ಸಾರಾಂಶ
ಯಾದಗಿರಿ : ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ಪತ್ನಿಯನ್ನು ಕೆಳಗಿಳಿಸಿ, ಬೇರೊಬ್ಬರ ನೇಮಿಸಿದ್ದಕ್ಕೆ ಆಕ್ರೋಶಗೊಂಡ ಪತಿ, ಕಾಂಗ್ರೆಸ್ ಕಚೇರಿಗೇ ಬೆಂಕಿಯಿಟ್ಟ ವಿಚಿತ್ರ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಶನಿವಾರ ನಸುಕಿನ ಜಾವ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ ಹೊತ್ತಿಕೊಂಡು, ಅಲ್ಲಿನ ಪೀಠೋಪಕರಣಗಳು ಸೇರಿದಂತೆ ಕಿಟಕಿ, ಬಾಗಿಲುಗಳು ಸಟ್ಟು ಕರಕಲಾಗಿದ್ದವು. ಶನಿವಾರ ಬೆಳಿಗ್ಗೆ ಕಚೇರಿ ಸಿಬ್ಬಂದಿ ಬಾಗಿಲು ತೆರೆಯಲು ಬಂದಾಗ ಇದು ಬೆಳಕಿಗೆ ಬಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಶಾಸಕ ಚೆನ್ನಾರಡ್ಡಿ ತುನ್ನೂರು ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ತನಿಖೆ ನಡೆಸಿ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದ್ದರು.
ಸ್ಥಳೀಯ ಪ್ರದೇಶದ ಸಿಸಿಟಿವಿ ಆಧಾರದ ಮೇಲೆ ಪ್ರಕರಣ ಬಯಲಿಗೆಳೆದ ಪೊಲೀಸರಿಗೇ ಅಚ್ಚರಿ ಮೂಡಿಸಿತ್ತು. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ ಪ್ರಕರಣಕ್ಕೆ ಈ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿತ್ತು. ಕಾಂಗ್ರೆಸ್ ಕಾರ್ಯಕರ್ತರಿಂದಲೇ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣ ತನಿಖೆಯಲ್ಲಿ ಬಯಲಾಗಿತ್ತು.
ಯಾದಗಿರಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ಮಂಜುಳಾ ಗೂಳಿಯವರನ್ನು ಶುಕ್ರವಾರವಷ್ಟೇ ಬದಲಾವಣೆ ಮಾಡಿ ಪಕ್ಷ ಆದೇಶಿಸಿತ್ತು. ಮಹಿಳಾ ಘಟಕದ ಅಧ್ಯೆಕ್ಷೆಯಾಗಿ ನಿಲೋಫರ್ ಬಾದಲ್‌ರನ್ನ ಆಯ್ಕೆ ಮಾಡಲಾಗಿತ್ತು. ವಿರೋಧದ ಮಧ್ಯೆಯೂ ನಿಲೋಫರ್ ಬಾದಲ್ ರನ್ನ ಆಯ್ಕೆಯಿಂದಾಗಿ ಅಸಮಾಧಾನ ಹಾಗೂ ಆಕ್ರೋಶಗೊಂಡಿದ್ದ ಪತಿ ಶಂಕರ್, ರೌಡಿಶೀಟರ್ ಬಾಪುಗೌಡ ಅಗತೀರ್ಥ ಎಂಬಾತನ ಜೊತೆಗೂಡಿ, 10 ಲೀಟರ್ ಪೆಟ್ರೋಲ್ ಕಚೇರಿಯೊಳಗೆ ಸುರಿದು ಬೆಂಕಿಯಿಟ್ಟ ಕೃತ್ಯ ಎಸಗಿದ್ದಾರೆ ಎಂದು ತನಿಖೆಯಲ್ಲಿ ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಂಕರ್ ಗೂಳಿಯನ್ನು ಪೊಲೀಸರು ಬಂಧಿಸಿದ್ದು, ಬಾಪೂಗೌಡ ಅಗತೀರ್ಥಗಾಗಿ ಪೊಲೀಸರು ಹುಟುಕಾಟ ನಡೆಸಿದ್ದಾರೆ.