ಸಿಎಂ ಪತ್ನಿ ಯಾಕೆ ಅಕ್ರಮ ಮಾಡುತ್ತಾರೆ?: ಡಿಕೆಶಿ

| Published : Jul 03 2024, 12:19 AM IST

ಸಾರಾಂಶ

ಸಿಎಂ ಹೆಂಡತಿ ಯಾಕೆ ಅಕ್ರಮ ಮಾಡುತ್ತಾರೆ? ಅವರ ಆಸ್ತಿ ಮುಡಾಗೆ ಭೂ ಸ್ವಾಧೀನ ಅಗಿದೆ. ಅದಕ್ಕೆ ಪರ್ಯಾಯ ಜಾಗ ಕೊಡಬೇಕು. ಹಾಗಾಗಿ ಅವರಿಗೆ ಸೈಟ್ ಕೊಟ್ಟಿರುತ್ತಾರೆ. ಬಿಜೆಪಿಯವರ ಆಡಳಿತದಲ್ಲೇ ಸೈಟ್ ಕೊಟ್ಟಿದ್ದಾರೆ. ಅವರು ಡಿನೋಟಿಫಿಕೇಷನ್ ಮಾಡಿಕೊಂಡಿಲ್ಲ. ಅದಕ್ಕಾಗಿ ಇನ್ಸೆಂಟಿವ್ ಸೈಟ್ ಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಮುಡಾದಲ್ಲಿ ೪ ಸಾವಿರ ಕೋಟಿ ರು. ಅಕ್ರಮನಾ? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಚ್ಚರಿ ವ್ಯಕ್ತಪಡಿಸಿದರು.

ಚನ್ನಪಟ್ಟಣದ ಭೈರಾಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ೪ ಸಾವಿರ ಕೋಟಿ ರು. ಅಕ್ರಮ ಆರೋಪ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದರು.

ಸಿಎಂ ಪತ್ನಿ ವಿರುದ್ಧವೂ ಅಕ್ರಮ ಸೈಟ್ ಪಡೆದ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿಎಂ ಹೆಂಡತಿ ಯಾಕೆ ಅಕ್ರಮ ಮಾಡುತ್ತಾರೆ? ಅವರ ಆಸ್ತಿ ಮುಡಾಗೆ ಭೂ ಸ್ವಾಧೀನ ಅಗಿದೆ. ಅದಕ್ಕೆ ಪರ್ಯಾಯ ಜಾಗ ಕೊಡಬೇಕು. ಹಾಗಾಗಿ ಅವರಿಗೆ ಸೈಟ್ ಕೊಟ್ಟಿರುತ್ತಾರೆ. ಬಿಜೆಪಿಯವರ ಆಡಳಿತದಲ್ಲೇ ಸೈಟ್ ಕೊಟ್ಟಿದ್ದಾರೆ. ಅವರು ಡಿನೋಟಿಫಿಕೇಷನ್ ಮಾಡಿಕೊಂಡಿಲ್ಲ. ಅದಕ್ಕಾಗಿ ಇನ್ಸೆಂಟಿವ್ ಸೈಟ್ ಕೊಟ್ಟಿದ್ದಾರೆ.ಅನುಪಾತದ ಆಧಾರದ ಮೇಲೆ ಸೈಟ್ ಕೊಡಲಾಗಿರುತ್ತದೆ. ಅದರಲ್ಲಿ ತಪ್ಪೇನಿದೆ? ಡಿನೋಟಿಫಿಕೇಷನ್ ಮಾಡದೇ ಇನ್ಸೆಂಟಿವ್ ಸೈಟ್ ಪಡೆದಿರೋದಕ್ಕೆ ಖುಷಿ ಪಡಬೇಕು ಎಂದರು.

ಮುಡಾ ಅಕ್ರಮ ಆರೋಪ ಹಿನ್ನೆಲೆ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ವಿರುದ್ಧ ನಮ್ಮ ಸಿಎಂ ಕಠಿಣವಾಗಿದ್ದಾರೆ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಆಗುತ್ತದೆ. ಏನೇ ಇದ್ದರೂ ನಮ್ಮ ಮುಖ್ಯಮಂತ್ರಿಗಳು ಈ ಬಗ್ಗೆ ತನಿಖೆ ಮಾಡುತ್ತಾರೆ. ಈ ಬಗ್ಗೆ ನನಗೆ ಪೂರ್ಣ ಪ್ರಮಾಣದ ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದರು.

ಸಚಿವರಾಗಿದ್ದ ನಾಗೇಂದ್ರ ಪ್ರಕರಣದಲ್ಲಿ ನಾನೂ ಪರಿಶೀಲನೆ ಮಾಡಿದೆ. ಹೈದರಾಬಾದ್‌ನಲ್ಲೂ ಮಾಹಿತಿ ತೆಗೆದುಕೊಂಡೆ. ನಮ್ಮ ಯಾವ ಮಂತ್ರಿಯೂ ಅದರಲ್ಲಿ ಭಾಗಿಯಾಗಿಲ್ಲ. ಯಾರೋ ಮಾಡಿದ್ದಾರೆ ಇಲ್ಲ ಅಂತ ಹೇಳಲ್ಲ. ಆದರೆ ನಮ್ಮ ರಾಜಕಾರಣಿಗಳು ಭಾಗಿಯಾಗಿಲ್ಲ ಎಂಬುವುದು ಸಮಾಧಾನ ತಂದಿದೆ.

