ತೆರಿಗೆ ಅನ್ಯಾಯದ ಬಗ್ಗೆ ಖರ್ಗೆ ಒಂದು ದಿನವೂ ಮಾತನಾಡಲಿಲ್ಲವೇಕೆ? : ವಿಪಕ್ಷ ನಾಯಕ ಆರ್. ಅಶೋಕ್

| Published : Aug 10 2024, 01:36 AM IST / Updated: Aug 10 2024, 12:50 PM IST

ತೆರಿಗೆ ಅನ್ಯಾಯದ ಬಗ್ಗೆ ಖರ್ಗೆ ಒಂದು ದಿನವೂ ಮಾತನಾಡಲಿಲ್ಲವೇಕೆ? : ವಿಪಕ್ಷ ನಾಯಕ ಆರ್. ಅಶೋಕ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರವೇ ಬೀದಿಗಿಳಿದು ನಾನು ಕಳ್ಳ ಅಲ್ಲ, ಕಳ್ಳ ಅಲ್ಲ ಎಂದು ಸಾರುತ್ತಿದೆ. ಹಾಗಾಗಿ ನಮ್ಮದು ಹೋರಾಟ, ಅವರದ್ದು ಬರೀ ಹಾರಾಟ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕುಹಕವಾಡಿದರು.

 ಮಂಡ್ಯ :  ಸರ್ಕಾರ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಸುವುದು ವಿರೋಧ ಪಕ್ಷದ ಹಕ್ಕು. ವಿಧಾನಸಭೆ ಒಳಗೆ ಉತ್ತರಿಸುವುದು ಸರ್ಕಾರದ ಕೆಲಸ. ಆದರೆ, ಸರ್ಕಾರವೇ ಬೀದಿಗಿಳಿದು ನಾನು ಕಳ್ಳ ಅಲ್ಲ, ಕಳ್ಳ ಅಲ್ಲ ಎಂದು ಸಾರುತ್ತಿದೆ. ಹಾಗಾಗಿ ನಮ್ಮದು ಹೋರಾಟ, ಅವರದ್ದು ಬರೀ ಹಾರಾಟ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕುಹಕವಾಡಿದರು.

ವಾಲ್ಮೀಕಿ ಹಗರಣದ ವಿಚಾರವಾಗಿ ನಿಲುವಳಿ ಸೂಚನೆ ತಂದಾಗ ನಿಮ್ಮ ಬಳಿ ದಾಖಲೆ ಇದೆಯಾ? ಎಂದಿದ್ದರು. ಹಗರಣದ ಬಗ್ಗೆ ೫೦ ಪುಟದ ದಾಖಲೆ ಕೊಟ್ಟಿದ್ದೇವೆ. ಆದರೆ, ಸಿಎಂ ಸಿದ್ದರಾಮಯ್ಯ ಅದನ್ನು ಮುಚ್ಚಿಡುವ ಪ್ರಯತ್ನ ಮಾಡಿದರು. ಅದರ ಬಗ್ಗೆ ಚರ್ಚೆ ಮಾಡುವುದಕ್ಕೆ ಸರ್ಕಾರ ಹಾಗೂ ಮಂತ್ರಿಗಳು ತಯಾರಿರಲಿಲ್ಲ. ಹಾದಿಬೀದಿಯಲ್ಲಿ ಏನೇನೋ ಮಾತನಾಡಬೇಡಿ. ಸದನದಲ್ಲಿ ಮಾತನಾಡಿ ಅಂದರು. ಚರ್ಚೆಗೆ ಅವಕಾಶ ಕೊಟ್ಟಿದ್ದರೆ ಪಾದಯಾತ್ರೆ ಬಗ್ಗೆ ಯೋಚನೆ ಮಾಡುತ್ತಿದ್ದೆವು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮನ್ನು ಎದುರಿಸಲು ಕಾಂಗ್ರೆಸ್‌ನಿಂದ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಪಾದಯಾತ್ರೆ ಮಾಡಿ ಜನರಿಗೆ ಸಂದೇಶ ಕೊಡುತ್ತಿದ್ದೇವೆ. ಆದರೆ, ಕಾಂಗ್ರೆಸ್ ಸಮಾವೇಶ ಮಾಡುವ ಅವಶ್ಯಕತೆ ಏನಿತ್ತು. ಜನರ ಹಣವನ್ನು ದುಂದುವೆಚ್ಚ ಮಾಡುವ ಅಗತ್ಯವಿತ್ತಾ ಎಂದು ಪ್ರಶ್ನಿಸಿದರು.

