ಸಾರಾಂಶ
- ಕುಟುಂಬ ಬಿಟ್ಟು ಹಗಲಿರುಳು ದುಡಿಯುವ ಪೊಲೀಸರ ಪರಿಶ್ರಮದ ಅರಿವಿಲ್ಲವೇ?: ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಚಾಟಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ನ್ಯಾಮತಿ ಎಸ್‌ಬಿಐ ಬ್ಯಾಂಕ್ ದರೋಡೆಗೆ ಮುನ್ನವೇ ಭದ್ರತೆ ಬಗ್ಗೆ ಎಚ್ಚರಿಸಿದ್ದರೂ ನಿಮ್ಮ ನಿರ್ಲಕ್ಷ್ಯದಿಂದಾಗಿ ಪೊಲೀಸ್ ಇಲಾಖೆ ಸುಮಾರು 6 ತಿಂಗಳ ಕಾಲ ಹಗಲು-ರಾತ್ರಿ ಎನ್ನದೇ ಶ್ರಮವಿಸಿ, ಶಕ್ತಿ, ಸಂಪನ್ಮೂಲವನ್ನೆಲ್ಲಾ ಬಳಸಿ, ಪ್ರಕರಣ ಪತ್ತೆ ಹಚ್ಚಿದೆ. ಇಷ್ಟೆಲ್ಲಾ ಗೊತ್ತಿದ್ದರೂ ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್‌ಗಳ ಸುರಕ್ಷತೆ, ಭದ್ರತೆ ಬಗ್ಗೆ ಹೆಚ್ಚಿನ ಗಮನಹರಿಸುತ್ತಿಲ್ಲ ಏಕೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಚಾಟಿ ಬೀಸಿದರು.ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಎಲ್ಲ ಸರ್ಕಾರಿ ಬ್ಯಾಂಕ್, ಅರೆಸರ್ಕಾರಿ ಬ್ಯಾಂಕ್‌ಗಳ ಭದ್ರತಾ ಕ್ರಮಗಳ ಕುರಿತಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ನ್ಯಾಮತಿ ಪಟ್ಟಣದ ಎಸ್‌ಬಿಐನಲ್ಲಿ 26.10.2024ರಂದು ದರೋಡೆ ನಡೆಯಿತು. ಪ್ರಕರಣ ಭೇದಿಸಲು ಇಲಾಖೆ ಅಧಿಕಾರಿ, ಸಿಬ್ಬಂದಿ ಸತತ 6 ತಿಂಗಳ ಕಾಲ ನಮ್ಮ ಅಧಿಕಾರಿ, ಸಿಬ್ಬಂದಿ ತಮ್ಮ ಮನೆ, ಮಕ್ಕಳು, ಕುಟುಂಬ ಬಿಟ್ಟು ಕಳ್ಳರ ಹಿಡಿಯಲು ಶ್ರಮಿಸಬೇಕಾಯಿತು. ಆ ಬ್ಯಾಂಕ್ ದರೋಡೆಗೆ ಮುಂಚೆಯೇ ನಿಮಗೆ ಎಚ್ಚರಿಕೆ ನೀಡಲಾಗಿತ್ತು. ಬ್ಯಾಂಕ್‌ನಲ್ಲಿರುವುದು ಸಾರ್ವಜನಿಕರ ಹಣ. ಹಾಗಿದ್ದರೂ ಏಕೆ ನಿರ್ಲಕ್ಷ್ಯ ಎಂದರು.ಸಭೆಗೆ ಬಂದ ಅಧಿಕಾರಿಗಳಿಗೆ ನಾವು ಶೇ.100 ಸೆಕ್ಯೂರಿಟಿ ಆಡಿಟ್ ರಿಪೋರ್ಟ್ ಕೊಟ್ಟಿದ್ದೇವೆ. ಏನು ವೈಫಲ್ಯವಿದೆ, ಅವುಗಳನ್ನು ಸರಿಪಡಿಸಿದ್ದೀರಾ? ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹಿಂದೆಯೇ ಸಭೆ ಮಾಡಿ, ನಿಮಗೆ ಭದ್ರತಾ ಕ್ರಮಗಳ ಬಗ್ಗೆ ಸೂಚಿಸಿದ್ದರೂ, ಇದುವರೆಗೆ ಯಾರೂ ಅನುಪಾಲನಾ ವರದಿ ನೀಡಿಲ್ಲ. ವಿಜಾಪುರದಲ್ಲಿ ಮೊನ್ನೆ 2 ಕಳವು ಪ್ರಕರಣ ಆಗಿವೆ. ಅದಕ್ಕೆ ಮುಂಚೆ ದಾವಣಗೆರೆ ಜಿಲ್ಲೆಯಲ್ಲೇ ಆಗಿತ್ತು. ಬ್ಯಾಂಕ್ ಸೆಕ್ಯೂರಿಟಿ ಕ್ರಮಗಳನ್ನು ಯಾಕೆ ನೀವ್ಯಾರು ಪಾಲಿಸುತ್ತಿಲ್ಲ? ಇಂತಹ ಪ್ರಕರಣ ತಡೆಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನಿಮ್ಮ ನಿರ್ಲಕ್ಷ್ಯದಿಂದ ಪೊಲೀಸರ ವಿಶ್ವಾಸ, ಅರ್ಹತೆಗೆ ಧಕ್ಕೆಯಾಗುತ್ತದೆ. ನಮ್ಮ ಇಲಾಖೆ ಅಧಿಕಾರಿಗಳಿಗೆ ಅಲಾರ್ಮ್ ಬರುತ್ತದೆಂಬ ಬಗ್ಗೆ ಈವರೆಗಾದರೂ ಯಾರು ಪರಿಶೀಲಿಸಿದ್ದೀರಾ? ಯಾವ್ಯಾವ ಬ್ಯಾಂಕ್‌ಗಳಲ್ಲಿ ಕ್ಲೌಡ್ ಸ್ಟೋರೇಜ್ ಇದೆಯೆಂಬ ಬಗ್ಗೆ ಮಾಹಿತಿ ನೀಡಬೇಕು. ಡಿವಿಆರ್ ಕಾಣದಂತೆ ಇಡಿ. ಕ್ಲೌಡ್ ಸ್ಟೋರೇಜ್ ಅಳವಡಿಸಿ, ಸೆನ್ಸಾರ್ ಕ್ಯಾಮರಾ, ಹಿಡನ್ ಕ್ಯಾಮರಾ ಅಳವಡಿಸಿ. ಸೆಕ್ಯೂರಿಟಿ ಸಿಸ್ಟಂ ನಮ್ಮೆಲ್ಲಾ ಅಧಿಕಾರಿಗಳಿಗೆ ಲಿಂಕ್ ಆಗಿದೆಯಾ ಎಂಬುದನ್ನೂ ಖಚಿತಪಡಿಸಿಕೊಂಡು, ವರದಿ ನೀಡಬೇಕು. ಡಿವಿಆರ್ ಅನ್ನು ಸೆಕ್ಯೂರ್ ಲಾಕ್ ಸಿಸ್ಟಂನಲ್ಲಿಟ್ಟು, ಭದ್ರಪಡಿಸಬೇಕು. 24*7 ಕಾರ್ಯನಿರ್ವಹಿಸುವ 112 ಎಆರ್‌ಎಸ್ ಹೊಯ್ಸಳ ವಾಹನ ಇದೆ. ಅಂತಹವರೆಲ್ಲಾ ಅಲರ್ಟ್ ಆಗುತ್ತಾರೆ. ಮೆಸೇಜ್ ಬರುತ್ತಿದ್ದಂತೆ ತಕ್ಷಣ ಅಲ್ಲಿಗೆ ಭೇಟಿ ನೀಡುತ್ತಾರೆ. ಬ್ಯಾಂಕ್ ಅಧಿಕಾರಿಗಳು ಮೊದಲು ನಮ್ಮ ಅಧಿಕಾರಿ ವರ್ಗದ ಸಂಪರ್ಕದಲ್ಲಿರಿ ಎಂದು ಭದ್ರತಾ ಸಲಹೆಗಳನ್ನು ನೀಡಿದರು.ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಎಎಸ್‌ಪಿ ಪರಮೇಶ್ವರ ಹೆಗಡೆ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಡುದಯ್ಯ ಹಿರೇಮಠ, ಎಸ್‌ಬಿಐ ಬ್ಯಾಂಕ್ ವಲಯದ ಅಧಿಕಾರಿ ಮಾನವ ಕುಮಾರ, ಡಿವೈಎಸ್ಪಿಗಳಾದ ಬಿ.ಎಸ್. ಬಸವರಾಜ, ಬಿ.ಶರಣ ಬಸವೇಶ್ವರ, ಪಿ.ಬಿ. ಪ್ರಕಾಶ, ನಾಗಪ್ಪ ಬಂಕಾಳಿ ಸೇರಿದಂತೆ ಅಧಿಕಾರಿ, ಸಿಬ್ಬಂದಿ, ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಇದ್ದರು.
