ಗೋರಕ್ ಸಿಂಗ್ ವರದಿಯನ್ನು ಬಿಜೆಪಿ ಯಾಕೆ ಜಾರಿ ಮಾಡಿಲ್ಲ: ಜೆಪಿ ಹೆಗ್ಡೆ ಪ್ರಶ್ನೆ

| Published : Apr 14 2024, 01:50 AM IST

ಗೋರಕ್ ಸಿಂಗ್ ವರದಿಯನ್ನು ಬಿಜೆಪಿ ಯಾಕೆ ಜಾರಿ ಮಾಡಿಲ್ಲ: ಜೆಪಿ ಹೆಗ್ಡೆ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಜೆಪಿ ಹೆಗ್ಡೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ಹೋಬಳಿಯ ಹರಿಹರಪುರ, ಕಿಗ್ಗಾ ಮುಂತಾದ ಕಡೆಗಳಲ್ಲಿ ಮತಪ್ರಚಾರ ನಡೆಸಿದರು. ಇದೇ ಸಂದರ್ಭದಲ್ಲಿ ಹೆಗ್ಡೆ ಅವರು ಕಿಗ್ಗಾ ಸಮೀಪದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಉಡುಪಿ

ಹಿಂದೆ ರೈತರ ಬಗ್ಗೆ ಗೋರಕ್ ಸಿಂಗ್ ಸಮಿತಿಯ ವರದಿಯನ್ನು ಜಾರಿಗೆ ತರುವಂತೆ ಬಿಜೆಪಿಯವರು ಪಾದಯಾತ್ರೆ, ಪ್ರತಿಭಟನೆ ಮಾಡಿದ್ದರು. ಅದರ ನಂತರ 10 ವರ್ಷಗಳ ಕಾಲ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ ಯಾಕೆ ಅವರು ಗೋರಕ್ ಸಿಂಗ್ ವರದಿಯನ್ನು ಅನುಷ್ಠಾನಕ್ಕೆ ತರಲಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಪ್ರಶ್ನಿಸಿದ್ದಾರೆ.

ಅವರು ಶನಿವಾರ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ಹೋಬಳಿಯ ಹರಿಹರಪುರ, ಕಿಗ್ಗಾ ಮುಂತಾದ ಕಡೆಗಳಲ್ಲಿ ನಡೆದ ಮತಪ್ರಚಾರ ಸಭೆಯಲ್ಲಿ ಮಾತನಾಡಿದರು.

ಇಲ್ಲಿನ ಸಂಸದೆಯೇ ಕೇಂದ್ರದಲ್ಲಿ ರೈತ ಮತ್ತು ಕೃಷಿ ಕಲ್ಯಾಣ ಸಚಿವೆಯಾಗಿದ್ದರು. ಅವರು ಗೋರಕ್ ಸಿಂಗ್ ವರದಿಯ ಅನುಷ್ಠಾನಕ್ಕೆ ಪ್ರಯತ್ನ ಮಾಡಿಲ್ಲ. ಗೋರಕ್ ಸಿಂಗ್ ವರದಿ ಜಾರಿಯಾಗಬೇಕಾದರೆ ಅದರ ಬಗ್ಗೆ ಕೆಲಸ ಮಾಡುವವರಿಗೆ ಮತ ನೀಡಬೇಕು ಹೊರತು, ಪ್ರಯತ್ನವನ್ನೇ ಮಾಡದವರಿಗಲ್ಲ ಎಂದು ಹೆಗ್ಡೆ ಹೇಳಿದರು.

ತಾನು ಪ್ರಥಮ ಬಾರಿಗೆ ಇಲ್ಲಿ ಮತಯಾಚನೆಗೆ ಬಂದಾಗ ಅಡಕೆ ಬೆಳೆಗಾರರ ಸಮಸ್ಯೆಯ ಪರಿಹಾರದ ಬಗ್ಗೆ ಭರವಸೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದರು. ಅದರಂತೆ ತಾನು ಸಂಸದನಾಗಿ ಆಯ್ಕೆಯಾದ ಮೇಲೆ ಪ್ರಯತ್ನ ಮಾಡಿದೆ. ಅದರ ಫಲವಾಗಿ ಅಡಕೆ ಬೆಳೆಗಾರರ ಸಮಸ್ಯೆ ಅಧ್ಯಯನಕ್ಕೆ ಸಮಿತಿ ರಚನೆಯಾಗಿ, ಅದರಂತೆ ಅಡಕೆ ಪುನಶ್ಚೇತನಕ್ಕೆ 1 ಹೆಕ್ಟೇರ್‌ಗೆ 15 ಸಾವಿರ ರು. ಬಿಡುಗಡೆಯಾಗಿತ್ತು ಎಂದವರು ನೆನಪಿಸಿಕೊಂಡರು.

ಇದೇ ಸಂದರ್ಭದಲ್ಲಿ ಹೆಗ್ಡೆ ಅವರು ಕಿಗ್ಗಾ ಸಮೀಪದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

ಅವರೊಂದಿಗೆ ಶಾಸಕ ಟಿ.ಡಿ. ರಾಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್ ಗೌಡ, ಕೊಪ್ಪ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಶ್ರೀಬಾಳೆಮನೆ ನಟರಾಜು, ಹೋಬಳಿ ಅಧ್ಯಕ್ಷ ಕೊಡ್ತಲ್ ಮಿತ್ರ, ಕಕ್ಕುಡಿಗೆ ರವೀಂದ್ರ, ರಾಜ್ಯ ಕಿಸಾನ್ ಘಟಕದ ಅಧ್ಯಕ್ಷ ಸಚ್ಚಿನ್ ಮಿಗಾ ಹಾಗೂ ಎಲ್ಲ ಘಟಕಗಳ ಪದಾಧಿಕಾರಿಗಳು, ಪಕ್ಷದ ಮುಖಂಡರು ಭಾಗವಹಿಸಿದ್ದರು.

ಬಹಿಷ್ಕಾರ ಸಮಸ್ಯೆಗೆ ಪರಿಹಾರವಲ್ಲ: ಹೆಗ್ಡೆ

ಶೃಂಗೇರಿಯ ಕೆಲವು ಕಡೆಗಳಲ್ಲಿ ಮತದಾನದ ಬಹಿಷ್ಕಾರದಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ, ಅದರ ಬದಲು ಯಾವ ಸಮಸ್ಯೆ ಪರಿಹಾರಕ್ಕೆ ಬಹಿಷ್ಕಾರ ಮಾಡುತ್ತಿರೋ ಅದನ್ನು ಪರಿಹಾರ ಮಾಡುವವರಿಗೆ ಮತ ನೀಡಿ ಗೆಲ್ಲಿಸಿ, ಸಮಸ್ಯೆ ಪರಿಹಾರ ಆಗುತ್ತದೆ. ಬಹಿಷ್ಕಾರ ಕೈಬಿಡಿ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.