ಕೆಂಪಣ್ಣನವರ ಪುಸ್ತಕ ಮುಚ್ಚಿಟ್ಟಿದ್ದೇಕೆ?:

ಗೌರವಾನ್ವಿತ ನ್ಯಾಯಮಾರ್ತಿಯಾಗಿದ್ದ ಕೆಂಪಣ್ಣ ಅವರ ಆಯೋಗ ನೇಮಕ ಮಾಡಿದ್ದರು, ಸಿದ್ದರಾಮಯ್ಯ ಅವರು ತೆರೆದ ಪುಸ್ತಕ ಎನ್ನುತ್ತಾರೆ, ಇಲ್ಲಿ ಕೆಂಪಣ್ಣನ ಪುಸ್ತಕ ಏಕೆ ಮುಚ್ಚಿಟ್ಟಿದ್ದು ಜನರಿಗೆ ತಿಳಿಸಲಿ, ಆರು ತಿಂಗಳು ಸಮಯ ನೀಡಿದ್ದರು, ಈಗ ಹತ್ತು ವರ್ಷವಾಗಿದೆ, ಪುಸ್ತಕ ತೆರೆಯುವುದಿಲ್ಲ ನೀವು ಸೀಲ್‌ ಮಾಡಿ ಇಟ್ಟುಕೊಂಡಿದ್ದೀರಾ, ತಪ್ಪು ಮಾಡಿಲ್ಲ ಎಂದ ಮೇಲೆ ಬಿಜೆಪಿಯವರು ಸುಳ್ಳು ಹೇಳುತ್ತೀರಾ ಎಂದು ಹೇಳಿ ಬೆಲೆ ಬಾಳುವ ಹ್ಯೂಬ್ಲೆಟ್ ವಾಚ್‌ನ್ನು ಏಕೆ ವಾಪಸ್‌ ಕೊಟ್ಟರು? ಮುಡಾ ಸೈಟ್‌ ಏಕೆ ವಾಪಸ್‌ ಕೊಡಬೇಕು? ಸಿದ್ದರಾಮಯ್ಯ ಅವರು ಸಿಕ್ಕಿಕೊಳ್ಳುವಾಗ ಮೈಗೆಲ್ಲ ಎಣ್ಣೆ ಹಚ್ಚಿಕೊಂಡು ನುಣುಚಿಕೊಂಡು ಹುಷಾರಾಗಿ ಬಿಡುತ್ತಾರೆ ಎಂದು ಕುಟುಕಿದರು.

