ಪ್ರಜ್ವಲ್ ವೀಡಿಯೋ ಬಗ್ಗೆ ಬಿಜೆಪಿ ನಾಯಕರು ಮೌನ ಏಕೆ?: ವೆರೋನಿಕಾ ಕರ್ನೇಲಿಯೋ

| Published : Apr 30 2024, 02:01 AM IST

ಪ್ರಜ್ವಲ್ ವೀಡಿಯೋ ಬಗ್ಗೆ ಬಿಜೆಪಿ ನಾಯಕರು ಮೌನ ಏಕೆ?: ವೆರೋನಿಕಾ ಕರ್ನೇಲಿಯೋ
Share this Article
  • FB
  • TW
  • Linkdin
  • Email

ಸಾರಾಂಶ

ಸದಾ ಇತರರಿಗೆ ಪಾಠ ಹೇಳುವ ಎಚ್.ಡಿ. ಕುಮಾರಸ್ವಾಮಿ, ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆಯರ ಕುರಿತು ಕೇವಲವಾಗಿ ಮಾತನಾಡಿದ್ದು, ಇಂದು ಅವರದ್ದೇ ಕುಟುಂಬದ ಸದಸ್ಯ ದಾರಿ ತಪ್ಪಿರುವುದು ಅವರಿಗೆ ಕಾಣಿಸುತ್ತಿಲ್ಲವೇ? ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಹಾಸನದ ಯುವ ರಾಜಕಾರಣಿಯ ಅಶ್ಲೀಲ ವೀಡಿಯೋ ಪ್ರಕರಣದ ಕುರಿತು ರಾಜ್ಯದ ಬಿಜೆಪಿ ನಾಯಕರು ಯಾಕೆ ಮೌನ ವಹಿಸಿದ್ದಾರೆ? ಅವರಿಗೆ ಈ ರಾಜ್ಯದ ಮಹಿಳೆಯರ ಮಾನ ಪ್ರಾಣದ ಕುರಿತು ಕಾಳಜಿ ಇಲ್ಲವೇ? ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಪ್ರಶ್ನಿಸಿದ್ದಾರೆ.

ಮಹಿಳೆಯರನ್ನು ಮಾತೆಯರು ಎಂದು ಸಂಬೋಧಿಸುವ ಬಿಜೆಪಿ ಈಗ ಮೌನ ವಹಿಸಿರುವುದು ಸಂಶಯಕ್ಕೆಡೆ ಮಾಡಿದೆ. ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದರೆ ಮಹಿಳೆಯರು ಎಲ್ಲೆಲ್ಲೋ ಹೋಗುತ್ತಿದ್ದಾರೆ ಎಂದು ತನ್ನ ನಾಲಗೆಯನ್ನು ಹರಿಬಿಟ್ಟ ಬಿಜೆಪಿ ನಾಯಕಿ ಶ್ರುತಿ ಅವರ ಗಮನಕ್ಕೆ ಈ ಪ್ರಕರಣ ಬಂದಿಲ್ಲವೇ? ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಬೊಬ್ಬೆ ಹಾಕುವ ಶೋಭಾ ಕರಂದ್ಲಾಜೆ, ಮಾಳವಿಕ, ಭಾರತೀ ಶೆಟ್ಟಿ ಮುಂತಾದ ನಾಯಕಿಯರು ಈಗ ನಿದ್ದೆ ಮಾಡುತ್ತಿದ್ದಾರೆಯೇ? ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ತನ್ನ ತೀಟೆ ತೀರಿಸಿ ಕೊಳ್ಳಲು ಬಳಸಿಕೊಂಡಾಗಲೂ ಸಹ ಇದರ ಬಗ್ಗೆ ಚಕಾರವೆತ್ತದಿರುವುದು ಬಿಜೆಪಿಗರ ಮಹಿಳಾ ಪರ ಕಾಳಜಿ ಏನು ಎನ್ನುವುದನ್ನು ತೋರಿಸುತ್ತದೆ. ಎಲ್ಲೋ ಸಾವು ಸಂಭವಿಸಿದಾಗ ಓಡೋಡಿ ಬರುವ ಶೋಭಾ ಕರಂದ್ಲಾಜೆ ಅವರೂ ಒಬ್ಬ ಹೆಣ್ಣಾಗಿ ಬೇರೆ ಹಣ್ಣುಮಕ್ಕಳ ಕಣ್ಣೀರು ಕಾಣಿಸದಿರುವುದು ವಿಪರ್ಯಾಸವೇ ಸರಿ ಎಂದವರು ಟೀಕಿಸಿದ್ದಾರೆ.

ಸದಾ ಇತರರಿಗೆ ಪಾಠ ಹೇಳುವ ಎಚ್.ಡಿ. ಕುಮಾರಸ್ವಾಮಿ, ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆಯರ ಕುರಿತು ಕೇವಲವಾಗಿ ಮಾತನಾಡಿದ್ದು, ಇಂದು ಅವರದ್ದೇ ಕುಟುಂಬದ ಸದಸ್ಯ ದಾರಿ ತಪ್ಪಿರುವುದು ಅವರಿಗೆ ಕಾಣಿಸುತ್ತಿಲ್ಲವೇ? ಅವರು ಆಗಾಗ್ಗೆ ತನ್ನಲ್ಲಿ ಪೆನ್ ಡ್ರೈವ್ ಇದೆ ಎಂದು ಹೇಳುತ್ತಿದ್ದರು. ಆದರೆ ಈಗ ಅವರ ಬಳಿ ಇದ್ದ ಪೆನ್ ಡ್ರೈವ್ ಯಾವುದು ಎನ್ನುವುದು ಜಗಜ್ಜಾಹೀರಾಗಿದೆ. ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ದೋಸ್ತಿ ಮಾಡಿಕೊಂಡಿದ್ದು, ಪ್ರಕರಣದ ಬಗ್ಗೆ ಎರಡೂ ಪಕ್ಷಗಳು ಮೌನ ವಹಿಸಿ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಿಸುತ್ತವೆ ಎಂದವರು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಪ್ರಕರಣವನ್ನು ಎಸ್ಐಟಿಗೆ ವಹಿಸಿದ್ದು, ಇನ್ನಾದರೂ ಬಿಜೆಪಿಯ ಮಹಿಳಾ ಮಣಿ ನಾಯಕಿಯರು ತಮ್ಮ ಮುಚ್ಚಿರುವ ಬಾಯನ್ನು ತೆರೆದು ಪ್ರಜ್ವಲ್ ರೇವಣ್ಣ ವಿರುದ್ಧ ಪ್ರತಿಭಟಿಸುವ ದಮ್ಮು ತಾಕತ್ತು ಇದೆ ಎನ್ನುವುದನ್ನು ತೋರಿಸಲಿ ಎಂದು ವೆರೋನಿಕಾ ಆಗ್ರಹಿಸಿದ್ದಾರೆ.