ಸಾರಾಂಶ
ಧಾರವಾಡ:
ಸಹಕಾರ ಇಲಾಖೆ ಅಡಿ ಬರುವ ಎಲ್ಲ ತರಹದ ಸಂಘ-ಸಂಸ್ಥೆಗಳು, ಬ್ಯಾಂಕ್‌ಗಳು ಕಡ್ಡಾಯವಾಗಿ ಇದೇ ಒಂದು ಸಂಸ್ಥೆಯಿಂದ ಸಂವಿಧಾನ ಪೀಠಿಕೆಯ ನಾಮಫಲಕ ಅಳವಡಿಸಬೇಕು ಎಂಬ ಸಹಕಾರಿ ಇಲಾಖೆಯ ಆದೇಶ ಇದೀಗ ಸಹಕಾರ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.ಈಗಾಗಲೇ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಸಂವಿಧಾನ ಪೀಠಿಕೆ ಅಳವಡಿಸಿದ್ದು ಮುಂದುವರಿದ ಭಾಗವಾಗಿ ಸಹಕಾರ ಇಲಾಖೆ ಅಡಿಯಲ್ಲಿ ಬರುವ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ಪಟ್ಟಣ ಸಹಕಾರಿ ಬ್ಯಾಂಕ್, ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್, ಪತ್ತಿನ ಸಹಕಾರಿ ಬ್ಯಾಂಕ್ ಮತ್ತು ಶಿಕ್ಷಕರ ಪತ್ತಿನ ಸಹಕಾರಿ ಬ್ಯಾಂಕ್ ಮತ್ತು ಫೈನಾನ್ಸ್ ಕಾರ್ಪೋರೇಶನ್‌ಗಳು ಸೇರಿದಂತೆ ಸಹಕಾರಿ ಇಲಾಖೆ ಅಡಿಯಲ್ಲಿ ಬರುವ ಎಲ್ಲ ತರಹದ ಸಂಘ-ಸಂಸ್ಥೆ, ಬ್ಯಾಂಕ್‌ಗಳು ಸಂವಿಧಾನ ಪೀಠಿಕೆಯ ನಾಮಫಲಕ ಅಳವಡಿಸಬೇಕು ಎಂದು ಸಹಕಾರ ಇಲಾಖೆ ಆದೇಶಿಸಿದೆ.
ಇದೇ ಸಂಸ್ಥೆಯಿಂದಲೇ ಏತಕ್ಕೆ?:ಸಂವಿಧಾನ ಪೀಠಿಕೆ ಅಳವಡಿಸುವುದರಲ್ಲಿ ಯಾವುದೇ ಅಭ್ಯಂತರವಿಲ್ಲ. ಸರ್ಕಾರದ ಆದೇಶದಂತೆ ಅಳವಡಿಸುತ್ತೇವೆ. ಆದರೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ನೇತಾಜಿ ಸುಭಾಸಚಂದ್ರ ಬೋಸ್ ಗ್ರಾಮೀಣ ಸೇವಾ ಅಭಿವೃದ್ಧಿ ಸಂಸ್ಥೆಯಿಂದಲೇ ಖರೀದಿಸಿ ಅಳವಡಿಸಬೇಕು ಎಂಬ ಸಹಕಾರ ಸಂಘಗಳ ನಿಬಂಧಕರ ಆದೇಶವು ಇದೀಗ ಸಹಕಾರ ಸಂಘಗಳನ್ನು ಕೆರಳಿಸಿದ್ದು, ಇದೇ ಒಂದು ಸಂಸ್ಥೆಯಿಂದಲೇ ಖರೀದಿಸಬೇಕು ಎಂಬ ಆದೇಶವು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆಯೇ ಎಂಬ ಆರೋಪಕ್ಕೆ ಸಹಕಾರ ಇಲಾಖೆ ಗುರಿಯಾಗಿದೆ.
ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿಂಬಂಧಕರ ಕಚೇರಿ ಪತ್ರದ ಅನ್ವಯ ಧಾರವಾಡದ ಉಪ ನಿಬಂಧಕರು ಕಳೆದ ಫೆಬ್ರುವರಿ 14ರಂದು ಆದೇಶ ಮಾಡಿದ್ದು, ನೇತಾಜಿ ಸುಭಾಸಚಂದ್ರ ಬೋಸ್ ಗ್ರಾಮೀಣ ಸೇವಾ ಅಭಿವೃದ್ಧಿ ಸಂಸ್ಥೆಯಿಂದಲೇ ಜಿಲ್ಲೆಯ ಎಲ್ಲ ಸಹಕಾರಿ ಅಡಿ ಬರುವ ಸಂಸ್ಥೆಗಳು ಪೀಠಿಕೆ ಅಳವಡಿಸಬೇಕೆಂದು ಆದೇಶಿಸಿರುವುದು ಸರಿಯಲ್ಲ. ನಾವು ಸ್ಥಳೀಯವಾಗಿಯೇ ಪೀಠಿಕೆ ಮಾಡಿಕೊಳ್ಳಬಹುದು. ಸಹಕಾರಿ ಅಡಿ ರಾಜ್ಯದಲ್ಲಿ ಸಾವಿರಾರು ಸಂಘ, ಬ್ಯಾಂಕ್‌ಗಳಿದ್ದು, ಒಂದೇ ಸಂಸ್ಥೆಯಿಂದ ಪೀಠಿಕೆ ಖರೀದಿಸಬೇಕು ಎನ್ನುವುದರಲ್ಲಿ ಭ್ರಷ್ಟಾಚಾರದ ವಾಸನೆ ಹರಿದಾಡುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಾರೆ ಸಹಕಾರಿಯಾಗಿರುವ ಮಲ್ಲಿಕಾರ್ಜುನ ಸಾವುಕಾರ.ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಭ್ರಷ್ಟಾಚಾರದಲ್ಲಿ ಮುಳುಗಿದ್ದು ನಿಜ. ಆದರೆ, ಸಂವಿಧಾನ ಪೀಠಿಕೆಯ ಖರೀದಿಯಲ್ಲೂ ಭ್ರಷ್ಟಾಚಾರ ಮಾಡುತ್ತಿರುವುದು ದುರಂತದ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.