿ ಆಸ್ಪತ್ರೆಗೆ ಏಕೆ ಬರಬೇಕು?’ ಎಂದು ರೋಗಿ ಕರೆತಂದಿದ್ದ ಸಂಬಂಧಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಗೌರವವನ್ನೂ ನೀಡಲ್ಲ: ಅಕ್ಕನಿಗೆ ಹರಿಗೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದೇವು. ಹೊರಗಡೆ ಸ್ಕ್ಯಾನಿಂಗ್‌ಗೆ ಬರೆದುಕೊಟ್ಟರು. ಬಳಿಕ ಮೆಡಿಸಿನ್ ಇಲ್ಲಿ ಸಿಗಲ್ಲ , ಬೇರೆಕಡೆಯಿಂದ ತಂದು ಕೊಡಿ ಎಂದು ಬರೆದುಕೊಟ್ಟರು. ರಾತ್ರಿ 8 ಗಂಟೆ ನಂತರ ರಕ್ತ ಪರೀಕ್ಷೆಗೆ ಕೊಟ್ಟರು. ಹೆರಿಗೆ ಆಸ್ಪತ್ರೆಗೂ ಲ್ಯಾಬ್‌ಗೂ ದೂರವಾಗುತ್ತದೆ. ಅದನ್ನು ಆಸ್ಪತ್ರೆಯ ಲ್ಯಾಬ್‌ಗೆ ಹೋಗಿ ಕೊಟ್ಟರೆ ಇದಕ್ಕೆ ವೈದ್ಯರ ಸೀಲ್ ಇಲ್ಲ, ಅದಿಲ್ಲ, ಇದಿಲ್ಲ ಎಂದು ಅನೇಕ ಸಲ ಅಲೆದಾಡಿಸಿದರು. ಕೊನೆಗೆ ಸಿಸ್ಟಮ್‌ನಲ್ಲಿ ನೋಂದಣಿ ಆಗಿಲ್ಲ, ಹಣ ಕಟ್ಟಿ ಎಂದು ಹೇಳಿದರು. ನಮ್ಮ ರೋಗಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಯಾವುದಕ್ಕೂ ಪ್ರತಿರೋಧ ತೋರದೇ ಸುಮ್ಮನಿದ್ದೇವೆ ಎಂದು ಗಿರೀಶ್ ಎಂಬುವರು ಅಳಲು ತೋಡಿಕೊಂಡರು.‘ವಾರದ ಹಿಂದೆ ಹೆಂಡತಿ ಕರೆದುಕೊಂಡು ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದೆ. ಕೆಲ ದಿನ ಬಿಟ್ಟು ಮತ್ತೊಮ್ಮೆ ಬರಲು ವೈದ್ಯರು ಹೇಳಿದ್ದರು. ತಪಾಸಣೆ ಬಳಿಕ ಮಾತ್ರೆಗಳನ್ನು ನೀಡಿದ್ದಾರೆ. ಬೆಳಗ್ಗೆಯಿಂದ ಮೂರು ಬಾರಿ ಔಷಧಿ ಕೇಂದ್ರ ಬಳಿ ಸರತಿಯಲ್ಲಿ ಕಾದರೂ ನಿಮ್ಮ ವಿವರ ಆನ್‌ಲೈನ್‌ನಲ್ಲಿ ದಾಖಲಾಗಿಲ್ಲ. ಮತ್ತೊಮ್ಮೆ ವೈದ್ಯರನ್ನು ಕಂಡು ಬನ್ನಿ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಗಂಟೆಗೂ ಹೆಚ್ಚು ಕಾಲ ಸರತಿಯಲ್ಲಿ ನಿಂತಿದ್ದೇನೆ. ಪ್ರತಿ ಬಾರಿ ಹೋದಾಗಲೂ ಇದನ್ನೇ ಹೇಳುತ್ತಿದ್ದಾರೆ ಎಂದು ಪ್ರಭು ಎಂಬುವರು ಅಳಲು ತೋಡಿಕೊಂಡರು. "ಸಮಸ್ಯೆ ಗಮನಿಸದ ಅಧೀಕ್ಷಕರು!
