ಕೇಂದ್ರ ಸರ್ಕಾರ ಮಾನ್ಯತೆ ನೀಡಿರುವ ಥರ್ಡ್ ಪಾರ್ಟಿ ಲ್ಯಾಬ್ನಲ್ಲಿ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದ ಬಗ್ಗೆ ಪರೀಕ್ಷೆ ಮಾಡಿಸಿದ್ದು, ಸ್ವತಂತ್ರ ಮೂರನೇ ವ್ಯಕ್ತಿಯಿಂದ ಪರೀಕ್ಷೆ ಮಾಡಿಸಿದಾಗಲೇ ನೈಜ ಸ್ಥಿತಿಯೂ ಹೊರಬರುತ್ತದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
- ಕೇಂದ್ರವೇ ಸಪ್ಲೈ ಮಾಡಿ, ಕೇಂದ್ರವೇ ಸರ್ಟಿಫಿಕೇಟ್ ಕೊಡೋದು ಯಾವ ನ್ಯಾಯ ಎಂದು ಪ್ರಶ್ನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕೇಂದ್ರ ಸರ್ಕಾರ ಮಾನ್ಯತೆ ನೀಡಿರುವ ಥರ್ಡ್ ಪಾರ್ಟಿ ಲ್ಯಾಬ್ನಲ್ಲಿ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದ ಬಗ್ಗೆ ಪರೀಕ್ಷೆ ಮಾಡಿಸಿದ್ದು, ಸ್ವತಂತ್ರ ಮೂರನೇ ವ್ಯಕ್ತಿಯಿಂದ ಪರೀಕ್ಷೆ ಮಾಡಿಸಿದಾಗಲೇ ನೈಜ ಸ್ಥಿತಿಯೂ ಹೊರಬರುತ್ತದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಥೆನಾಲ್ ಪರೀಕ್ಷೆಯನ್ನು ರಾಜ್ಯ ಸರ್ಕಾರದ ಅಧೀನದಲ್ಲಿ ಮಾಡಿಸಿಲ್ಲ. ಕೇಂದ್ರ ಸರ್ಕಾರ ಮಾನ್ಯತೆ ನೀಡಿದ ಲ್ಯಾಬ್ನಲ್ಲೇ ಮಾಡಿಸಿದ್ದು, ಕೇಂದ್ರದವರು ಪೂರೈಸುವ ಆಯಿಲ್ ಕಂಪನಿಯವರೆ ಪೆಟ್ರೋಲ್ ಪರೀಕ್ಷೆ ಮಾಡಿಸಿದ್ದಾರೆ ಎಂದರು.
ಪೆಟ್ರೋಲ್ ಸಪ್ಲೈ ಮಾಡುವವರೇ ಪರೀಕ್ಷೆ ಮಾಡಿ ಸರಿ ಇದೆ ಅಂತಾ ಸರ್ಟಿಫಿಕೇಟ್ ಕೊಡುತ್ತಿದ್ದಾರೆ. ಇದು ಯಾವ ನ್ಯಾಯ? ಇದನ್ನು ಸ್ವತಂತ್ರ ಥರ್ಡ್ ಪಾರ್ಟಿಯವರು ಪರೀಕ್ಷಿಸಿದರೆ ಅಸಲಿಯತ್ತು ಗೊತ್ತಾಗಲಿದೆ. ಕೇಂದ್ರ ಸರ್ಕಾರ ರೂಪಿಸಿರುವ ಇ-20 ಮಿಶ್ರಣವನ್ನಷ್ಟೇ ಮಾಡಿ. ಅದನ್ನು ಬಿಟ್ಟು ಇ-30 ಮಿಶ್ರಣ ಮಾಡಿದರೆ ಹೇಗೆ? ಹೀಗಿದ್ದರೂ ಅದೇ ಸರಿ ಅಂತಾ ಹೇಳುತ್ತಿದ್ದಾರೆ. ರಾಜ್ಯದ 63 ಸ್ಯಾಂಪಲ್ಗಳನ್ನು ನಾನೇ ಪರೀಕ್ಷೆಗೆ ಕೇಂದ್ರಕ್ಕೆ ಕಳಿಸಿದ್ದೆ. ಕೇಂದ್ರದವರು ಅದರ ಬಗ್ಗೆ ಯಾವುದೇ ವರದಿ ನೀಡಿಲ್ಲ ಎಂದು ದೂರಿದರು.