ಒಂದೇ ಗಂಟೆ ಮಳೆಯಾದರೂ ಪ್ರವಾಹ

| Published : May 14 2024, 01:00 AM IST

ಸಾರಾಂಶ

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಮಳೆ ಬಂದರೆ ಪ್ರವಾಹ ಪರಿಸ್ಥಿತಿ ಉಂಟಾಗಲು ಅವೈಜ್ಞಾನಿಕ ಕಾಮಗಾರಿಗಳೇ ಕಾರಣ ಎಂಬ ಮಾತು ಪ್ರಜ್ಞಾವಂತರದ್ದು. ಅಭಿವೃದ್ಧಿ ಹೆಸರಲ್ಲೇ ಕಾಮಗಾರಿ ಕೈಗೊಳ್ಳಲಾಗುತ್ತದೆ. ಆದರೆ ಎಲ್ಲವೂ ಅವೈಜ್ಞಾನಿಕ ಕಾಮಗಾರಿಗಳೇ ಆಗುತ್ತಿವೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡದಲ್ಲಿ ಯಾವ ನದಿಯೂ ಇಲ್ಲ. ಡ್ಯಾಂ ಕೂಡ ಇಲ್ಲ. ಆದರೂ ಒಂದೇ ಒಂದು ಗಂಟೆ ಮಳೆ ಸುರಿದರೂ ಪ್ರವಾಹ ಅನುಭವ ಆಗುತ್ತಿರುವುದೇಕೆ? ಜನಜೀವನ ಅಸ್ತವ್ಯಸ್ತವಾಗುತ್ತಿರುವುದೇಕೆ?

ಇದು ಹುಬ್ಬಳ್ಳಿ-ಧಾರವಾಡ ಮಹಾನಗರದ ಜನತೆಯ ಪ್ರಶ್ನೆ.

ಇದಕ್ಕೆ ಕಾರಣವೂ ಇಲ್ಲವೆಂದಿಲ್ಲ. ರಾಜ್ಯದ 2ನೇ ದೊಡ್ಡ ನಗರ ಎನಿಸಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಒಂದೇ ಗಂಟೆ ಮಳೆಯಾದರೂ ಸಾಕು. ಇಡೀ ನಗರಕ್ಕೆ ನದಿ ನುಗ್ಗಿದೇಯೇನೋ ಎಂದೆನಿಸದೇ ಇರದು. ಅಪಾರ್ಟ್‌ಮೆಂಟ್‌, ವಾಣಿಜ್ಯ ಸಂಕೀರ್ಣ, ಮಾಲ್‌ಗಳು, ಕಲ್ಯಾಣ ಮಂಟಪ, ಮನೆಗಳಿಗೆಲ್ಲ ನೀರು ನುಗ್ಗುತ್ತದೆ. ಅಪಾರ್ಟ್‌ಮೆಂಟ್‌ ಹಾಗೂ ವಿವಿಧ ಬಡಾವಣೆಗಳ ಮನೆಗಳಿಗೆ ನುಗ್ಗಿದ ನೀರು ಹೊರತೆಗೆಯಲು ನಿವಾಸಿಗಳು ರಾತ್ರಿಯೆಲ್ಲ ನಿದ್ದೆ ಇಲ್ಲದೇ ಕಾಲ ಕಳೆಯುವಂತಾಗುತ್ತದೆ. ರಸ್ತೆ ಬದಿ ನಿಲ್ಲಿಸಿದ ಬೈಕ್‌ ಗಳು ನದಿಯಲ್ಲಿ ತೇಲಿ ಹೋಗುತ್ತಿರುವಂತೆ ದಾಜಿಬಾನ್‌ ಪೇಟೆ ಸೇರಿದಂತೆ ವಿವಿಧೆಡೆ ಕಣ್ಣಿಗೆ ರಾಚುತ್ತಿರುತ್ತವೆ.

ಅವೈಜ್ಞಾನಿಕ ಕಾಮಗಾರಿ:

ಇದಕ್ಕೆಲ್ಲ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ ಎಂಬ ಮಾತು ಪ್ರಜ್ಞಾವಂತರದ್ದು. ಬೆಂಗಳೂರಲ್ಲೂ ಇದೇ ರೀತಿ. ಅಲ್ಲೂ ಸ್ವಲ್ಪ ಮಳೆಯಾದರೂ ಜನತೆ ತತ್ತರಿಸುತ್ತಾರೆ. ಬೆಂಗಳೂರು ಅಕ್ಷರಶಃ ಕಾಂಕ್ರಿಟ್‌ ಕಾಡಾಗಿದೆ. ಅದೇ ರೀತಿ ಇಲ್ಲೂ ಆಗುತ್ತಿದೆ. ಇಲ್ಲಿ ಅಭಿವೃದ್ಧಿ ಹೆಸರಲ್ಲೇ ಕಾಮಗಾರಿ ಕೈಗೊಳ್ಳಲಾಗುತ್ತದೆ. ಆದರೆ ಎಲ್ಲವೂ ಅವೈಜ್ಞಾನಿಕ ಕಾಮಗಾರಿಗಳೇ ಆಗುತ್ತಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬಿಆರ್‌ಟಿಎಸ್‌:

