ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಉತ್ತರ ಕರ್ನಾಟಕದ ಜನರು ಕಲೆಯನ್ನು ಪ್ರೀತಿಸುತ್ತಾರೆ. ಕಲೆಗಾರರನ್ನು ಗೌರವಿಸುತ್ತಾರೆ. ನಮ್ಮ ಶ್ರೀಮಂತ ಸಂಸ್ಕೃತಿ ಸೊಬಗನ್ನು ಸವಿಯಲು ನಾವು ಉತ್ತರ ಕರ್ನಾಟಕದ ಕಡೆ ಬರಬೇಕು ಎಂದು ಕಾಂತಾರ ಚಿತ್ರದ ನಾಯಕಿ, ನಟಿ ಸಪ್ತಮಿ ಗೌಡ ಹೇಳಿದರು.ತಾಲೂಕಿನ ನಾಗನೂರ(ಪಿಕೆ) ಗ್ರಾಮದ ಲಕ್ಷ್ಮೀ ದೇವಿ ಜಾತ್ರೆ ಅಂಗವಾಗಿ ದಸರಾ ನಿಮಿತ್ತ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ವೈವಿಧ್ಯಮಯ ಕಲೆ, ಸಂಸ್ಕೃತಿಗಳು ಭಾವೈಕ್ಯತೆಯನ್ನು ಬಿತ್ತಿ ಬೆಳೆಸುತ್ತಿವೆ. ಚಲನಚಿತ್ರಗಳನ್ನು ಅತಿ ಹೆಚ್ಚು ವೀಕ್ಷಣೆ ಮಾಡುವವರು ಉತ್ತರ ಕರ್ನಾಟಕದ ಜನರು ಎಂದು ಹೆಮ್ಮೆಪಟ್ಟರು.
ನಾಗನೂರ(ಪಿಕೆ) ಗ್ರಾಮದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ ಅವರ ನೇತೃತ್ವದಲ್ಲಿ ಮೈಸೂರ ದಸರಾ ಮಾದರಿಯಲ್ಲಿ ಉತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ತಮ್ಮ ಸ್ವಂತ ಹುಟ್ಟೂರಾದ ಈ ಗ್ರಾಮದಲ್ಲಿ ಯುವಕರಲ್ಲಿ ಸಂಸ್ಕೃತಿ ಪ್ರೇಮ ಬೆಳೆಸಲು ಮಾರ್ಗದರ್ಶನ ಮಾಡುತ್ತಿರುವ ಶಾಸಕ ಲಕ್ಷ್ಮಣ ಸಂಗಪ್ಪ ಸವದಿ ಅವರ ಕಾರ್ಯ ಕೂಡ ಶ್ಲಾಘನೀಯ ಎಂದರು.ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸಂಗಪ್ಪ ಸವದಿ ಮಾತನಾಡಿ, ಕಳೆದ ಐದು ವರ್ಷಗಳಿಂದ ನನ್ನ ಸ್ವ-ಗ್ರಾಮದ ಯುವಕರ ತಂಡ ಇಡೀ ಜಿಲ್ಲೆಯಲ್ಲಿ ಮೈಸೂರು ದಸರಾ ಮಾದರಿಯಲ್ಲಿ ಮಾದರಿ ಉತ್ಸವ ಆಚರಿಸುತ್ತಿರುವುದು ಹೆಮ್ಮೆ ಎನಿಸುತ್ತದೆ. ಮುಂದಿನ ವರ್ಷ ರಾಜ್ಯದಲ್ಲಿ ಮಾದರಿ ದಸರಾ ಉತ್ಸವ ಆಚರಿಸಬೇಕು. ಅದಕ್ಕೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವೆ ಎಂದು ಭರವಸೆ ನೀಡಿದರು.
ಶೇಗುಣಸಿ ಡಾ.ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬೆಳೆಸುವುದು ಅತಿ ಮುಖ್ಯ. ಈ ಗ್ರಾಮದಲ್ಲಿ ಚಿದಾನಂದ ಸವದಿ ಅವರ ನೇತೃತ್ವದಲ್ಲಿ ಐದು ದಿನಗಳ ಕಾಲ ನಾಡಿನ ಕಲಾ ಪ್ರತಿಭೆಗಳ ಅನಾವರಣ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದು ಹೇಳಿದರು.ಸಾಂಸ್ಕೃತಿಕ ಪ್ರಜ್ಞೆ ಬೆಳೆದಾಗ ಭಕ್ತಿ ಶ್ರದ್ಧೆ ವೃದ್ಧಿಯಾಗುವುದು. ಇದರಿಂದ ಸಾಮಾಜಿಕ ಚಿಂತನೆಗಳು ಚಿಗುರುತ್ತ ಭಾವೈಕ್ಯತೆ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಈ ಮೂಲಕ ಸಮಾಜದಲ್ಲಿ ಆದರ್ಶ ನಾಗರಿಕರು ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಶಿಕ್ಷಕ ಸಿದರಾಯ ಹೊನವಾಡ ಮಾತನಾಡಿದರು. ಚಿದಾನಂದ ಸವದಿ ಸ್ವಾಗತಿಸಿದರು. ವೇ.ಮೂ ಶಿವಶಂಕರಯ್ಯಾ ಮಠದ, ವೇ.ಮೂ. ನಿಂಗಯ್ಯಾ ಮಠದ ಸಾನ್ನಿಧ್ಯ ವಹಿಸಿದ್ದರು. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಪುರಸಭೆ ಅಧ್ಯಕ್ಷೆ ಶೀವಲೀಲಾ ಸದಾಶಿವ ಬುಟಾಳೆ, ಉಪಾಧ್ಯಕ್ಷರಾದ ಭುವನೇಶ್ವರಿ ಭಿರಪ್ಪ ಯಕ್ಕಂಚಿ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ದರೂರ, ಸದಾಶಿವ ಕೆ ಬುಟಾಳೆ, ಅಮೋಘಸಿದ್ದ ಖೋಬ್ರಿ, ಶಿವು ಗುಡ್ಡಾಪುರ ಭಾಗವಹಿಸಿದ್ದರು.ನಾಡಿನ ಪ್ರಸಿದ್ಧ ಕಲಾವಿದರಾದ ಸರಿಗಮಪ ಗಾಯಕರಾದ ಸುಪ್ರೀತಾ ಮತ್ತು ಸಮನ್ವಿ ರೈ, ಜಾನಪದ ಗಾಯಕ ಮಾಳು ನಿಪನಾಳ ಅವರು ವಿವಿಧ ಸಂಗೀತ ಕಾರ್ಯಕ್ರಮ ಜರುಗಿದವು. ಪ್ರಜಾ ವಿಭೂತಿಮಠ, ಸುಶ್ಮಿತಾ ಹುಬ್ಬಳ್ಳಿ ತಂಡದಿಂದ ನೃತ್ಯ ಕಲೆ ಪ್ರದರ್ಶನವಾಯಿತು.