ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪರಿಸರಕ್ಕಾಗಿ ನಾವು ಹಾಗೂ ರಾಷ್ಟ್ರ ಭಕ್ತರ ಬಳಗವು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ಗುರುವಾರ ಆಯೋಜಿಸಿದ್ದ ಬೃಹತ್ ಸೈಕಲ್, ಕಾರ್, ಬೈಕ್ ಸೇರಿದಂತೆ ದ್ವಿಚಕ್ರ ವಾಹನಗಳ ಜಾಥಾವು ಯಶಸ್ವಿಯಾಗಿ ನಡೆಯಿತು.

ಪರಿಸರಕ್ಕಾಗಿ ನಾವು ಬಳಗ, ರಾಷ್ಟ್ರಭಕ್ತರ ಬಳಗ, ಶಿವಮೊಗ್ಗ ಸೈಕಲ್ ಕ್ಲಬ್, ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ, ವೈ.ಎಚ್.ಎ.ಐ. ತರುಣೋದಯ ಘಟಕ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಬೃಹತ್ ವಾಹನ ಜಾಥಾದಲ್ಲಿ ಭಾಗಿಯಾಗಿ ಪರಿಸರಕ್ಕೆ ಮಾರಕವಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಆಗ್ರಹಿಸಿದವು.

ನಗರದ ಫ್ರೀಡಂಪಾರ್ಕ್‌ನಲ್ಲಿ ವೈದ್ಯ ಡಾ.ಶಿವರಾಂ ಕೃಷ್ಣ ಹಾಗೂ ಪಿ.ನಾರಾಯಣ್ ಈ ಜಾಥಾಕ್ಕೆ ಚಾಲನೆ ನೀಡಿದರು. ಸೈಕಲ್ ಜಾಥಾವು ಫ್ರೀಡಂಪಾರ್ಕ್‌ನಿಂದ ಹೊರಟು, ಜೈಲ್ ಸರ್ಕಲ್, ಅಮೀರ್ ಅಹ್ಮದ್ ಸರ್ಕಲ್, ಬೆಕ್ಕಿನಕಲ್ಮಠದವರೆಗೆ ಹೋಗಿ ಮಹಾವೀರ ವೃತ್ತಕ್ಕೆ ಬಂದು ತಲುಪಿತು. ಕಾರು ಹಾಗೂ ಇತರ ವಾಹನಗಳ ಜಾಥಾವು ಫ್ರೀಡಂಪಾರ್ಕ್‌ನಿಂದ ಹೊರಟು ಪೊಲೀಸ್ ಚೌಕಿ, ಆದಿಚುಂಚನಗಿರಿ ರಸ್ತೆ, ಗುತ್ತಿ ನರ್ಸಿಂಗ್ ಹೋಂ, ಎಲ್‌ಎಲ್‌ಆರ್ ರಸ್ತೆ, ಗೋಪಿ ಸರ್ಕಲ್, ಎ.ಎ. ಸರ್ಕಲ್, ಗಾಂಧಿಬಜಾರ್, ರಾಮಣ್ಣ ಶ್ರೇಷ್ಠಿ ಪಾರ್ಕ್, ಬೆಕ್ಕಿನಕಲ್ಮಠಕ್ಕೆ ತೆರಳಿ ಮಹಾವೀರ ಸರ್ಕಲ್‌ಗೆ ಬಂದು ತುಲುಪಿದವು.ಬಳಿಕ ಬಹಿರಂಗ ಸಾರ್ವಜನಿಕ ಸಭೆ ನಡೆಯಿತು.ಈ ಜಾಥಾದಲ್ಲಿ 150ಕ್ಕೂ ಹೆಚ್ಚು ಸೈಕಲ್‌ಗಳು, 100 ಕಾರುಗಳು, 200 ದ್ಚಿಚಕ್ರವಾಹನಗಳು ಭಾಗಿಯಾಗಿದ್ದವು.