ರಾಜ್ಯಪಾಲರಿಗೆ ಒತ್ತಡ ಹೇರುತ್ತಿದ್ದಾರೆ, ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡುತ್ತಿಲ್ಲ ಎನ್ನುವ ಸಿದ್ದರಾಮಯ್ಯ ಅವರು ವಕೀಲರು ಇದ್ದಾರೆ, ದೆಹಲಿಯಲ್ಲಿ ಸೋನಿಯಾ ಗಾಂಧಿ ಸರ್ಕಾರವಿತ್ತು, ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಸರ್ಕಾರವಿತ್ತು, ಇವರ ಮೇಲೆ ಖಾಸಗಿ ದೂರು ಬರುತ್ತದೆ, ಅಂದಿನ ರಾಜ್ಯಪಾಲ ಹಂಸರಾಜ್‌ ಭಾರಧ್ವಾಜ್‌ ಅವರಿದ್ದರು. ಅವರು ಪ್ರಾಸಿಕ್ಯೂಷನ್‌ಗೆ ಯಾವ ಆಧಾರ ಮೇಲೆ ಯಡಿಯೂರಪ್ಪ ಅವರಿಗೆ ಕೊಟ್ಟರು, ಅದೇ ಅಂಬೇಡ್ಕರ್‌ ಸಂವಿಧಾನವೇ ಈಗಲೂ ಇರುವುದು, ಅವತ್ತು ಕೊಟ್ಟಾಗ ಸ್ವಾಗತ ಕೋರಿ ಈಗ ವೆರಿಬ್ಯಾಡ್‌ ಎನ್ನುವುದು ಸಿದ್ದರಾಮಯ್ಯ ಅವರಿಗೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಸಿಕ್ಯೂಷನ್‌ ಕೊಡಲಿ ಬಿಡಿ, ತನಿಖೆ ಮಾಡಿದರೆ ಮಾಡಲಿ, ಸಿದ್ದರಾಮಯ್ಯ ಅವರೇ ನೀವು ತಪ್ಪು ಮಾಡಿಲ್ಲ ಎಂದ ಮೇಲೆ ಭಯ ಪಡುವ ಅಗತ್ಯವಿಲ್ಲ, ಸದನದಲ್ಲಿ ನೀವು ಚರ್ಚೆಗೆ ಅವಕಾಶ ಕೊಟ್ಟಿದ್ದರೆ ಅರ್ಥ ಸಮಸ್ಯೆ ಬಗೆಹರಿಯುತ್ತಿತ್ತು, ಹಾಗೆ ನೀವು ಮಾಡಲಿಲ್ಲ, ತಪ್ಪು ಮಾಡಿರುವವರಿಗೆ ಶಿಕ್ಷೆ ಆಗುತ್ತದೆ ಬಿಡಿ ಸಿದ್ದರಾಮಯ್ಯ ಅವರೇ ಏಕೆ ಗೊಂದಲ ಮಾಡುತ್ತೀರಿ ಎಂದರು.

ಖರ್ಗೆ ಏಕೆ ಮಾತನಾಡಲಿಲ್ಲ:

ಕರ್ನಾಟಕಕ್ಕೆ ತೆರಿಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹೊಡೆಯುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರು ವಿರೋಧಪಕ್ಷದ ನಾಯಕರಾಗಿದ್ದಾರೆ. ಅವರೇಕೆ ಒಂದೇ ಒಂದು ದಿನ ಕರ್ನಾಟಕದ ಅನುದಾನ ತಾರತಮ್ಯದ ಬಗ್ಗೆ ಮಾತನಾಡಿಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಹೇಳಿದರು.

ನಿಮಗೆ ಧೈರ್ಯ ಇದ್ದಿದ್ದರೆ ವಿರೋಧ ಪಕ್ಷದಲ್ಲಿದಾಗ ನಮ್ಮ ದಾಖಲೆ ಬಿಡುಗಡೆ ಮಾಡಬೇಕಿತ್ತು. ಆಗ ಜನರು ನಿಮನ್ನು ಶಹಬ್ಬಾಸ್ ಎನ್ನುತ್ತಿದ್ದರು. ಅಧಿಕಾರದಲ್ಲಿದ್ದುಕೊಂಡು ಬಿಜೆಪಿಯ ವಿರುದ್ಧ ದಾಖಲೆ ಬಿಡುಗಡೆ ಮಾಡಿದರೆ ಜನ ಬೆಲೆ ಕೊಡುತ್ತಾರಾ ಎಂದ ಅಶೋಕ್, ಕಾಂಗ್ರೆಸ್ ೧೪ ತಿಂಗಳ ಕಾಲ ಮಾಡಿದ ಭ್ರಷ್ಟಾಚಾರದ ಪುಸ್ತಕ ೧೪ ಅವತಾರ, ಬ್ರ್ಯಾಂಡ್ ಬೆಂಗಳೂರನ್ನು ಬ್ಯಾಡ್ ಬೆಂಗಳೂರು ಮಾಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಡಿಸಿಟ್ಟಿದ್ದೀರಿ ಎಂದು ಟೀಕಿಸಿದರು.

ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ವಕ್ತಾರ ಚಂದ್ರಶೇಖರ್, ಮಾಧ್ಯಮ ಸಂಚಾಲಕ ನಾಗೇಶ್‌, ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವಯ್ಯ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್‌, ಮಾಧ್ಯಮ ಸಂಚಾಲಕ ನಾಗಾನಂದ್‌ ಇದ್ದರು.