ನಗರಸಭೆ ಆಡಳಿತಾಧಿಕಾರಿ ಅವಧಿಯ ಭ್ರಷ್ಟಾಚಾರ ತನಿಖೆ

| Published : Oct 16 2024, 12:34 AM IST

ಸಾರಾಂಶ

ಪಟ್ಟಣ ವ್ಯಾಪ್ತಿಯಲ್ಲಿ ಮನೆ ಹಾಗೂ ಸರಗಳ್ಳತನಗಳು ಹೆಚ್ಚುತ್ತಿವೆ, ಸಿಸಿ ಟಿ.ವಿ ಅಳವಡಿಸಿ ಕ್ರಮವಹಿಸಬೇಕು,

ಕನ್ನಡಪ್ರಭ ವಾರ್ತೆ ನಂಜನಗೂಡು ನಗರಸಭೆಯಲ್ಲಿ ಆಡಳಿತಾಧಿಕಾರಿ ಅವಧಿಯಲ್ಲಿ ಬೀದಿ ನಾಯಿಗಳನ್ನು ಹಿಡಿಯುವ ಹಾಗೂ ನಗರಸಭೆ ವಾಹನಗಳ ವಿಮೆ ಮಾಡಿಸುವ ಸಲುವಾಗಿ ತಲಾ 40 ಲಕ್ಷ ರು. ವೆಚ್ಚ ಮಾಡಲಾಗಿದ್ದು, ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಮೆಲ್ನೋಟಕ್ಕೆ ಕಂಡು ಬಂದಿರುವುದರಿಂದ ತನಿಖೆ ನಡೆಸಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸದಸ್ಯ ಕಪಿಲೇಶ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಮನೆ ಹಾಗೂ ಸರಗಳ್ಳತನಗಳು ಹೆಚ್ಚುತ್ತಿವೆ, ಸಿಸಿ ಟಿ.ವಿ ಅಳವಡಿಸಿ ಕ್ರಮವಹಿಸಬೇಕು, ಚಾಮರಾಜನಗರ ಸೇರಿದಂತೆ ಇತರ ನಗರಸಭೆಗಳಲ್ಲಿ ನಗರ ವ್ಯಾಪ್ತಿಯಲ್ಲಿ ಸಿಸಿ ಟಿವಿ ಅಳವಡಿಸಿಕೊ೦ಡಿದ್ದಾರೆ, ಜನರ ಹಿತದೃಷ್ಠಿಯಿಂದ ಅಳವಡಿಸಲು ಕ್ರಮವಹಿಸಬೇಕು, ಅಡಳಿತಾಧಿಕಾರಿಗಳ ಅವಧಿಯಲ್ಲಿ ಪಟ್ಟಣದಲ್ಲಿ 200 ರಿಂದ 300 ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಿ ಬಿಡಲಾಗಿದೆ, ಈ ಕಾರ್ಯಕ್ಕೆ 40 ಲಕ್ಷ ವೆಚ್ಚವಾಗಿರುವುದಾಗಿ ತೋರಿಸಲಾಗಿದೆ, ಇದನ್ನು ನೋಡಿದರೆ ನಾವು ನಗರಸಭಾ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ನಾಯಿ ಹಿಡಿಯುವ ಕೆಲಸ ಮಾಡಿದರೆ ಲಾಭ ಎನಿಸುತ್ತಿದೆ, ಸಾರ್ವಜನಿಕರ ತೆರಿಗೆ ಹಣವನ್ನು ಅಧಿಕಾರಿಗಳು ಕಳ್ಳ ಲೆಕ್ಕ ತೋರಿಸಿ ಗುಳುಂ ಮಾಡಿದ್ದಾರೆ, ಭ್ರಷ್ಟಚಾರ ನಡೆದಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಸದಸ್ಯ ಸಿದ್ದರಾಜು ಮಾತನಾಡಿ, ನಗರಸಭೆಯ ವಾಹನಗಳ ವಿಮೆ ಮಾಡಿಸಲು 40 ಲಕ್ಷ ಖರ್ಚಾಗಿದೆ ಎಂದು ನಮೂದಿಸಿದ್ದಾರೆ, ಅಡಳಿತಾಧಿಕಾರಿಗಳ ಅವಧಿಯಲ್ಲಿ ವ್ಯಾಪಕ ಭ್ರಷ್ಟಚಾರ ನಡೆದಿದೆ, ತಪ್ಪತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ಶಾಸಕ ದರ್ಶನ್ ಧ್ರುವನಾರಾಯಣ ಪ್ರತಿಕ್ರಿಯೆ ನೀಡಿ ನನಗೂ ಕೂಡ ಈ ರೀತಿಯ ಖರ್ಚು –ವೆಚ್ಚಗಳನ್ನು ಮಾಡಿರುವುದನ್ನು ನೋಡಿ ಆಶ್ಚರ್ಯವಾಗಿದೆ, ಈ ಬಗ್ಗೆ ಅಧ್ಯಕ್ಷರ ಗಮನಕ್ಕೂ ತಂದಿದ್ದೇನೆ, ಅಧಿಕಾರಿಗಳು ಖರ್ಚು ವೆಚ್ಚಗಳ ಬಗ್ಗೆ ಸೂಕ್ತವಾದ ಬಿಲ್ಒದಗಿಸಬೇಕು, ಸದಸ್ಯರ ಆಶಯದಂತೆ ಲೋಕಾಯುಕ್ತದಿಂದ ತನಿಖೆ ನಡೆಸಲಾಗುವುದು ಎಂದು ಹೇಳಿದರು.