ಚಿಕ್ಕಬಳ್ಳಾಪುರ ನಗರ ರಸ್ತೆ ಅಗಲೀಕರಣ

| Published : Oct 07 2024, 01:30 AM IST

ಸಾರಾಂಶ

ಜಿಲ್ಲಾ ಕೇಂದ್ರವಾವಾಗಿ 18 ವರ್ಷ ಕಳೆದರೂ ನಗರದ ಈ ಎರಡು ಪ್ರಮುಖ ರಸ್ತೆಗಳ ಅಗಲೀಕರಣ ಆಗಿರಲಿಲ್ಲ. ಆದರೆ ಈಗ ಅಂಗಡಿ ಮುಂಗಟ್ಟು ಮಾಲಿಕರಿಗೆ ನಗರಸಭೆ 3ನೇ ತಿಳಿವಳಿಕೆ ಪತ್ರ ನೀಡುತ್ತಿರುವುದು ನೋಡಿದರೆ ಈಬಾರಿ ಅಗಲೀಕರಣ ಖಚಿತ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದಶಕಗಳ ಕಾಲದಿಂದ ವಿಸ್ತರಣೆ ಆಗದೆ ದಿನನೂಕುತ್ತಿದ್ದ ನಗರದ ಬಜಾರ್‌ರಸ್ತೆ (ಸರ್.ಎಂ.ವಿ.ರಸ್ತೆ) ಮತ್ತು ಗಂಗಮ್ಮಗುಡಿ ರಸ್ತೆ ಅಗಲೀಕರಣಕ್ಕೆ ಕಾಲಕೂಡಿಬಂದಿದೆ. ಇದರಿಂದ ಕಟ್ಟಡ ಮಾಲೀಕರಲ್ಲಿ ಆತಂಕ ಶುರುವಾಗಿದೆ. 6 ದಶಕಗಳ ಹಿಂದಿನ ಜನಸಂಖ್ಯೆಗೆ ಅನುಗುಣವಾಗಿ ಬಜಾರ್ ರಸ್ತೆಯನ್ನು 30 ಅಡಿಗಳ ಅಗಲ ಹಾಗೂ ಗಂಗಮ್ಮಗುಡಿ ರಸ್ತೆ 40 ಅಡಿಗಳ ಅಗಲ ನಿರ್ಮಾಣ ಮಾಡಲಾಗಿತ್ತು. ಆದರೆ ಜನಸಂಖ್ಯೆ ಬೆಳೆದಂತೆ ರಸ್ತೆಯ ಎರಡೂ ಬದಿ ಒತ್ತುವರಿಯಾಗಿ ಎರಡೂ ರಸ್ತೆಗಳು 15 ರಿಂದ 20 ಅಡಿಗಳಿಗೆ ಬಂದು ಇದು ಕಿರಿದಾಗಿ ಜನ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ.

ರಸ್ತೆ ಆಗಲೀಕರಣಕ್ಕೆ ಆದೇಶ

ಇದನ್ನು ಪರಿಗಣಿಸಿ ಉಚ್ಚನ್ಯಾಯಾಲಯ 2019 ರಲ್ಲಿಯೇ ರಸ್ತೆ ಅಗಲೀಕರಣಕ್ಕೆ ನಗರಸಭೆಗೆ ಆದೇಶಿಸಿತ್ತು. ಆಗ ನಗರಸಭೆ ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿದರೂ ತಿಳಿಯದು ರಸ್ತೆ ಅಗಲೀಕರಣ ವಾಗಿರಲಿಲ್ಲ. ಆದರೆ ಈಗ ಸರ್ಕಾರ ಮತ್ತು ನಗರಸಭೆ ರಸ್ತೆ ಅಗಲೀಕರಣ ಮುಂದಾಗಿ, ಕಳೆದ ಜನವರಿ ಯಿಂದ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಕಟ್ಟಡ ಮಾಲಿಕರಿಗೆ ಮೂರು ಬಾರಿ ನೋಟಿಸ್ ಜಾರಿ ಮಾಡಿ ತಮ್ಮ ಸ್ಥಳದ ಮೂಲ ದಾಖಲೆ ಒದಗಿಸುವಂತೆ ಕೋರಿದೆ.ಜಿಲ್ಲಾ ಕೇಂದ್ರವಾವಾಗಿ 18 ವರ್ಷ ಕಳೆದರೂ ನಗರದ ಈ ಎರಡು ಪ್ರಮುಖ ರಸ್ತೆಗಳ ಅಗಲೀಕರಣ ಆಗಿರಲಿಲ್ಲ. ಆದರೆ ಈಗ ಅಂಗಡಿ ಮುಂಗಟ್ಟು ಮಾಲಿಕರಿಗೆ ನಗರಸಭೆ 3ನೇ ತಿಳಿವಳಿಕೆ ಪತ್ರ ನೀಡುತ್ತಿರುವುದು ನೋಡಿದರೆ ಈಬಾರಿ ಅಗಲೀಕರಣ ಖಚಿತ ಎನ್ನಲಾಗಿದೆ.ಅಗಲೀಕರಣಕ್ಕೆ ದೂರದೃಷ್ಟಿ ಅಗತ್ಯ

ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬ ಮಾತು ಚಿಕ್ಕಬಳ್ಳಾಪುರ ನಗರದ ರಸ್ತೆ ಅಗಲೀಕರಣಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ. ಇದರಂತೆ ಬಜಾರ್ ರಸ್ತೆ, ಗಂಗಮ್ಮಗುಡಿ ರಸ್ತೆ ಅಗಲೀಕರಣವನ್ನು ಮುಂದಿನ 50 ವರ್ಷಗಳ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಾಡಲಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.ಈ ಬಗ್ಗೆ ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಪ್ರತಿಕ್ರಿಯಿಸಿ ಅಗಲೀಕರಣವನ್ನು ನಕ್ಷೆಯಂತೆ ಮಾಡಿದ್ದೇ ಆದಲ್ಲಿ ಈ ಎರಡೂ ರಸ್ತೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವಿದೆ. ಹೀಗಾಗಿ ಉಚ್ಚನ್ಯಾಯಾಲಯ ಮತ್ತು ಸರ್ಕಾರವು ನಗರದ ಅಂದವೂ ಕೆಡದಂತೆ, ಮಾಲೀಕರಿಗೂ ನಷ್ಟವಾಗದಂತೆ ತೆಗೆದುಕೊಳ್ಳಬಹುದಾದ ಸರಿಯಾದ ತೀರ್ಮಾಕ್ಕೆ ಜನತೆ ಕಾಯುತ್ತಿದ್ದಾರೆ ಎನ್ನುತ್ತಾರೆ.ರಸ್ತೆ ಬದಿ 10 ಅಡಿ ತೆರವು

ಇದರ ನಡುವೆ ಈ ಎರಡೂ ರಸ್ತೆಗಳಲ್ಲಿರುವ ಕಟ್ಟಡಗಳ ಮಾಲಿಕರು ಈಗಿರುವ ರಸ್ತೆಯಿಂದ ಎರಡೂ ಬದಿಗಳಲ್ಲಿ 10 ಅಡಿಯಷ್ಟು ತಾವೇ ಕಟ್ಟಡ ತೆರವು ಮಾಡಿಕೊಂಡು ಹಿಂದಕ್ಕೆ ಹೋಗಲು ಸಿದ್ಧರಿದ್ದಾರೆ. ಉಚ್ಚನ್ಯಾಯಾಲಯ ಮತ್ತು ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬೇಕಿದೆ. ಆಗ ಮಾಲಿಕರೂ ಉಳಿಯುತ್ತಾರೆ, ನಗರದ ಅಂದವೂ ಹೆಚ್ಚಾಗಲಿದೆ ಎಂದು ಹೇಳುತ್ತಿದ್ದಾರೆ.ಎಷ್ಟು ಅಡಿ ಜಾಗ ತೆರವು

ಆದರೆ ಈ ಎಲ್ಲಾ ಗೋಜಲುಗಳ ನಡುವೆ ರಸ್ತೆ ಅಗಲೀಕರಣದ ವಿಚಾರದಲ್ಲಿ ಉಚ್ಚನ್ಯಾಯಾಲಯ ಮತ್ತು ಸರ್ಕಾರ ಯಾವ ನಡೆ ಅನುಸರಿಸುವುದೋ, ಮಧ್ಯ ರಸ್ತೆಯಿಂದ ಎಷ್ಟು ಅಡಿಯಷ್ಟು ಕಟ್ಟಡಗಳನ್ನು ತೆರವು ಮಾಡುವುದೋ, ಈ ಕಾರ್ಯಕ್ಕೆ ಯಾವಾಗ ಮುಂದಾಗುವುದೋ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಏಕೆಂದರೆ ಈಗಾಗಲೇ ಎಂ.ಜಿ.ರಸ್ತೆ ಅಗಲೀಕರಣ ಭರದಿಂದ ಸಾಗಿದೆ.ಇದೇ ವೇಗದಲ್ಲಿ ನಮ್ಮದೂ ಆದರೆ ಏನು ಗತಿ ಎಂಬ ಆತಂಕದಲ್ಲಿ ವರ್ತಕರಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುವುದೋ ಎಂಬುದು ಯಾರಿಗೂ ತಿಳಿಯುತ್ತಿಲ್ಲ. .