ಈ ಜಾಥಾದಲ್ಲಿ ರಾಷ್ಟ್ರ ಭಕ್ತರ ಬಳಗದ ಕೆ.ಎಸ್ ಈಶ್ವರಪ್ಪ, ಕೆ.ಈ ಕಾಂತೇಶ್, ಪರಿಸರಕ್ಕಾಗಿ ನಾವು ಸಂಘಟನೆಯ ಪ್ರೊ.ಬಿ.ಎಂ ಕುಮಾರಸ್ವಾಮಿ, ಡಾ.ಶೇಖರ್ ಗೌಳೇರ್, ಡಾ.ಶ್ರೀಪತಿ, ಪರಿಸರ ರಮೇಶ್, ವಾಗೀಶ್, ದಿಲೀಪ್‌ ನಾಡಿಗ್, ಜನಾರ್ಧನ್ ಪೈ, ಈ.ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರೀ, ಮೋಹನ್ ಜಾದವ್, ಶ್ರೀಕಾಂತ್, ವಿಶ್ವೇಶ್ವರಯ್ಯ, ರಾಮಾಚಾರ್, ವಿನಯ್ ಶಿವಮೊಗ್ಗ, ರಮೇಶ್ ಜಾದವ್, ಸುವರ್ಣಾ ಶಂಕರ್, ಸೀತಾಲಕ್ಷ್ಮೀ, ಪ್ರಕಾಶ್ ಇತರರು ಭಾಗಿಯಾಗಿದ್ದರು.


ಯೋಜನೆ ಜಾರಿಯಾದರೆ ಉಗ್ರ ಹೋರಾಟ: ಈಶ್ವರಪ್ಪ

ಪಶ್ಚಿಮ ಘಟ್ಟದ ಅತೀಸೂಕ್ಷ್ಮ ಪ್ರದೇಶವಾದ ಶರಾವತಿ ಕಣಿವೆಯಲ್ಲಿ ಯಾವುದೇ ಪರಿಸರ ಮಾರಕ ಯೋಜನೆಗಳನ್ನು ಜಾರಿಗೊಳಿಸದೆ ಅನುಮತಿ ನೀಡಬಾರದು. ಯೋಜನೆಗೆ ಅನುಮತಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ರಾಜ್ಯ ಸರ್ಕಾರ ಈ ಮಾರಕ ಯೋಜನೆಗೆ ಶತಾಯ-ಗತಾಯ ಮುಂದಾಗಿದೆ. ಈ ಯೋಜನೆಯಿಂದ ಅಪಾರ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯಾಗಲಿದೆ. ಈ ಭಾಗದ ಜನ-ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಜೀವನವೇ ದುಸ್ತರವಾಗಲಿದೆ. ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿಯಾಗ ಕೂಡದು ಒಂದು ವೇಳೆ ಈ ಯೋಜನೆ ಜಾರಿಯಾದರೆ ಇನ್ನೂ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪರಿಸರ ಮಾರಕ ಯೋಜನೆ ಕೈಬಿಡಿ

ಪರಿಸರ ಮಾರಕ ಯೋಜನೆಗೆ ರಾಜ್ಯ ಸರ್ಕಾರ ಕೈ ಹಾಕಿರುವುದು ತಪ್ಪು. ಪ್ರಕೃತಿ ನಮಗೆ ಗಾಳಿ, ಮಳೆ, ಬೆಳಕನ್ನು ನೀಡಿದೆ. ವೈದ್ಯರಾದ ನಾವು ಕಾಯಿಲೆ ಬರುವುದರೊಳಗೆ ಅವುಗಳನ್ನು ತಡೆಗಟ್ಟಿ ಎಂದು ರೋಗಿಗಳಿಗೆ ಸಲಹೆ ನೀಡುತ್ತೇವೆ. ಇದಕ್ಕೆ ಪೂರಕವಾಗಿ ಪ್ರಕೃತಿ ಇರಬೇಕಾಗಿದೆ. ಅದನ್ನು ನಾವು ಸಂರಕ್ಷಿಸಬೇಕಾಗಿದೆ. ಈ ಯೋಜನೆಯನ್ನು ಕೈಬಿಟ್ಟು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಪರಿಸರ ಮೇಲಿನ ದಾಳಿಯನ್ನು ತಡೆಯಲು ಎಲ್ಲರೂ ಸಂಘಟಿತರಾಗಬೇಕು ಎಂದು ಖ್ಯಾತ ನರರೋಗ ತಜ್ಞ ಡಾ.ಶಿವರಾಮಕೃಷ್ಣ ಹೇಳಿದರು.