ಪ್ರಕರಣದಲ್ಲಿ ಯಾರನ್ನೂ ಬೇಕಾದರೂ ತನಿಖೆ ಮಾಡಲಿ. ನಮ್ಮನ್ನೇ ಎಷ್ಟೋ ಕಡೆ ತನಿಖೆ ಮಾಡಲಿಲ್ಲವೇ?

ಹಾಗೆ ಅಕ್ರಮ ಪ್ರಕರಣದಲ್ಲಿ ಯಾರನ್ನು ಬೇಕಾದರೂ ತನಿಖೆ ಮಾಡಲಿ ಎಂದರು.

ಅರ್ಜಿ ವಿಲೇವಾರಿಗೆ ಅಧಿಕಾರಿಗಳಿಗೆ ಸಮಯ ನಿಗದಿ: ಚನ್ನಪಟ್ಟಣ ಇತಿಹಾಸದಲ್ಲೇ ಇಂತಹ ಕಾರ್ಯಕ್ರಮ ನಡೆದಿಲ್ಲ. ಜನರ ಮನೆ ಬಾಗಿಲಿಗೇ ಸರ್ಕಾರ ಬಂದಿರುವುದು ಇದೇ ಮೊದಲು. ಪ್ರತಿ ಜಿಲ್ಲೆಯಲ್ಲೂ ಜನಸ್ಪಂದನಾ ಕಾರ್ಯಕ್ರಮಕ್ಕೆ ಸಿಎಂ ಸೂಚನೆ ನೀಡಿದ್ದರು. ಅದರಂತೆ ಚನ್ನಪಟ್ಟಣದಲ್ಲಿ ನಾನು ವಿಶೇಷ ಆದ್ಯತೆ ನೀಡಿ ಕಾರ್ಯಕ್ರಮ ಮಾಡಿದ್ದೇನೆ. ಜನರ ಸಮಸ್ಯೆಗಳನ್ನು ಬಗೆಹರಿಸಿ ತೊಂದರೆಯಿಂದ ತಪ್ಪಿಸಬೇಕು. ಅರ್ಜಿ ವಿಲೇವಾರಿಗೆ ಅಧಿಕಾರಿಗಳಿಗೆ ಸಮಯ ನಿಗದಿಗೊಳಿಸುತ್ತೇವೆ ಎಂದರು.

ಶೀಘ್ರದಲ್ಲೇ ಜನರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು. ಚನ್ನಪಟ್ಟಣಕ್ಕೆ ಸಚಿವರಾದ ಜಮೀರ್ ಅಹ್ಮದ್, ಕೃಷ್ಣಭೈರೇಗೌಡರು ಬಂದು ಇಲ್ಲಿ ರಿವ್ಯೂ ಮೀಟಿಂಗ್ ಮಾಡಿ ಸಮಸ್ಯೆ ಆಲಿಸುತ್ತಾರೆ. ಮತ್ತಷ್ಟು ಇಲಾಖೆಗಳ ಸಚಿವರು ಬಂದು ಅಹವಾಲು ಸ್ವೀಕರಿಸುತ್ತಾರೆ ಎಂದರು.

ಉಪಚುನಾವಣೆಗಾಗಿ ಡಿಸಿಎಂ ಪ್ರವಾಸ ಮಾಡುತ್ತಿದ್ದಾರೆ ಎಂಬ ಆರೋಪ ವಿಚಾರಕ್ಕೆ, ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಚುನಾವಣೆಗೋಸ್ಕರವೇ ಬರುತ್ತಾರೆಂದುಕೊಳ್ಳಲಿ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಮಗೆ ರಾಜಕಾರಣ ಮುಖ್ಯವಲ್ಲ, ಜನರ ಬದುಕು ಮುಖ್ಯ ಎಂದು ಸ್ಪಷ್ಟಪಡಿಸಿದರು.

ಉಪಚುನಾವಣೆಗೋಸ್ಕರ ವಿಶೇಷ ಅನುದಾನದ ಆರೋಪಕ್ಕೆ ಪ್ರತಿಕ್ರಿಯಿಸಿ, ಹಿಂದೆ ಬಿಜೆಪಿಯವರು, ದಳದವರು ಕೊಟ್ಟಿರಲಿಲ್ಲವೇ? ನಾವೂ ಹಾಗೆಯೇ ಕೊಡುತ್ತಿದ್ದೇವೆ ಎಂದರು.

ಚನ್ನಪಟ್ಟಣ ಅಭ್ಯರ್ಥಿ ಫೈನಲ್ ವಿಚಾರಕ್ಕೆ, ಯಾರೇ ಅಭ್ಯರ್ಥಿ ಆದರೂ ನನಗೆ ಮತ ನೀಡಿ. ಅಭ್ಯರ್ಥಿ ನಾನೇ ಆದರೂ ನಾಮಿನಿ ಬೇರೆ ಇರುತ್ತಾರೆ. ನನಗೆ ಮತ ಹಾಕಿ ಎಂದು ಜನರಲ್ಲಿ ಕೇಳುತ್ತೇನೆ. ಯಾರೇ ಅಭ್ಯರ್ಥಿ ಆದರೂ ನನ್ನ ಮುಖ ನೋಡಿ ಮತ ನೀಡಿ ಎಂದು ಕೇಳುತ್ತೇವೆ ಎಂದರು.