ಎಸ್‌ಟಿಜಿಗೆ ಗಣಿಗಾರಿಕೆ ನಡೆಸಲು ಏಕೆ ಅನುಮತಿ ಕೊಟ್ಟಿಲ್ಲ: ಅನ್ನದಾನಿ

| Published : Jul 04 2025, 11:47 PM IST

ಸಾರಾಂಶ

ಎಸ್‌ಟಿಜಿಯವರು ಗಣಿಗಾರಿಕೆಗೆ ಅನುಮತಿ ಕೋರಿರುವ ಜಾಗ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದೆ. ಅಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ನಿರಾಕರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ತಾಲೂಕಿನ ಹೊನ್ನೇಮಡು ಗ್ರಾಮದಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ನ್ಯಾಯಾಲಯ ಅನುಮತಿ ನೀಡಿದ್ದರೂ ರಾಜಕೀಯ ಒತ್ತಡಗಳಿಗೆ ಮಣಿದು ಗಣಿಗಾರಿಕೆಗೆ ಅನುಮತಿ ನೀಡಿಲ್ಲ. ಉಳಿದ ಇಬ್ಬರಿಗೆ ಅನುಮತಿ ನೀಡಲಾಗಿದೆ. ಅಧಿಕಾರಿಗಳು ರಾಜಕಾರಣಿಗಳ ಪ್ರಭಾವಕ್ಕೊಳಗಾಗಿ ಗಣಿಗಾರಿಕೆಗೆ ಅನುಮತಿ ನೀಡುತ್ತಿಲ್ಲ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಏರಿದ ದನಿಯಲ್ಲಿ ಮಾತನಾಡಿದರು.

ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಮಂಡ್ಯ ತಾಲೂಕು ಹೊನ್ನೇಮಡು ಗ್ರಾಮದ ಸರ್ವೇ ನಂ. ೧೦೧/ಪಿರಲ್ಲಿ ಎಸ್‌ಟಿಜಿ ಅವರಿಗೆ ಉದ್ದೇಶಪೂರ್ವಕವಾಗಿ ಗಣಿಗಾರಿಕೆಗೆ ಅನುಮತಿಯನ್ನು ನಿರಾಕರಿಸಲಾಗಿದೆ. ಅದೇ ಗ್ರಾಮದ ಬಳಿ ಬೇರೆ ಇಬ್ಬರಿಗೆ ಗಣಿಗಾರಿಕೆಗೆ ಅನುಮತಿಸಲಾಗಿದೆ. ಎಸ್‌ಟಿಜಿ ಕಂಪನಿಗೆ ಗಣಿಗಾರಿಕೆಗೆ ಅನುಮತಿ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ಅನುಮತಿ ನೀಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು, ಎಸ್‌ಟಿಜಿಯವರು ಗಣಿಗಾರಿಕೆಗೆ ಅನುಮತಿ ಕೋರಿರುವ ಜಾಗ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದೆ. ಅಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ನಿರಾಕರಿಸಲಾಗಿದೆ ಎಂದು ಹೇಳಿದಾಗ, ನೀವು ರಾಜಕೀಯ ಒತ್ತಡಕ್ಕೆ ಮಣಿದು ಅನುಮತಿ ನಿರಾಕರಿಸಿದ್ದೀರಿ ಎಂದು ಅನ್ನದಾನಿ ಹೇಳಿದಾಗ, ನಾವು ಯಾವ ರಾಜಕೀಯ ಒತ್ತಡಗಳಿಗೂ ಮಣಿದಿಲ್ಲ. ಕಾನೂನು ಉಲ್ಲಂಘಿಸಿ ಗಣಿಗಾರಿಕೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದರೂ ಕೇಳದ ಡಾ.ಕೆ.ಅನ್ನದಾನಿ, ನೀವು ಯಾರ ಮರ್ಜಿಯಲ್ಲಿ ಕೆಲಸ ಮಾಡುತ್ತಿದ್ದೀರಿ ಎನ್ನುವುದು ಗೊತ್ತಿದೆ. ನ್ಯಾಯಾಲಯದ ಆದೇಶವಿದ್ದರೂ ನೀವು ಅನುಮತಿ ಕೊಡುವುದಿಲ್ಲವೆಂದರೆ ಇದು ರಾಜಕೀಯ ಒಳಸಂಚಲ್ಲದೆ ಮತ್ತೇನು ಎಂದು ಜಿಲ್ಲಾಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದರು.

ನೀವು ಹೇಳುತ್ತಿರುವಂತೆ ಯಾವುದೂ ನಡೆದಿಲ್ಲ. ಗಣಿಗಾರಿಕೆಗೆ ಅನುಮತಿ ಕೇಳಿರುವ ಪ್ರದೇಶ ಅರಣ್ಯದಲ್ಲಿದೆ. ಅಲ್ಲಿ ಅನುಮತಿ ನೀಡಲಾಗುವುದಿಲ್ಲ. ಕಾನೂನು ಪ್ರಕಾರವೇ ಕ್ರಮ ವಹಿಸಲಾಗಿದೆ ಎಂದು ಮತ್ತೆ ಜಿಲ್ಲಾಧಿಕಾರಿ ಒತ್ತಿ ಹೇಳಿದರೂ ಡಾ.ಅನ್ನದಾನಿ ಕೇಳದಿದ್ದಾಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಧ್ಯಪ್ರವೇಶಿಸಿ, ರಾಜ್ಯದಲ್ಲಿ ಆಡಳಿತ ಹೇಗೆ ನಡೆಯುತ್ತಿದೆ. ಯಾರು ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಹೀಗಿರುವಾಗ ಜಿಲ್ಲಾಧಿಕಾರಿ ಏನು ಮಾಡುತ್ತಾರೆ. ಈ ವಿಷಯವನ್ನು ಅಲ್ಲಿಗೇ ಬಿಡುವಂತೆ ಸುಮ್ಮನಾಗಿಸಿದರು.