ಪರಿಸರ ನಾಶದ ಪರಿಣಾಮ ಹವಾಮಾನ ವೈಪರೀತ್ಯ ಸಂಭವಿಸುತ್ತಿದೆ.ಭೀಕರ ಬಿಸಿಲು ಹೆಚ್ಚಾಗುತ್ತಿದೆ. ಮಳೆ ಕಡಿಮೆಯಾಗುತ್ತಿದೆ. ಸಿದ್ದರಾಮಯ್ಯನವರು ನಾಚಿಕೆ ಬಿಟ್ಟು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಇದು ನಾಚಿಕಗೇಡಿನ ಸಂಗತಿ. 18 ಸಾವಿರ ಟನ್ ಅಪಾಯಕಾರಿ ಸ್ಪೋಟಕ ಬಳಕೆಯಿಂದ ಮುಂದಿನ ದಿನಗಳಲ್ಲಿ ಈ ಯೋಜನಾ ಪ್ರದೇಶದಲ್ಲಿ ಭೂಕಂಪ, ಭೂಕುಸಿತದ ಸಾಧ್ಯತೆಯಿದೆ ಎಂದು ಐಎಫ್‌ಎಸ್ ಅಧಿಕಾರಿ ಪ್ರಣೀತಾ ಕೌಲ್ ಈಗಾಗಲೇ ಕೇಂದ್ರಕ್ಕೆ ವರದಿಯನ್ನು ನೀಡಿದ್ದು, ಕೆಪಿಸಿಎಲ್‌ನವರು ಅದನ್ನು ಕಡೆಗಣಿಸಿ ಈ ಯೋಜನೆ ಮಾಡಲು ಹೊರಟಿದ್ದಾರೆ.

ಪ್ರೊ.ಬಿ.ಎಂ.ಕುಮಾರಸ್ವಾಮಿ ಪರಿಸರ ಹೋರಾಟಗಾರ.

ಈಗಾಗಲೇ ಶರಾವತಿ ನದಿಗೆ ಆರೇಳು ಡ್ಯಾಂ ಕಟ್ಟಿದ್ದೇವೆ. ಈಗ ಮತ್ತೊಂದು ಡ್ಯಾಂ ಕಟ್ಟಿ ವಿದ್ಯುತ್ ಉತ್ಪಾದನೆ ಮಾಡಲು ಹೊರಟಿರುವ ಸರ್ಕಾರ ಕ್ರಮ ಖಂಡನೀಯ. ಈ ಯೋಜನೆಯಿಂದ ಶರಾವತಿ ಸಿಂಘಳೀಕ ಅಭಯಾರಣ್ಯದಲ್ಲಿ ಇರುವ ಸಂಘಳೀಕ ಸಂತತಿಯ ವಿನಾಶಕ್ಕೆ ಕಾರಣವಾಗುತ್ತದೆ. 16 ಸಾವಿರ ಅಪರೂಪದ ಹಾಗೂ ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಅಪರೂಪದ ಮರಗಳ ನಾಶವಾಗಲಿದ್ದು, 11,900 ಕೋಟಿ ರು. ನಷ್ಟವಾಗಲಿದೆ.

ಡಾ.ಶೇಖರ್‌ ಗೌಳೇರ್ ಪರಿಸರ ಹೋರಾಟಗಾರ.