ಇಂಥ ಪೆಟ್ರೋಲ್ ಬಳಸಿದ ಜನಸಾಮಾನ್ಯರ ವಾಹನಗಳು ಹಾಳಾದರೆ ಅದರ ನಷ್ಟ ತುಂಬಿ ಕೊಡುವವರು ಯಾರು? ನಾನೊಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಕೇಂದ್ರ ಸರ್ಕಾರಕ್ಕೆ ಈ ಪ್ರಶ್ನೆ ಎತ್ತಿದ್ದೇನೆ. ಸರ್ಕಾರದಿಂದ ಜನರಿಗೆ ಏನಾದರೂ ಒಳ್ಳೆಯದು ಮಾಡಬೇಕು ಎಂದುಕೊಂಡಿದ್ದೇವೆ. ನಮ್ಮನ್ನೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೂರ್ಖರು ಅಂತಾ ಹೇಳಿದ್ದಾರೆ. ಈ ಹಿಂದೆ ಎಥೆನಾಲ್ ಶೇ.30ರಷ್ಟು ಮಿಶ್ರಣ ಆಗಬೇಕೆಂಬ ಚಿಂತನೆ ಇದೆಯೆಂದು ಸ್ವತಃ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒಪ್ಪಿಕೊಂಡಿದ್ದರು ಎಂದು ಅವರು ತಿಳಿಸಿದರು.
ನೀವು ಯಾವುದೇ ತಜ್ಞರ ಮಾತುಗಳನ್ನು ಕೇಳದೇ, ಜನರಿಗೂ ತಿಳಿಸದೇ ಶೇ.30ರಷ್ಟು ಎಥೆನಾಲ್ ಅನ್ನು ಪೆಟ್ರೋಲ್ನಲ್ಲಿ ಯಾಕೆ ಮಿಶ್ರಣ ಮಾಡಿದ್ದೀರಿ? ವಾಹನಗಳ ಮೈಲೇಜ್ ಕಡಿಮೆಯಾಗಿ, ವಾಹನಗಳು ಬೇಗ ಹಾಳಾಗಿ ಸ್ಕ್ರಾಪ್ ಆಗಲಿವೆ. ಜನರ ವಾಹನ ರಿಪೇರಿ ಮತ್ತು ಮೈಲೇಜ್ ನಷ್ಟವನ್ನು ಕೇಂದ್ರ ಸರ್ಕಾರ ಕೊಡುತ್ತದೆಯೇ? ಈ ವಿಚಾರದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಎನ್ನುವುದೇ ಬೇಡ. ಥರ್ಡ್ ಪಾರ್ಟಿಯಿಂದಲೇ ಪರೀಕ್ಷೆ ಮಾಡಿಸಿ ಎಂದು ಸವಾಲು ಹಾಕಿದರು.ಕೇಂದ್ರ ಇಂಧನ ಸಚಿವ ಹರದೀಪ್ ಸಿಂಗ್ ಪುರಿ ಅವರನ್ನು ದಾಖಲೆ ಸಮೇತ ಪ್ರಶ್ನಿಸುತ್ತೇನೆ. ಕೇಂದ್ರದ ಅಸಮರ್ಪಕ ಇಂಧನ ನೀತಿ ಹಾಗೂ ತೈಲ ಸರಬರಾಜುದಾರರ ಮಿತಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣದಿಂದಾಗಿ ರಾಜ್ಯದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಚಿವ ರಿಜ್ವಾನ್ ಬೇಸರ ವ್ಯಕ್ತಪಡಿಸಿದರು.
