ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಪಕ್ಷಿಕೆರೆಯಲ್ಲಿ ಇತ್ತೀಚೆಗೆ ಪತ್ನಿ, ಪುತ್ರರ ಕೊಂದು ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್ ಭಟ್ ಶೋಕಿ ಬದುಕಿಗೆ ಒಳಗಾಗಿ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದರು ಎಂಬ ಆರೋಪ ಕೇಳಿಬಂದಿದೆ.ಪಕ್ಷಿಕೆರೆ ಪೇಟೆಯಲ್ಲಿ ಚಿಕ್ಕ ಹೊಟೇಲ್ ಮೂಲಕ ಜೀವನ ಸಾಗಿಸುತ್ತಿದ್ದ ಜನಾರ್ದನ ಭಟ್- ಶ್ಯಾಮಲರ ಏಕೈಕ ಪುತ್ರನಾಗಿದ್ದ ಕಾರ್ತಿಕ್‌ಗೆ ಇಬ್ಬರು ಸಹೋದರಿಯರು. ಶಿಕ್ಷಣ ಪಡೆದ ಬಳಿಕ ನೈಜೀರಿಯಾದಲ್ಲಿ ಒಳ್ಳೆಯ ಸಂಬಳದ ಉತ್ತಮ ಉದ್ಯೋಗದಲ್ಲಿದ್ದ.
ಶಿವಮೊಗ್ಗ ಮೂಲದ ಪ್ರಿಯಾಂಕಳನ್ನು 6 ವರ್ಷಗಳ ಹಿಂದೆ ಮದುವೆಯಾದ ಬಳಿಕ ಪತ್ನಿಯ ಒತ್ತಡದಿಂದ ನೈಜೀರಿಯಾಕ್ಕೆ ಹೋಗದೆ ಊರಿನಲ್ಲೇ ಉಳಿದು ಕೆಲವು ಕಡೆ ಉದ್ಯೋಗ ಮಾಡಿ ಎಲ್ಲಿಯೂ ಕಾಯಂ ನಿಲ್ಲುತ್ತಿರಲಿಲ್ಲ. ಶೋಕಿ ಜೀವನ ನಡೆಸುತ್ತಿದ್ದು ಪಕ್ಷಿಕೆರೆಯ ಅಪಾರ್ಟ್ಮೆಂಟ್‌ನಲ್ಲಿ ಅಕ್ಕ ಕಣ್ಮಣಿ ಅವರ ಫ್ಲ್ಯಾಟ್‌ನಲ್ಲೇ ಒಂದು ಕೋಣೆಯಲ್ಲಿ ಪತಿ, ಪತ್ನಿ ಹಾಗೂ ಮಗು ವಾಸಿಸುತ್ತಿದ್ದರು.ಸುರತ್ಕಲ್ ಸೊಸೈಟಿಯಲ್ಲಿ ಉದ್ಯೋಗದಲ್ಲಿದ್ದು ಅಲ್ಲಿಯೂ ಕೆಲಸ ಕಳೆದುಕೊಂಡ ಬಳಿಕ ಆನ್‌ಲೈನ್ ಟ್ರೇಡಿಂಗ್ ಮಾಡುತ್ತಿದ್ದ. ಅನೇಕರಿಂದ ಸಾಲವನ್ನು ಪಡೆದಿದ್ದ. ಪ್ರತಿ ದಿನ ಪತ್ನಿಯ ಜೊತೆಗೆ ಮಗುವನ್ನು ಸ್ಕೂಟರ್ ಕರೆದುಕೊಂಡು ಹೋಗಿ ಸುರತ್ಕಲ್ ಶಾಲೆಯಲ್ಲಿ ಬಿಡುತ್ತಿದ್ದ, ಅಲ್ಲಿಂದ ಪತ್ನಿ ಜಿಮ್‌ಗೆ ಹೋಗುತ್ತಿದ್ದಳು. ಮಧ್ಯಾಹ್ನ ಮಗುವನ್ನು ಕರೆದುಕೊಂಡು ಮೂವರೂ ಹೊಟೇಲ್‌ನಲ್ಲಿ ಊಟ ಮಾಡಿ ರಾತ್ರಿಗೂ ಪಾರ್ಸೆಲ್ ತರುತ್ತಿದ್ದರು.
ಸಾಲದ ಒತ್ತಡದಿಂದ ಶುಕ್ರವಾರ ಬೆಳಗ್ಗೆ ಪತ್ನಿ ಮತ್ತು ಮಗುವನ್ನು ಇರಿದು ಕೊಂದು, ಮೊಬೈಲನ್ನು ರೂಮಿನ ಟಾಯ್ಲೆಟ್ ಕಮೋಡ್‌ನಲ್ಲಿ ಎಸೆದಿದ್ದ ಕಾರ್ತಿಕ್, ಸ್ಕೂಟರ್ ಮೂಲಕ ಕಲ್ಲಾಪು ದೇವಸ್ಥಾನ ಬಳಿ ತೆರಳಿ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಕೆ ಹೋಗಿದ್ದಾನೆ. ಕಾರ್ತಿಕ್ ಕೈಯಲ್ಲಿ ಬ್ಯಾಂಡೇಜ್ ಸುತ್ತಿಕೊಂಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇದೀಗ ಕಾರ್ತಿಕ್ ಭಟ್ ಒಂದೊಂದೇ ಅವ್ಯವಹಾರ ಬೆಳಕಿಗೆ ಬರುತ್ತಿದೆ. ಕಾರ್ತಿಕ್ ಭಟ್ ತನ್ನ 10 ಪವನ್ ಚಿನ್ನವನ್ನು ಎಗರಿಸಿದ್ದಾನೆ ಎಂದು ಪಕ್ಷಿಕೆರೆ ಹೊಸಕಾಡು ನಿವಾಸಿ ಮಹಮ್ಮದ್ ಆರೋಪಿಸಿದ್ದಾರೆ. ತನ್ನ ಶೋಕಿ ಜೀವನಕ್ಕಾಗಿ ಕಾರ್ತಿಕ್ ಮಹಮ್ಮದ್ ಅವರ ಚಿನ್ನವನ್ನು ಬಿಡಿಸಿ ಮಾರಾಟ ಮಾಡಿರಬೇಕೆಂದು ಶಂಕಿಸಲಾಗಿದೆ. ಮಹಮ್ಮದ್ ಹಣ ವಂಚನೆ ಬಗ್ಗೆ ಕಾರ್ತಿಕ್ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು ಮೊಬೈಲ್ ಮೂಲಕ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆಯಿದೆ.