ಆಶ್ರಯ ಹಕ್ಕುಪತ್ರ ನೀಡುವಲ್ಲಿ ತಾರತಮ್ಯವೇಕೆ?

| Published : Nov 19 2023, 01:30 AM IST

ಸಾರಾಂಶ

ಬಿಜೆಪಿ ಪಾಲಿಕೆ ಸದಸ್ಯರಿಂದ ಪ್ರತಿಭಟನೆ । ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳ ಬಡವರ ವಿರೋಧಿ ಧೋರಣೆ: ಕೆ.ಪ್ರಸನ್ನ ಆಕ್ರೋಶ

ಬಿಜೆಪಿ ಪಾಲಿಕೆ ಸದಸ್ಯರಿಂದ ಪ್ರತಿಭಟನೆ । ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳ ಬಡವರ ವಿರೋಧಿ ಧೋರಣೆ: ಕೆ.ಪ್ರಸನ್ನ ಆಕ್ರೋಶ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಡವರಿಗೆ ಆಶ್ರಯ ಮನೆಗಳ ಹಕ್ಕುಪತ್ರ ವಿತರಿಸದೇ, ವಿಳಂಬ ಮಾಡುತ್ತಿರುವ ಜಿಲ್ಲಾಡಳಿತ, ನಗರ ಪಾಲಿಕೆ ವರ್ತನೆ ಖಂಡಿಸಿ, ಹಕ್ಕುಪತ್ರ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆಯೆಂದು ಎಂದು ಉಪ ಮೇಯರ್‌ ಯಶೋಧಾ ಯೋಗೇಶ್, ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ನೇತೃತ್ವದಲ್ಲಿ ಬಿಜೆಪಿ ಪಾಲಿಕೆ ಸದಸ್ಯರು ಪಾಲಿಕೆ ಆವರಣದಲ್ಲಿ ಅರ್ಜಿದಾರರ ಸಮೇತ ಶನಿವಾರ ದಿಢೀರ್ ಪ್ರತಿಭಟಿಸಿದರು.

ಇಲ್ಲಿನ ಪಾಲಿಕೆ ಆವರಣದಲ್ಲಿ ಬಿಜೆಪಿ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಆಶ್ರಯ ಮನೆಗಳ ಹಕ್ಕುಪತ್ರಗಳನ್ನು ವಿತರಿಸಲು ಒತ್ತಾಯಿಸಿ ಘೋಷಣೆಗಳ ಕೂಗಿದ ನಿವೇಶನ ಅರ್ಜಿದಾರರು, ಬಡ ಕುಟುಂಬಗಳು ಜಿಲ್ಲಾಡಳಿತ, ಪಾಲಿಕೆ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಪಾಲಿಕೆ ಆಯುಕ್ತೆ ರೇಣುಕಾರಿಗೆ ತಕ್ಷಣವೇ ಉತ್ತರ ಕ್ಷೇತ್ರದ ಬಡವರಿಗೂ ಹಕ್ಕುಪತ್ರ ನೀಡುವಂತೆ ಪಟ್ಟು ಹಿಡಿದರು.

ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ದಕ್ಷಿಣ ಕ್ಷೇತ್ರದ ಹಕ್ಕುಪತ್ರ ನೀಡಲು ತುದಿಗಾಲಲ್ಲಿ ಸಂಭ್ರಮದಿಂದ ನಿಂತಿರುವ ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳು ಉತ್ತರ ಕ್ಷೇತ್ರದ ನಿವೇಶನ ರಹಿತ ಬಡವರ ವಿಚಾರದಲ್ಲಿ ಕಡೆಗಣನೆ ಮಾಡುತ್ತಿದ್ದಾರೆ. ಕಳೆದ ಮಾರ್ಚ್‌ನಲ್ಲೇ ಹಕ್ಕುಪತ್ರಗಳು ಸರ್ಕಾರದಿಂದ ಬಂದಿವೆ. ಜನವರಿಯಲ್ಲೇ ಆಶ್ರಯ ಸಮಿತಿ ಸಭೆಯಲ್ಲಿ 987 ಫಲಾನುಭವಿಗಳ ಆಯ್ಕೆಯಾಗಿದ್ದು, ರಾಜೀವ್ ಗಾಂಧಿ ನಿಗಮದಿಂದಲೂ ಅನುಮೋದನೆಯಾಗಿವೆ. ಚುನಾವಣೆ ನೀತಿ ಸಂಹಿತೆಯೆಂದ ಅಧಿಕಾರಿಗಳು ಆರು ತಿಂಗಳಾದರೂ ಹಕ್ಕುಪತ್ರ ನೀಡುತ್ತಿಲ್ಲ ಎಂದು ಕಿಡಿಕಾರಿದರು.

ಬಡವರಿಗೆ ಹಕ್ಕುಪತ್ರ ನೀಡಲು ಅಧಿಕಾರಿಗಳು ಕುಂಟು ನೆಪ ಹೇಳುತ್ತಾ, ವಿಳಂಬ ಮಾಡುತ್ತಿದ್ದಾರೆ. ದಕ್ಷಿಣ ಕ್ಷೇತ್ರದಲ್ಲಿ ಲೋಕಾಯಕ್ತದಲ್ಲಿ ಪ್ರಕರಣ ಇರುವಂತಹ ಹೆಗಡೆ ನಗರದ ಆಶ್ರಯ ನಿವೇಶನದ ಹಕ್ಕುಪತ್ರ ವಿತರಿಸಿದ ಪಾಲಿಕೆ ಅಧಿಕಾರಿಗಳಿಗೆ ಉತ್ತರದ ಅರ್ಜಿದಾರ ಬಡವರ ಬಗ್ಗೆ ಯಾಕೆ ತಾತ್ಸಾರ? ದಕ್ಷಿಣದಲ್ಲೂ ಒಂದು ಭಾಗದ ಕೆಲವೇ ಜನರಿಗಷ್ಟೇ

ಹಕ್ಕುಪತ್ರ ನೀಡಿದ್ದು, ಬಹುತೇಕರಿಗೆ ಅಲ್ಲಿಯೂ ತಾರತಮ್ಯ ಮಾಡಿದ್ದೀರಿ. ದಕ್ಷಿಣಕ್ಕೆ 1400 ಫಲಾನುಭವಿಯಾಗಿ, ಹಕ್ಕುಪತ್ರ ಬಂದಿದ್ದರೂ ಅವುಗಳನ್ನು ವಿತರಿಸದೇ, ಕೇವಲ ಹೆಗ್ಡೆ ನಗರದ ಕೆಲವರಿಗಷ್ಟೇ ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮನವಿ ಆಲಿಸಿದ ಆಯುಕ್ತೆ ರೇಣುಕಾ, ಜಿಲ್ಲಾಧಿಕಾರಿಗಳಿಂದ ನಿರ್ದೇಶನ ಪಡೆದು, ಆದಷ್ಟು ಬೇಗನೆ ಆಶ್ರಯ ಮನೆಗಳ ಹಕ್ಕುಪತ್ರಗಳನ್ನು ವಿತರಣೆ ಮಾಡುವುದಾಗಿ ಭರವಸೆ ನೀಡಿದರು. ಆಯುಕ್ತರ ಭರವಸೆ ನಂತರ ಕಾಲಮಿತಿಯಲ್ಲೇ ಹಕ್ಕುಪತ್ರ ನೀಡುವಂತೆ ತಾಕೀತು ಮಾಡಿದ ವಿಪಕ್ಷ ನಾಯಕ ಪ್ರಸನ್ನಕುಮಾರ ಇತರರು ತಾತ್ಕಾಲಿಕವಾಗಿ ಹೋರಾಟ ಹಿಂಪಡೆದರು. ಪಾಲಿಕೆ ಸದಸ್ಯರಾದ ಮಾಜಿ ಮೇಯರ್ ಎಸ್.ಟಿ.ವೀರೇಶ, ಕೆ.ಎಂ.ವೀರೇಶ, ಆರ್.ಶಿವಾನಂದ, ವೀಣಾ ನಂಜಪ್ಪ, ರೇಖಾ ಸುರೇಶ ಗಂಡಗಾಳೆ, ಬಿಜೆಪಿ ಮುಖಂಡರಾದ ಎಸ್.ಟಿ.ಯೋಗೇಶ್ವರ, ಸುರೇಶ ಗಂಡಗಾಳೆ, ಜಯಪ್ರಕಾಶ ಇತರರಿದ್ದರು. ಉತ್ತರ ಕ್ಷೇತ್ರದಲ್ಲಿ ಹಕ್ಕುಪತ್ರ ನೀಡಲ್ಲವೇಕೆ?

ಉತ್ತರ ಕ್ಷೇತ್ರದಲ್ಲಿ 987 ಫಲಾನುಭವಿಗಳ ಹಕ್ಕುಪತ್ರ ಬಂದಿದ್ದು, ಅವುಗಳನ್ನು ಹಂಚಿಲ್ಲ. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರಿಗೆ ಉತ್ತರದ ಬಡವರು ಯಾರೂ ಕಣ್ಣಿಗೆ ಕಾಣುತ್ತಿಲ್ಲವೇ? ಯಾಕೆ ಹಕ್ಕುಪತ್ರ ನೀಡುತ್ತಿಲ್ಲ? ದಕ್ಷಿಣ ಆಶ್ರಯ ಮನೆ ಹಂಚಿಕೆ ವಿಚಾರ ಲೋಕಾಯುಕ್ತದಲ್ಲಿ ಕೇಸ್ ದಾಖಲಾದರೂ ಹಕ್ಕುಪತ್ರ ನೀಡಿದ್ದೀರಿ. ಆದರೆ, ಉತ್ತರದಲ್ಲಿ ಯಾವುದೇ ಕೇಸ್ ಇಲ್ಲದಿದ್ದರೂ, ಲೋಕಾಯುಕ್ತ ದೂರು ಎಂಬ ನೆಪವೊಡ್ಡಿ, ತಡೆ ಹಿಡಿದಿದ್ದೀರಿ. ಕುಂಟು ನೆಪ ಹೇಳಿ, ಕಾಲಹರಣ ಮಾಡುತ್ತಿದ್ದೀರಿ. ನೀವು ಹೀಗೆ ಹಕ್ಕುಪತ್ರ ನೀಡಲು ವಿಳಂಬ ಮಾಡಿದರೆ, ಎಲ್ಲಾ ಅರ್ಜಿದಾರರೂ ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳ ಧೋರಣೆ ವಿರುದ್ಧ ಕಾನೂನು ಮೊರೆ ಹೋಗಿ, ಹಕ್ಕುಪತ್ರ ಪಡೆಯಬೇಕಾಗುತ್ತದೆ ಎಂದು ಕೆ.ಪ್ರಸನ್ನಕುಮಾರ ಎಚ್ಚರಿಸಿದರು.

...........