ಬಹುನಿರೀಕ್ಷಿತ ಬಿಆರ್‌ಟಿಎಸ್‌ ಕಾರಿಡಾರ್‌ನಿಂದಲೂ ಅರ್ಧ ಸಮಸ್ಯೆ ಎದುರಿಸುವಂತಾಗಿದೆ. ಇನ್ನು ಇಲ್ಲಿ ಸಿಆರ್‌ಎಫ್‌ ನಿಧಿಯಡಿ ಸಿಸಿ ರಸ್ತೆ ಕೈಗೊಳ್ಳಲಾಗಿದೆ. ಇದರೊಂದಿಗೆ ಪಾಲಿಕೆ, ಪಿಡಬ್ಲ್ಯೂಡಿಯಿಂದ ಎಲ್ಲ ಬಡಾವಣೆಗಳಲ್ಲಿ ಸಿಸಿ ರಸ್ತೆಗಳನ್ನೇ ಮಾಡಲಾಗಿದೆ. ಹಾಗೆ ನೋಡಿದರೆ ಸಿಸಿ ರಸ್ತೆಗಳನ್ನು ಘಾಟ್‌ ಪ್ರದೇಶ (ಕಾಡು- ಮೇಡುಗಳಿರುವ ದುರ್ಗಮವಾದ ರಸ್ತೆ) ದಲ್ಲಿ ನಿರ್ಮಿಸಬೇಕು. ಅಲ್ಲಿ ಪದೇ ಪದೇ ರಸ್ತೆ ಮಾಡಲು ಸಾಧ್ಯವಿಲ್ಲವೆಂಬ ಕಾರಣ ಹೆಚ್ಚು ಬಾಳಿಕೆ ಬರುವ ಸಿಸಿ ರಸ್ತೆ ನಿರ್ಮಿಸಲಾಗುತ್ತದೆ. ಇಲ್ಲಿ ನಿರ್ಮಿಸುವುದರಿಂದ ನೀರು ಇಂಗಲು ಜಾಗೆಯೇ ಇಲ್ಲದಂತಾಗಿದೆ. ಹೀಗಾಗಿ ಆ ನೀರೆಲ್ಲ ರಸ್ತೆ ಮೇಲೆ ಹರಿಯುತ್ತದೆ.

ಇನ್ನು ಅಕ್ಕಪಕ್ಕದಲ್ಲಿದ್ದ ಚರಂಡಿ, ಗಟಾರ್‌ಗಳನ್ನೆಲ್ಲ ರಸ್ತೆಯ ಅಂದಗೆಡಿಸುತ್ತವೆ ಎಂದುಕೊಂಡು ಫೆವರ್ಸ್‌ ಹಾಕಿ ಪ್ಯಾಕ್‌ ಮಾಡಲಾಗಿದೆ. ಇದರಿಂದಾಗಿ ಚರಂಡಿಗಳಲ್ಲಿ ಹೂಳು ತುಂಬಿರುವುದು ತಿಳಿಯುವುದಿಲ್ಲ. ಮಳೆ ಬಂದರೆ ನೀರು ಹರಿದು ಹೋಗಲು ಜಾಗ ಸಿಗದೇ ರಸ್ತೆ ಮೇಲೆ ಹರಿದರೆ, ಚರಂಡಿಯ ಕೊಳಚೆ ಕೂಡ ರಸ್ತೆ ಮೇಲೆ ಇರುತ್ತದೆ. ಇನ್ನು ಮಹಾನಗರ ಪಾಲಿಕೆಯಂತೂ ರಾಜಕಾಲುವೆಗಳನ್ನು ಸರಿಯಾಗಿ ನಿರ್ವಹಿಸುವುದಿಲ್ಲ. ಆ ಕೊಳಚೆ ನೀರು ಕೂಡ ಪ್ರವಾಹದಂತೆ ರಸ್ತೆ ಮೇಲೆ ಹರಿದು ಎಲ್ಲೆಂದರಲ್ಲಿ ನುಗ್ಗುತ್ತದೆ. ಹೀಗಾಗಿ ಮಹಾನಗರ ಸ್ವಲ್ಪ ಮಳೆಯಾದರೂ ಸಾಕು ಪ್ರವಾಹ ಪರಿಸ್ಥಿತಿ ಎದುರಿಸುವಂತಾಗುತ್ತದೆ ಎಂಬುದು ಪ್ರಜ್ಞಾವಂತರ ಅಂಬೋಣ.

ಇನ್ನಾದರೂ ಚರಂಡಿ ಹೂಳು ತೆಗೆಯಲು ಕ್ರಮಕೈಗೊಳ್ಳಬೇಕು. ಈಗ ನಿರ್ಮಿಸಿರುವುದನ್ನು ಬಿಟ್ಟು ಮುಂದೆ ನಿರ್ಮಿಸಬೇಕಾದ ರಸ್ತೆಗಳನ್ನು ಸಿಸಿ ರಸ್ತೆ ಬದಲು ಡಾಂಬರ್‌ ರಸ್ತೆಗಳನ್ನೇ ನಿರ್ಮಿಸಬೇಕು. ಇದರಿಂದಾಗಿ ಡಾಂಬರ್‌ ರಸ್ತೆಯಲ್ಲಿ ಮಳೆ ನೀರು ಇಂಗುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಗಮನ ಹರಿಸಬೇಕಿದೆ ಎಂಬುದು ಪರಿಸರವಾದಿಗಳ ಆಗ್ರಹ. ಈ ನಿಟ್ಟಿನಲ್ಲಿ ಯೋಚನೆ ಮಾಡುವರೇ? ಆಡಳಿತ ವರ್ಗ ಎಂಬುದೀಗ ಪ್ರಶ್ನೆ.