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಒಂದಲ್ಲ ಒಂದು ಅವಾಂತರಗಳು ನಡೆಯುತ್ತಲೇ ಇರುತ್ತವೆ. ಇದರ ವಿರುದ್ಧ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಲೇ ಇರುತ್ತವೆ. ಸಚಿವರು ಬಂದು ಸಭೆ ನಡೆಸಿದರೂ, ಉನ್ನತ ಮಟ್ಟದ ಅಧಿಕಾರಿಗಳು ಭೇಟಿ ಕೊಟ್ಟರೂ ಸಮಸ್ಯೆಗಳಿಗೆ ಪರಿಹಾರ ಮಾತ್ರ ಶೂನ್ಯವಾಗಿದೆ. ಆಸ್ಪತ್ರೆಯಲ್ಲಿ ಅನೇಕ ಸಮಸ್ಯೆಗಳಿದ್ದರೂ ಯಾವುದು ಸಮಸ್ಯೆಯೇ ಇಲ್ಲವೆಂಬಂತೆ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಟಿ.ಡಿ.ತಿಮ್ಮಪ್ಪ ಅವರು ವರ್ತಿಸುತ್ತಿದ್ದಾರೆ. ಯಾರೇ ಆಸ್ಪತ್ರೆಯ ಸಮಸ್ಯೆ ಬಗ್ಗೆ ಅವರ ಗಮನಕ್ಕೆ ತಂದರೂ ಯಾವುದನ್ನೂ ಕಿವಿಗೆ ಹಾಕಿಕೊಳ್ಳುವುದಿಲ್ಲ ಎಂಬುದು ಹಲವರ ಆರೋಪ.ಹೊಸ ನಿಯಮದಿಂದ ಬೇಸತ್ತ ರೋಗಿಗಳು
ಸರ್ಕಾರದ ಹೊಸ ಆದೇಶದನ್ವಯ ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳನ್ನು ತಪಾಸಣೆ ಮಾಡಿದ ವೈದ್ಯರೇ ಕಾಯಿಲೆಗೆ ಸಂಬಂಧಿಸಿದ ಔಷಧಿಯನ್ನು ಕೇಸ್ ಶೀಟ್‌ನಲ್ಲಿ ಬರೆಯುವ ಜೊತೆಗೆ ಕಂಪ್ಯೂಟರ್‌ನಲ್ಲೂ ದಾಖಲಿಸಬೇಕಿದೆ. ಔಷಧಿ ರಸೀದಿಯ ಯುಎಚ್‌ಐಡಿ ಸಂಖ್ಯೆ ಆನ್‌ಲೈನ್‌ನಲ್ಲಿ ನವೀಕೃತಗೊಂಡರೆ ಮಾತ್ರ ಔಷಧಿ ಕೇಂದ್ರದಿಂದ ರೋಗಿಗಳು ಔಷಧಿ ಪಡೆಯಲು ಸಾಧ್ಯ.‘ವಾರದಲ್ಲಿ ಮೂರು ದಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಮಸ್ಯೆ ಹೇಳತೀರದು. ದೂರದೂರಿನಿಂದ ಬಂದ ರೋಗಿಗಳು ತಲೆ ಬುಡವಿಲ್ಲದ ಈ ಹೊಸ ನಿಯಮದಿಂದ ಬೇಸತ್ತು ಹೋಗಿದ್ದಾರೆ. ಪ್ರತಿ ನಿತ್ಯ ಸರತಿಯಲ್ಲಿ ರೋಗಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ, ಕ್ರಮ ಆಗಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.-----
ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಎಬಿಆರ್‌ಕೆ ಅಡಿಯಲ್ಲಿ ದಾಖಲಾದ 24 ಗಂಟೆ ಬಳಿಕ ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಕಾರ್ಡ್ ಇದ್ದವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಕೆಲವೊಮ್ಮೆ ಔಷಧಿ ಲಭ್ಯ ಇರುವುದಿಲ್ಲ. ಆಗ ವೈದ್ಯರು ಹೊರಗಡೆ ಔಷಧಿ ಬರೆದುಕೊಡುತ್ತಿದ್ದಾರೆ. ಔಷಧಿ ಲಭ್ಯ ಇದ್ದೂ ಹೊರಗಡೆ ಔಷಧಿ ಬರೆದುಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು.- ಡಾ.ಟಿ.ಡಿ.ತಿಮ್ಮಪ್ಪ, ವೈದ್ಯಕೀಯ ಅಧೀಕ್ಷಕ, ಮೆಗ್ಗಾನ್ ಆಸ್ಪತ್ರೆ.