- - -(ಬಾಕ್ಸ್)
* ಬಿಪಿಎಲ್ ಕಾರ್ಡ್ ರದ್ದುಪಡಿಸಲು ಕೇಂದ್ರದ ಪಟ್ಟಿ- ನಾವೇ ಅದನ್ನು ತಡೆ ಹಿಡಿದಿದ್ದೇವೆ: ರಿಜ್ವಾನ್ ಅರ್ಷದ್ ದಾವಣಗೆರೆ: ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಮಾಡುತ್ತಿರುವ ಪಟ್ಟಿ ಕೇಂದ್ರ ಸರ್ಕಾರದಿಂದ ಬಂದಿದ್ದು, ಬಿಪಿಎಲ್ ಕಾರ್ಡ್ ರದ್ದತಿಯು ಕೇಂದ್ರ ನೀಡಿದ ಪಟ್ಟಿಯಂತೆಯೇ ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ.
ಯಾರು ತೆರಿಗೆ ಕಟ್ಟುತ್ತಿದ್ದಾರೋ ಅಂತಹವರ ಕಾರ್ಡ್ಗಳನ್ನು ತೆಗೆಯಲು ಮೋದಿ ಸರ್ಕಾರ ಸೂಚನೆ ನೀಡಿದೆ. ನಾವೇ ಅವುಗಳನ್ನು ತಡೆ ಹಿಡಿದಿದ್ದೇವೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅರ್ಹರ ಕಾರ್ಡ್ ಡಿಲೀಟ್ ಆಗಬಾರದೆಂದು ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇ-ಕೆವೈಸಿ ಮಾಡಿಸಲು ನೀಡಿದ್ದ ಅವಧಿ ಮುಗಿದಿದ್ದರಿಂದ ಅದನ್ನು ಇದೇ ತಿಂಗಳ 30ರವರೆಗೂ ವಿಸ್ತರಿಸಲಾಗಿದೆ. ಜನರು ನಿಗದಿತ ಅವದಿಯಲ್ಲಿ ಕಡ್ಡಾಯಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದ ಅವರು, ರಾಜ್ಯದಲ್ಲಿ ಅಕ್ಕಿ ಕೊರತೆ ಸೃಷ್ಟಿಸಿ, ಕೃತಕವಾಗಿ ದರ ಹೆಚ್ಚಿಸಿ, ಅಕ್ರಮವಾಗಿ ಅಕ್ಕಿ ಮಾರಾಟ ಮಾಡಲು ಯತ್ನಿಸುತ್ತಿರುವವರ ವಿರುದ್ಧ ರಾಜ್ಯ ಸರ್ಕಾರ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.- - -
(ಕೋಟ್)ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದರೂ, ಕೇಂದ್ರ ಸ್ಪಂದಿಸುತ್ತಿಲ್ಲ. ರಾಜ್ಯದ ರೈತರಿಗೆ ಏನೇ ಪರಿಹಾರ ಕೊಡಬೇಕಿದ್ದರೂ ರಾಜ್ಯ ಸರ್ಕಾರವೇ ನೀಡುತ್ತಿದೆ. ಕೇಂದ್ರ ಸರ್ಕಾರವಂತೂ ಈವರೆಗೆ ಏನನ್ನೂ ಕೊಟ್ಟಿಲ್ಲ. ಅಗತ್ಯ ವಸ್ತುಗಳ ಬೆಲೆ ದೇಶಾದ್ಯಂತ ಏರಿಕೆಯಾಗಿವೆ. ಬಿಜೆಪಿ ನಾಯಕರು ಮೊದಲು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ. ಇಲ್ಲವಾದರೆ ನಾವೇ ಒಗ್ಗಟ್ಟಾಗಿ ಕೇಂದ್ರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ.
- ರಿಜ್ವಾನ್ ಅರ್ಷದ್, ಆಹಾರ ಸಚಿವ- - -