ಎಂಟು ಸ್ಪಾಂಜ್ ಐರನ್ ಕಾರ್ಖಾನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮುಚ್ಚುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿ ಒಂದು ವಾರ ಕಳೆದರೂ ಜಿಲ್ಲಾಡಳಿತ ಕ್ರಮಕೈಗೊಳ್ಳದಿರುವುದು ಏಕೆ?.
ಆದೇಶ ಜಾರಿಯಾಗದಿದ್ದರೆ ಇದರ ಪ್ರಯೋಜನ ಯಾರಿಗೆ? ಅಲ್ಲಮಪ್ರಭು ಬೆಟ್ಟದೂರು ಪ್ರಶ್ನೆ
390 ದಿನಗಳ ಧರಣಿ ಮುಂದುವರಿಕೆ | ಆದೇಶ ಜಾರಿಗೆ ವಿಳಂಬವಾದರೆ ಉಗ್ರ ಹೋರಾಟದ ಎಚ್ಚರಿಕೆಕನ್ನಡಪ್ರಭ ವಾರ್ತೆ ಕೊಪ್ಪಳ
ಎಂಟು ಸ್ಪಾಂಜ್ ಐರನ್ ಕಾರ್ಖಾನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮುಚ್ಚುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿ ಒಂದು ವಾರ ಕಳೆದರೂ ಜಿಲ್ಲಾಡಳಿತ ಕ್ರಮಕೈಗೊಳ್ಳದಿರುವುದು ಏಕೆ? ಈ ವಿಳಂಬದಿಂದ ಪ್ರಯೋಜನ ಯಾರಿಗೆ ಎಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಪ್ರಶ್ನಿಸಿದರು.ಬಲ್ಡೋಟ ದೈತ್ಯ ಕೈಗಾರಿಕಾ ಸ್ಥಾಪನೆ ಹಾಗೂ ಕಾರ್ಖಾನೆಗಳ ಮಾಲಿನ್ಯ ವಿರೋಧಿಸಿ 390 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರ ಕಚೇರಿಯು ನ.18ರಂದು ಕೊಪ್ಪಳದ ಎಂಟು ಸ್ಪಾಂಜ್ ಐರನ್ ಘಟಕಗಳನ್ನು ಮುಚ್ಚುವಂತೆ ಆದೇಶಿಸಿದೆ. ಆದರೆ, ವಾರ ಕಳೆದರೂ ಆದೇಶ ಜಾರಿಗೊಳಿಸಲು ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದೆ ಎಂದು ಆಕ್ಷೇಪಿಸಿದರು.
ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ವಿಳಂಬ ಮಾಡುತ್ತಿರುವುದರಿಂದ ಕಾರ್ಖಾನೆಗಳ ಮಾಲೀಕರಿಗೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ಪಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತಿದೆ. ಆದೇಶ ಹೊರಡಿಸಿರುವ ಪರಿಸರ ಇಲಾಖೆಯೂ ಮುನ್ನೆಚ್ಚರಿಕೆಯಾಗಿ ಕೇವಿಯಟ್ ಸಲ್ಲಿಸಿಲ್ಲ. ಕಾರ್ಖಾನೆಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದರೆ ಅದರ ಹೊಣೆಯನ್ನು ಜಿಲ್ಲಾಡಳಿತ ಹಾಗೂ ಪರಿಸರ ಇಲಾಖೆಯ ಅಧಿಕಾರಿಗಳೇ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.ತಕ್ಷಣವೇ 8 ಘಟಕಗಳನ್ನು ಮುಚ್ಚಬೇಕು. ತುಂಗಭದ್ರಾ ಜಲಾಶಯ ಹಾಗೂ ನದಿಯನ್ನು ಕೈಗಾರಿಕಾ ಮಾಲಿನ್ಯದಿಂದ ರಕ್ಷಿಸಬೇಕು. ಏಮ್ಸ್ ಮತ್ತು ಐಐಎಸ್ಸಿ ಸಂಸ್ಥೆಗಳ ಮೂಲಕ ಮಾಲಿನ್ಯ ಪೀಡಿತ ಗ್ರಾಮಗಳ ಜನರ ಆರೋಗ್ಯ ಹಾಗೂ ಪರಿಸರದ ಸಮಗ್ರ ಸಮೀಕ್ಷೆ ನಡೆಸಬೇಕು. ತೀವ್ರವಾಗಿ ಬಾಧಿತವಾಗಿರುವ ಗ್ರಾಮಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ದೀರ್ಘಕಾಲೀನ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು.
ಮಾಲಿನ್ಯದ ಪರಿಣಾಮ 22 ಹಳ್ಳಿಗಳ ರೈತರು, ಗ್ರಾಮೀಣರು ಹಾಗೂ ನಗರ ಪ್ರದೇಶದ ಜನರು ಧೂಳು ಮತ್ತು ಹೊಗೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಖಾನೆಗಳ ಬಂದ್ ಆದೇಶ ಜಾರಿಗೊಳಿಸುವಲ್ಲಿ ವಿಳಂಬ ಮಾಡುತ್ತಿರುವುದನ್ನು ಜನರು ಹೇಗೆ ಅರ್ಥೈಸಿಕೊಳ್ಳಬೇಕು? ಘಟಕಗಳು ಮುಚ್ಚದಿದ್ದರೆ ಮುಂದಿನ ದಿನಗಳಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳು ಮತ್ತು ಕೃಷಿ ನಷ್ಟಕ್ಕೆ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದರು.ಎಂಟು ಘಟಕಗಳ ಮುಚ್ಚುವ ಆದೇಶವನ್ನು ಜಾರಿಗೊಳಿಸುವಂತೆ ಶಾಸಕರು, ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಬೇಕು. ಕಾರ್ಖಾನೆಗಳು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ಪಡೆಯಲು ಮುಂದಾಗುತ್ತಿರುವ ಸೂಚನೆಗಳಿವೆ. ಹೀಗಾಗಿ ಬಾಧಿತ ಗ್ರಾಮಗಳ ರೈತರು ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.
ಈ ವೇಳೆ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಭಾವಿ, ಮೂಕಣ್ಣ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ, ಹನುಮಂತಪ್ಪ ಚಿಂಚಲಿ, ಮಂಗಳೇಶ ರಾಠೋಡ್, ಸತ್ಯನಾರಾಯಣ ವೈ., ಹನುಮಂತ ಕಟಿಗಿ, ವಿಜಯಮಹಾಂತೇಶ ಹಟ್ಟಿ, ಪರ್ವಿನ್ ಎಂ. ಸೇರಿದಂತೆ ಹಲವರು ಇದ್ದರು.