ಉಪ್ಪು ತಿಂದವ ನೀರು ಕುಡಿಬೇಕು: ಸಿ.ಟಿ. ರವಿ

| Published : Oct 20 2023, 01:00 AM IST

ಸಾರಾಂಶ

ಯಾರು ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು: ಸಿ.ಟಿ. ರವಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಹಾಲಿಂದು ಹಾಲಿಗೆ, ನೀರಿಂದು ನೀರಿಗೆ, ಉಪ್ಪು ತಿಂದೋನು ನೀರು ಕುಡಿಬೇಕು. ಇವೆಲ್ಲಾ ಹಳೇ ಕಾಲದ ಗಾಧೆ ಮಾತುಗಳು. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು, ಪ್ರಮಾಣಿಕರಿಗೆ ತೊಂದರೆ ಆಗಬಾರದು. - ಈ ಗಾಧೆ ಮಾತು ಹೇಳಿದ್ದು ಮಾಜಿ ಸಚಿವ ಸಿ.ಟಿ. ರವಿ. ಡಿಕೆಶಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿರುವುದರಿಂದ ಡಿಕೆಶಿ ಹೆಸರೇಳದೆ ಗಾ ಧೆ ಮೂಲಕ ಸಿ.ಟಿ. ರವಿ ತಿವಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದ್ರು ಅಕ್ರಮ ಮಾಡಿದ್ರೆ ಅದು ಇಂದಲ್ಲ ನಾಳೆ ಬಯಲಿಗೆ ಬರಬೇಕು. ಸುಮ್ಮನೆ, ಗಾಧೆ ಹುಟ್ಟುತ್ತಾ, ಇದಕ್ಕೆ ತಲೆ ತಲಾಂತರದ ಸತ್ಯ ಇರುತ್ತೆ. ಊರಿಗೆ ಬಂದೋಳು ನೀರಿಗೆ ಬರಲ್ವಾ, ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್, ಡ್ಯಾಶ್. ಸತ್ಯವನ್ನ ಹೂತಾಕಲು ಆಗಲ್ಲ, ಕೆಲ ಕಾಲ ಮುಚ್ಚಿಡಬಹುದು. ಆದರೆ, ಹೊರ ಬರೋದು ಸತ್ಯ. ಯಾರಾದ್ರು ತಪ್ಪು ಮಾಡಿರೋರು ಇದ್ರೆ ಶಿಕ್ಷೆ ಆಗಬೇಕು ಎಂದರು. ಕಾನೂನಿಗಿಂತ ದೊಡ್ಡವರು ಯಾರಾದರೂ ಇದರಾ. ನಾನು, ಸಿಎಂ, ಡಿಸಿಎಂ, ಪ್ರಧಾನಿ ಯಾರೂ ಕಾನೂನಿಗೆ ಅತಿಥರಲ್ಲ. ಅಂಬೇಡ್ಕರ್ ಕಾನೂನಿನ ದೃಷ್ಟಿಯಿಂದ ಎಲ್ಲರೂ ಸಮಾನರು ಎಂದಿದ್ದಾರೆ. ಇವರಿಗೆ ಕಾನೂನು ಅನ್ವಯ ಆಗಲ್ಲ, ಏನ್ ಮಾಡುದ್ರೂ ನಡೆಯುತ್ತೆ ಅನ್ನೋದು ನಮ್ಮ ದೇಶದಲ್ಲಿ ಇಲ್ಲ. ಯಾರು ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು. ಯಾರು ತಪ್ಪು ಮಾಡಿದ್ದಾರೆಂದು ಹೇಳುವ ಅಧಿಕಾರ ನನಗೆ ಇಲ್ಲ, ನ್ಯಾಯಾಲಯಕ್ಕೆ ಇದೆ. ನಾವು ಮಾಡಿರಬಹುದು ಅಂತ ಹೇಳಬಹುದು, ಮಾಡಿದ್ದಾರೆ ಅಂತ ಹೇಳಕ್ಕೆ ಆಗಲ್ಲ ಎಂದು ಹೇಳಿದರು.