ಸಾರಾಂಶ
ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಆಶಿಸ್ತಿನ ರಾಜಕಾರಣ ಭುಗಿಲೆದ್ದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಟೀಕೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಹಿಂದಿನ ಸರ್ಕಾರದ ಅವಧಿ ಕೋವಿಡ್ ಸಮಯದಲ್ಲಿ 40 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಬಿಜೆಪಿ ಶಾಸಕ ಬಸಣ್ಣಗೌಡ ಪಾಟೀಲ ಯತ್ನಾಳ ಆರೋಪಿಸಿದ್ದರೂ, ಇಲ್ಲಿಯವರೆಗೂ ಯಾವೊಬ್ಬ ಬಿಜೆಪಿ ನಾಯಕರೂ ಈ ಬಗ್ಗೆ ಪ್ರತಿಕ್ರಿಯೆ ಯಾಕೆ ನೀಡಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಪ್ರತಿಕ್ರಿಯಿಸಿದ್ದಾರೆ.ಯಾದಗಿರಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಹಗರಣದ ರೂವಾರಿಗಳನ್ನು ಬಯಲು ಮಾಡುತ್ತೇನೆ ಎಂದು ಹೇಳಿಕೆ ನೀಡಿರುವಾಗ ರಾಜ್ಯ ಅಥವಾ ಕೇಂದ್ರದ ಬಿಜೆಪಿ ನಾಯಕರಾಗಲಿ ಅವರ ಹೇಳಿಕೆಗೆ ಉತ್ತರಿಸಲಾಗದಿರುವುದು ಶೋಚನೀಯ ಎಂದು ಟೀಕಿಸಿದರು.
ಶಿಸ್ತಿನ ಪಕ್ಷದಲ್ಲಿ, ಆಶಿಸ್ತಿನ ರಾಜಕಾರಣ ಭುಗಿಲೆದ್ದಿರುವುದು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಕೇಂದ್ರದ ಬಿಜೆಪಿ ನಾಯಕರು ಮೌನದ ಜೊತೆಗೆ ಬರುವ ದಿನಗಳಲ್ಲಿ ತಕ್ಕ ಉತ್ತರ ದೊರೆಯಲಿದೆ ಎಂದು ತಿಳಿಸಿದರು.ಕೋವಿಡ್ ಕಾಲದಲ್ಲಿ ಜನರು ಬದುಕಲೂ ಸಹ ಒದ್ದಾಡುವ ಸ್ಥಿತಿ ತಲುಪಿದಾಗ, ಬಿಜೆಪಿ ಸಚಿವರು ಮಾತ್ರ ಲೂಟಿ ಹೊಡೆಯುವ ಕೆಲಸದಲ್ಲಿ ಮುಂದಾಗಿದ್ದರು. ಶಾಸಕ ಯತ್ನಾಳ್ ಅವರ 40 ಸಾವಿರ ಕೋಟಿ ಹಗರಣದ ಆರೋಪಕ್ಕೆ ಬಿಜೆಪಿ ರಾಜ್ಯ ಹಾಗೂ ಕೇಂದ್ರ ನಾಯಕರು ಉತ್ತರಿಸಲಿ ಎಂದು ಸವಾಲು ಹಾಕಿದರು.