ಸಾರಾಂಶ
- ಶ್ರೀಗಳ ಜನ್ಮದಿನ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಶಿವಕುಮಾರ್ ಅಭಿಮತ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ
ನಡು ಕರ್ನಾಟಕದಲ್ಲಿಯೇ ನಡೆದಾಡುವ ದೇವರು ಎಂದು ನಾಡಿನ ಅನೇಕ ಪೀಠಾಧಿಪತಿಗಳಿಂದ ಗೌರವಕ್ಕೆ ಪಾತ್ರರಾದವರು ಹಿರೇಕಲ್ಮಠದ ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯರು. ಹೊನ್ನಾಳಿ ತಾಲೂಕಿನಲ್ಲಿ ವಿಶೇಷವಾಗಿ ಶಿಕ್ಷಣ ಕ್ರಾಂತಿಯನ್ನೇ ಮಾಡಿದ ಅವರ 89ನೇ ಜನ್ಮದಿನಾಚರಣೆಯನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ ಎಂದು ಒಡೆಯರ ಹತ್ತೂರು ಗ್ರಾಮದ ಎಂ.ವಿ.ಸಿ.ಎಚ್.ಎಸ್. ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಸಿ. ಶಿವಕುಮಾರ್ ಹೇಳಿದರು.ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಜನ್ಮದಿನ ಅಂಗವಾಗಿ ಸೋಮವಾರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
70ರ ದಶಕದಲ್ಲಿ ಹೊನ್ನಾಳಿ ಅತ್ಯಂತ ಹಿಂದುಳಿದ ತಾಲೂಕಾಗಿತ್ತು. ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ಮಠದ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸಮಾಜದ ಅಭಿವೃದ್ಧಿಗೆ ಶೈಕ್ಷಣಿಕ ಅಭಿವೃದ್ಧಿಯೇ ರಹದಾರಿ ಎಂದು ಪರಿಗಣಿಸಿದ್ದ ಸ್ವಾಮೀಜಿ ಅವರು ಧಾರ್ಮಿಕ ಕೈಂಕರ್ಯಗಳ ಜೊತೆಯಲ್ಲಿ ತಮ್ಮ ವಿದ್ಯಾಪೀಠ ವತಿಯಿಂದ ಪ್ರಾಥಮಿಕ, ಪ್ರೌಢಶಾಲೆಗಳು, ಪದವಿಪೂರ್ವ ಮತ್ತು ಪದವಿ ಕಾಲೇಜುಗಳು, ಸಂಸ್ಕೃತ ಪಾಠ ಶಾಲೆಗಳು, ಬಿ.ಇಡಿ, ಕಾಲೇಜು, ಐಟಿಐ ಕಾಲೇಜುಗಳು ಹೀಗೆ ಶಿಕ್ಷಣ ಕ್ಷೇತ್ರದ ಅನೇಕ ಹಂತಗಳ ಶಾಲಾ- ಕಾಲೇಜುಗಳನ್ನು ತೆರೆದು ಹೊನ್ನಾಳಿಯಲ್ಲಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಹಾಡಿದರು ಎಂದರು.ಸಹಶಿಕ್ಷಕ ಎಂ.ಚನ್ನವೀರಯ್ಯ ಮಾತನಾಡಿ, ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ಮಠ ಅನ್ನದಾಸೋಹ, ಅಕ್ಷರ ದಾಸೋಹ ಹಾಗೂ ನ್ಯಾಯದಾನ ದಾಸೋಹ ಹೀಗೆ ಮೂರು ವಿಧವಾದ ದಾಸೋಹಗಳ ಮೂಲಕ ಜಾತಿ-ಮತ ಭೇದವಿಲ್ಲದೇ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಕೆಲಸ ಮಾಡಿಕೊಂಡು ಬರುತ್ತಿದೆ. ಜೊತೆಗೆ ಪ್ರಸ್ತುತ ಪೀಠಾಧ್ಯಕ್ಷರಾದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳೂ ಹಿರಿಯ ಗುರುಗಳ ಮಾರ್ಗದಲ್ಲಿಯೇ ಸಾಗುತ್ತ ಮಠದ ಕೀರ್ತಿ ಹೆಚ್ಚುವಂತೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನಕ್ಕೆ ಭಾಜನರಾದ ವಿದ್ಯಾರ್ಥಿಗಳಿಗೆ ಸೋಮವಾರ ಲಿಂಗೈಕ್ಯ ಶ್ರೀಗಳು ಜಯಂತಿ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಿದರು.ಶಾಲೆ ಶಿಕ್ಷಕರಾದ ಬಿ.ರಮೇಶ್, ಎಂ.ಕುಮಾರ್, ಬಿ.ಎನ್. ಗುರುಪ್ರಸಾದ್ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು. ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
- - -ಟಾಪ್ ಕೋಟ್
ಲಿಂಗೈಕ್ಯ ಗುರುಗಳ ಶೈಕ್ಷಣಿಕ ಸೇವಾ ಕಾರ್ಯಗಳಿಂದಾಗಿ ಇಂದು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳು ಶಿಕ್ಷಣ ಕ್ಷೇತ್ರಗಳಲ್ಲಿ ತನ್ನದೇ ಆದ ಸಾಧನೆಗಳನ್ನು ಮೆರೆಯುತ್ತಿವೆ. ಆ ಮೂಲಕ ಸಮಾಜಕ್ಕೆ ಉತ್ತಮ ಅಧಿಕಾರಿಗಳು, ಸಾಹಿತಿಗಳು, ಮುಖಂಡರು ಹಾಗೂ ಸಮಾಜ ಸೇವಕರನ್ನು ನೀಡುತ್ತಿದೆ- ಸಿ.ಸಿ.ಶಿವಕುಮಾರ್, ಮುಖ್ಯಶಿಕ್ಷಕ
- - - -1ಎಚ್.ಎಲ್.ಐ3:ಒಡೆಯರ ಹತ್ತೂರು ಗ್ರಾಮದ ಎಂವಿಸಿಎಚ್ಎಸ್ ಪ್ರೌಢಶಾಲೆಯಲ್ಲಿ ಸೋಮವಾರ ಹಿರೇಕಲ್ಮಠದ ಲಿಂ. ಒಡೆಯರ ಚಂದ್ರಶೇಖರ ಶಿವಾಚಾರ್ಯರ 89ನೇ ಜಯಂತಿ ಕಾರ್ಯಕ್ರಮ ನಡೆಯಿತು.