ಅಕ್ರಮ ಸಂಬಂಧ ಪ್ರಶ್ನಿಸಿದ ಹೆಂಡತಿ ಕತ್ತನ್ನೇ ಕೊಯ್ದ!

| Published : Sep 02 2025, 01:00 AM IST

ಸಾರಾಂಶ

ಪತಿಯ ಅಕ್ರಮ ಸಂಬಂಧ ಪ್ರತಿಭಟಿಸುತ್ತಿದ್ದ ಹೆಂಡತಿಯನ್ನೇ ಕುಡುಗೋಲಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ತಾಲೂಕಿನ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ 11.30ರ ಸುಮಾರಿಗೆ ನಡೆದಿದೆ.

- ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿಯಲ್ಲಿ ಘಟನೆ । ಜ್ಯೋತಿ ಕೊಲೆ, ಹಂತಕ ಬಾಲರಾಜ್‌ ಬಂಧನ

- ರಾಜಿ ಪಂಚಾಯಿತಿ ತಯಾರಿ ಬಗ್ಗೆ ಪೊಲೀಸರಿಗೆ ಅನಾಮಿಕ ಮಾಹಿತಿ

- - -

ಕನ್ನಡಪ್ರಭ ವಾರ್ತೆ ಜಗಳೂರು

ಪತಿಯ ಅಕ್ರಮ ಸಂಬಂಧ ಪ್ರತಿಭಟಿಸುತ್ತಿದ್ದ ಹೆಂಡತಿಯನ್ನೇ ಕುಡುಗೋಲಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ತಾಲೂಕಿನ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ 11.30ರ ಸುಮಾರಿಗೆ ನಡೆದಿದೆ.

ಜ್ಯೋತಿ (35) ಕೊಲೆಯಾದ ಗೃಹಣಿಯಾಗಿದ್ದು, ಬಾಲರಾಜ್‌ ಹಂತಕ ಪತಿರಾಯ. ಚಿಕ್ಕಮಲ್ಲನಹೊಳೆ ಗ್ರಾಮದ ಜ್ಯೋತಿ ಅವರನ್ನು ಬಾಲರಾಜ್ ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.

10 ವರ್ಷಗಳ ಹಿಂದೆ ಬಾಲರಾಜ್ ಚಿಕ್ಕಮಲ್ಲನಹೊಳೆ ಗ್ರಾಮದ ಜ್ಯೋತಿ ಅವರನ್ನು ವಿವಾಹವಾಗಿದ್ದ. ಈ ದಂಪತಿಗೆ 7 ವರ್ಷದ ಮಗು ಇದೆ. ಹಲವು ವ್ಯಸನಗಳ ದಾಸನಾಗಿದ್ದ ಪತಿ ಬಾಲರಾಜ್ ವರ್ತನೆ ವಿರುದ್ಧ ಮದುವೆ ಆದಾಗಿನಿಂದಲೂ ನಿತ್ಯ ಜಗಳ ನಡೆಯುತ್ತಿತ್ತು. ಭಾನುವಾರ ರಾತ್ರಿಯೂ ಗಂಡ, ಹೆಂಡತಿ ಮಧ್ಯೆ ಜಗಳವಾಗಿದೆ. ಹೆಂಡತಿ ಜ್ಯೋತಿ ಮಲಗಿದ ನಂತರ ಬಾಲರಾಜ್ ಕುಡುಗೋಲಿನಿಂದ ಆಕೆಯ ಕತ್ತು ಕುಯ್ದು ಕೊಲೆ ಮಾಡಿದ್ದಾನೆ. ಅನಂತರ ಪತ್ನಿಯ ಮೃತದೇಹವನ್ನು ಮಲಗುವ ಕೋಣೆಯಿಂದ ಮನೆ ಮಧ್ಯದ ಕೋಣೆಗೆ ತಂದು ಹಾಕಿದ್ದಾನೆ.

ಅಲ್ಲದೆ, ಹೆಂಡತಿಗೆ ತಲೆ ಸರಿಯಿರಲಿಲ್ಲ, ಒಬ್ಬಳೇ ಮಾತನಾಡುತ್ತಿದ್ದಳು, ನಾನು ನನ್ನ ಮಗು ಕೋಣೆಯಲ್ಲಿ ಮಲಗಿದ್ದಾಗ ಆಕೆ ಬ್ಲೇಡ್‌ನಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರಿಗೆ ದುಃಖ ತುಂಬಿದ ಕಣ್ಣೀರು ಹರಿಸಿ ಕಥೆ ಕಟ್ಟಿದ ಬಾಲರಾಜ್ ಎಲ್ಲರನ್ನೂ ನಂಬಿಸುವ ನಾಟಕವಾಡಿದ್ದಾನೆ.

ಬಾಲರಾಜ್ ಬಂಧನ:

ಬಾಲರಾಜನ ಮಾತನ್ನು ನಂಬಿದ ಗ್ರಾಮಸ್ಥರು, ಸಂಬಂಧಿಕರು ನಡೆದಿದ್ದು ನಡೆದಿದೆ. ರಾಜಿ ಮಾಡಿ ಸರಿಮಾಡೋಣ ಎಂದು ಪಂಚಾಯಿತಿ ಸೇರಿದ್ದಾರೆ. ಆಗ ಗ್ರಾಮದ ಅನಾಮಿಕನೊಬ್ಬ ಜಗಳೂರು ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಇನ್‌ಸ್ಪೆಕ್ಟರ್‌ ಸಿದ್ರಾಮಯ್ಯ ಮತ್ತು ಪಿಎಸ್ಐ ಗಾದಿಲಿಂಗಪ್ಪ ಆಗಮಿಸಿ ಪರಿಶೀಲಿಸಿದರು. ಈ ವೇಳೆ ಜ್ಯೋತಿ ಕೊಲೆಯಾಗಿದ್ದಾರೆ ಎಂಬುದನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕೊಲೆಯ ನಿಗೂಢತೆಯನ್ನು ''''''''ಸೋಕೋ'''''''' ತಂಡ, ಬೆರಳಚ್ಚು ಮತ್ತು ಡಾಗ್‌ ಸ್ಕ್ವಾಡ್ ತಂಡ ಗೃಹಿಣಿ ಜ್ಯೋತಿ ಕೊಲೆಯಾದ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ವೇಳೆ ಇನ್‌ಸ್ಪೆಕ್ಟರ್ ಸಿದ್ರಾಮಯ್ಯ ಪತಿ ಬಾಲರಾಜನನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಆಗ ''''''''ನಾನೇ ನನ್ನ ಹೆಂಡತಿ ಜ್ಯೋತಿಯನ್ನು ಕೊಲೆ ಮಾಡಿದ್ದೇನೆ'''''''' ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿ ಬಾಲರಾಜ್‌ ವಿರುದ್ಧ ಕೊಲೆಯಾದ ಜ್ಯೋತಿ ಸಹೋದರಿ ಯಶೋದಾ ದೂರು ನೀಡಿದ್ದಾರೆ. ಬಾಲರಾಜನನ್ನು ಜಗಳೂರು ಪೊಲೀಸರು ಬಂಧಿಸಿ ಎಫ್ಐಆರ್ ದಾಖಲಿಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.

- - -

-1ಜೆ.ಎಲ್.ಆರ್.ಚಿತ್ರ2: ಜ್ಯೋತಿ.