ಸದಸ್ಯ ಖಾಲೀದ್ ಅಹಮ್ಮದ್ ಮಾತನಾಡಿ, ಪಟ್ಟಣದ ಮುಸ್ಲಿಂ ಬೀದಿಯ ದೊಡ್ಡ ಮೋರಿಗಳಳ್ಳಿ ಹೂಳು ತುಂಬಿಕೊಂಡಿದೆ, ಮಳೆ ಬಂದರೆ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗುತ್ತಿದೆ ಹೂಳು ತೆಗೆಸಬೇಕು ಎಂದು ಆಗ್ರಹಿಸಿದರು.ನಗರಸಭೆ ಆಯುಕ್ತ ನಂಜುಂಡಸ್ವಾಮಿ ಪ್ರತಿಕ್ರಿಯೆ ನೀಡಿ ಮೋರಿಗಳ ಹೂಳು ತೆಗೆಯಲು ನಗರಸಭೆ ಸಿಬ್ಬಂದಿ ತೆರಳಿದಾಗ ಅಲ್ಲಿಯ ಜನ ತಡೆ ಒಡ್ಡಿದ್ದಾರೆ, ಮೋರಿಗಳ ಮೇಲೆ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಂಡಿರುವುದರಿಂದ ಸಮಸ್ಯೆಯಾಗಿದೆ ಎಂದು ಹೇಳಿದರು.ಶಾಸಕ ದರ್ಶನ್ಧ್ರುವನಾರಾಯಣ ಸದಸ್ಯರ ಸಮ್ಮುಖದಲ್ಲಿ ಹೂಳು ತೆಗೆಯುವ ಕಾರ್ಯ ನಡೆಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.ಸದಸ್ಯೆ ಗಾಯಿತ್ರಿ ಮಾತನಾಡಿ ನಗರದ ಬಜಾರ್ರಸ್ತೆಯಲ್ಲಿ ನಗರಸಭೆಯ ,ಮಳಿಗೆಗಳನ್ನು ಬಾಡಿಗೆಗೆ ಪಡೆದಿರುವ ವ್ಯಾಪಾರಿಗಳು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ, ಕೆಲವರು ಮಳಿಗೆ ಮುಂದೆ ನಿಯಮಬಾಹಿರವಾಗಿ ಗೋಡೆ ನಿರ್ಮಿಸಿದ್ದಾರೆ, ತೆರವುಗೊಳಿಸಿ ಎಂದು ಆಗ್ರಹಿಸಿದರು.ಅಧ್ಯಕ್ಷ ಶ್ರೀಕಂಠ ಸ್ವಾಮಿ ಹಾಗೂ ಆಯುಕ್ತ ನಂಜುಂಡಸ್ವಾಮಿ ಶೀಘ್ರದಲ್ಲಿ ಬಜಾರ್ರಸ್ತೆಯಲ್ಲಿ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡಬೇಕು, ಪಟ್ಟಣದ ಹಲವು ತುರ್ತು ಸೇವೆಗಳನ್ನು ಸ್ಥಳದಲ್ಲಿದ್ದು, ಕ್ರಮವಹಿಸಬೇಕಾಗಿರುತ್ತೆ, ಸದಸ್ಯರು ದೂರವಾಣಿ ಕರೆ ಮಾಡಿದಾಗ ಮೈಸೂರಿನಲ್ಲಿದ್ದೀನಿ ಎಂದು ಉತ್ತರಿಸುವುದು ಸರಿಯಲ್ಲ, ಅಧಿಕಾರಿಗಳು ಪಟ್ಟಣದಲ್ಲಿ ವಾಸ್ತವ್ಯವಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ರೆಹೆನಾಬಾನು, ಸದಸ್ಯರಾದ ಎಸ್.ಪಿ. ಮಹೇಶ್, ಗಂಗಾಧರ್‌, ಮಹೇಶ್ ಹತ್ತಿಖಾನೆ, ಸಿದ್ದಿಕ್ ಅಹಮ್ಮದ್‌, ಎನ್.ಎಸ್. ಯೋಗೇಶ್‌, ಮಹದೇವಮ್ಮ, ವಸಂತಕುಮಾರಿ, ಗಾಯಿತ್ರಿ ಮುರುಗೇಶ್‌, ಮೀನಾಕ್ಷಿ ನಾಗರಾಜು, ಶ್ವೇತಲಕ್ಷ್ಮಿ, ಕೆ.ಎಂ. ಬಸವರಾಜು, ರಮೇಶ್, ನಗರಸಭೆ ಆಯುಕ್ತ ನಂಜುಂಡಸ್ವಾಮಿ, ಎಇಇ ಮಹೇಶ್, ನಗರಸಭಾ ಅಧಿಕಾರಿಗಳು ಇದ್ದರು.