- - -(ಬಾಕ್ಸ್)
* ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ಬಾರದಿರಲಿ: ಡಿಸಿದಾವಣಗೆರೆ: ಜಿಲ್ಲೆಯ ಸರ್ಕಾರಿ, ಅರೆ ಸರ್ಕಾರಿ ಬ್ಯಾಂಕ್‌ಗಳು ಪೊಲೀಸ್ ಇಲಾಖೆ ಸ್ಪಷ್ಟ ಸೂಚನೆ ನೀಡಿದ್ದರೂ ಇನ್ನೂ ಸುರಕ್ಷತಾ, ಭದ್ರತಾ ಕ್ರಮಗಳನ್ನು ಯಾಕೆ ಅಳವಡಿಸಿಕೊಂಡಿಲ್ಲ. ಬರೀ ವ್ಯವಹಾರ ಮಾಡುವುದಷ್ಟೇ ಅಲ್ಲ. ಜನರ ಹಣ, ಆಭರಣ, ಸ್ವತ್ತು ರಕ್ಷಣೆ ಬಗ್ಗೆಯೂ ಬ್ಯಾಂಕ್‌ಗಳು ಗಮನ ಇಡಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಾಕೀತು ಮಾಡಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಎಲ್ಲ ಸರ್ಕಾರಿ ಬ್ಯಾಂಕ್, ಅರೆ ಸರ್ಕಾರಿ ಬ್ಯಾಂಕ್‌ಗಳ ಭದ್ರತಾ ಕ್ರಮಗಳ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೊದಲು ಜನರಿಗೆ ಬ್ಯಾಂಕ್ ಮೇಲೆ ನಂಬಿಕೆ ಬರಬೇಕೆಂದರೆ ಜನರ ಸ್ವತ್ತುಗಳಿಗೆ ಸೂಕ್ತ ಭದ್ರತೆ ನೀಡಬೇಕು ಎಂದರು.ಸೆಕ್ಯೂರಿಟಿ ಸಿಸ್ಟಂ ಸುಧಾರಿಸಲು 3 ತಿಂಗಳ ಅವಕಾಶ ಬೇಡ. ಒಂದೇ ತಿಂಗಳಲ್ಲಿ ಪಾಲನಾ ವರದಿ ನೀಡಬೇಕು. ಆಯುಧ ಪರವಾನಿಗೆ ಪಡೆದ ಉತ್ತಮ ಗುಣಮಟ್ಟದ ಬಂದೂಕುಗಳನ್ನು ಹೊಂದಿರುವ ಆರ್ಮ್ಸ್ ಗಾರ್ಡ್‌ಗಳನ್ನು ಭದ್ರತೆಗಾಗಿ ನೇಮಿಸಿಕೊಳ್ಳಿ ಎಂದು ಡಿಸಿ ಭದ್ರತೆ ಸುಧಾರಣೆಗೆ ಸಲಹೆಗಳನ್ನು ಸೂಚಿಸಿದರು.
- - -(ಕೋಟ್)
ಎಲ್ಲ ಬ್ಯಾಂಕ್‌ನವರೂ ಇ-ಬೀಟ್ ಸಿಸ್ಟಮ್‌ಗೆ ಲಿಂಕ್ ಆಗಿದ್ದೀರಾ? ನಮ್ಮ ಪೊಲೀಸ್‌ನವರು ಬೀಟ್ ಚೆಕ್ ಮಾಡುತ್ತಿದ್ದಾರಾ ಎಂಬ ಬಗ್ಗೆ ಮಾಹಿತಿ ನೀಡಬೇಕು. ಒಟ್ಟು 272 ಬ್ಯಾಂಕುಗಳು ಹಾಗೂ 292 ಎಟಿಎಂಗಳು ಜಿಲ್ಲೆಯಲ್ಲಿವೆ. ಅವುಗಳನ್ನು ಕ್ರಮಬದ್ಧವಾಗಿ ಚೆಕ್ ಮಾಡುತ್ತಿದ್ದಾರಾ ಎಂಬ ಬಗ್ಗೆ ಬ್ಯಾಂಕ್ ಅಧಿಕಾರಿಗಳು ನಮಗೆ ಮಾಹಿತಿ ನೀಡಬೇಕು.- ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ.
- - --24ಕೆಡಿವಿಜಿ8, 9:
ದಾವಣಗೆರೆ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಎಸ್‌ಪಿ ಉಮಾ ಪ್ರಶಾಂತ ಮಾತನಾಡಿದರು.