ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿದುಡಿಯುವ ಕೈಗಳಿಗೆ ನರೇಗಾ ಬಲ ತಂದುಕೊಡುತ್ತದೆ. ಮನರೇಗಾದಡಿ ಉದ್ಯೋಗ ಚೀಟಿ ಹೊಂದಿದ ಅರ್ಹ ಫಾಲಾನುಭವಿಗಳು ಯೋಜನೆಯಡಿ ಕೆಲಸ ಮಾಡಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ದುಡಿಯುವ ಕೈಗಳಿಗೆ ನರೇಗಾ ಬಲ ತಂದುಕೊಡುತ್ತದೆ. ಮನರೇಗಾದಡಿ ಉದ್ಯೋಗ ಚೀಟಿ ಹೊಂದಿದ ಅರ್ಹ ಫಾಲಾನುಭವಿಗಳು ಯೋಜನೆಯಡಿ ಕೆಲಸ ಮಾಡಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ಹೇಳಿದರು.ತಾಲೂಕಿನ ಮುತ್ತಗಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದುಡಿಯೋಣ ಬಾ ಅಭಿಯಾನ ಹಾಗೂ ವಲಸೆ ಯಾಕೆ ನಿಮ್ಮೂರಲ್ಲೇ ಉದ್ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನರೇಗಾ ಯೋಜನೆಯಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾದಡಿ ಕೆಲಸಕ್ಕೆ ಬರಬೇಕು. ಗಂಡು ಮತ್ತು ಹೆಣ್ಣುಮಕ್ಕಳು ₹ 370 ಸಮಾನ ಕೂಲಿ ಪಡೆದುಕೊಳ್ಳಲು ಅವಕಾಶವಿದೆ. ಸುಮ್ಮನೆ ಮನೆಯಲ್ಲಿಯೇ ಕುಳಿತು ಕಾಲಹರಣ ಮಾಡದೆ ನರೇಗಾದಡಿ ಕೆಲಸ ಮಾಡಿ ಎಂದು ಕಾರ್ಮಿಕರಿಗೆ ಕರೆ ನೀಡಿದರು.
ನರೇಗಾ ಯೋಜನೆ ನಿಯಮದಂತೆ ಪಾರದರ್ಶಕವಾಗಿ ಕೆಲಸ ಮಾಡಬೇಕು. ಎನ್‍ಎಂಎಂಎಸ್ ತಂತ್ರಾಂಶದಲ್ಲಿ ಫೇಸ್ ಅತ್ತೆಂಟಿಕೇಶನ್ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ತೆಗೆದುಕೊಳ್ಳಬೇಕೆಂದರು. ಕಾರ್ಮಿಕರ ಹಾಜರಾತಿ ಹಾಗೂ ಕಾಮಗಾರಿ ಸ್ಥಳದಲ್ಲಿ ದೊರೆಯುವ ಪ್ರಥಮ ಚಿಕೆತ್ಸೆ ಪೆಟ್ಟಿಗೆ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನು ಕಾಮಗಾರಿ ಸ್ಥಳದಲ್ಲಿ ದೊರಕಿಸಿ ಕೊಡಬೇಕೆಂದು ಸಲಹೆ ನೀಡಿದರು.ಗ್ರಾಮದಲ್ಲಿ ಸಮುದಾಯ ಕಾಮಗಾರಿಗಳು ಅಲ್ಲದೆ, ತಮ್ಮ ಸ್ವಂತ ಹೊಲದಲ್ಲಿಯೂ ಕಾಮಗಾರಿಯನ್ನು ಹಮ್ಮಿಕೊಂಡು ₹ 370 ನಿತ್ಯ ಕೂಲಿ ಪಡೆಯಬಹುದು.
ಈ ಯೋಜನೆಯು ಮಹಿಳಾ ಸ್ವಾವಲಂಬನೆಗೆ ಅತೀ ಅವಶ್ಯಕವಾಗಿದೆ. ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು.ತಾಲೂಕು ಯೋಜನಾಧಿಕಾರಿ ಎಂ.ಬಿ.ಸೊನ್ನದ, ಪಿಡಿಒ ಡಿ.ಎ.ಬಿಳೆಕುದರಿ, ಕಾರ್ಯದರ್ಶಿ ವಿಜಯಕುಮಾರ ಅಸ್ಕಿ, ವಲಯ ಮೇಲ್ವಿಚಾರಕಿ ಶಾಂತಮ್ಮ ಸಾಸನೂರ, ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮ ಸಂಯೋಜಕ ಮಡಿವಾಳಪ್ಪ ಬಿರಾದಾರ, ಯುವವೃತ್ತಿಪರ ವಿಜಯಲಕ್ಷ್ಮೀ ಗುಮ್ಮಶೆಟ್ಟಿ, ತಾಂತ್ರಿಕ ಸಹಾಯಕ ಸಾಗರ ಬಳಮಕರ,ಸ್ವ-ಸಹಾಯ ಸಂಘದ ಸಿಬ್ಬಂದಿ, ಮಹಿಳೆಯರು, ಗ್ರಾಪಂ ಸಿಬ್ಬಂದಿ, ಬಿ.ಎಫ್.ಟಿ., ನರೇಗಾ ಯೋಜನೆಯ ಕೂಲಿಕಾರರು ಇದ್ದರು.ಬೇಸಿಗೆ ತಾಪಮಾನ ಹೆಚ್ಚಿರುವದರಿಂದ ಕಾರ್ಮಿಕರು ಬೆಳಗ್ಗೆ ಬೇಗ ಕೆಲಸಕ್ಕೆ ಹಾಜರಾಗಿ ಬಿಸಿಲು ಜಾಸ್ತಿ ಆಗುವಷ್ಟರಲ್ಲಿ ಕೆಲಸ ಮುಗಿಸಿ ಮನೆಗೆ ತೆರಳಬಹುದು. ಸಾಮಾಜಿಕ ಭದ್ರತೆ ಕಲ್ಪಿಸಲು ನರೇಗಾ ಯೋಜನೆಯಡಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷಚೇತನರು ಹಾಗೂ ಗರ್ಭಿಣಿಯರಿಗೆ ಶೇ.50 ಕೆಲಸದ ಪ್ರಮಾಣದಲ್ಲಿ ರಿಯಾಯಿತಿಯಿದೆ. ಕಾರ್ಮಿಕರು ಸದುಪಯೋಗ ಪಡೆದುಕೊಂಡು ಉತ್ತಮವಾಗಿ ಕೆಲಸ ನಿರ್ವಹಿಸಬೇಕು.-ವೆಂಕಟೇಶ ವಂದಾಲ, ತಾಪಂ ಇಒ