ಸಾರಾಂಶ
ಬೆಂಗಳೂರು : ಪತಿ ತನಗಿಂತಲೂ ಮನೆಯಲ್ಲಿ ಸಾಕಿದ ಬೆಕ್ಕಿನ ಬಗ್ಗೆಯೇ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪತಿ ವಿರುದ್ಧ ದಾಖಲಿಸಿದ್ದ ದೌರ್ಜನ್ಯ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ.
ಪತ್ನಿಯು ತನ್ನ ಹಾಗೂ ಪೋಷಕರ ವಿರುದ್ಧ ದಾಖಲಿಸಿರುವ ದೂರು ರದ್ದುಪಡಿಸಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಅರ್ಜಿದಾರರ ಪತ್ನಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ದೂರನ್ನು ಪರಿಶೀಲಸಿದರೆ ಗಂಡ ಹೆಂಡತಿಗಿಂತಲೂ ಮನೆಯಲ್ಲಿ ಸಾಕಿದ ಬೆಕ್ಕನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಇದೊಂದು ಮನೆಯಲ್ಲಿ ಸಾಕು ಬೆಕ್ಕಿಗೆ ಸಂಬಂಧಿಸಿದ ಜಗಳವಾಗಿದೆ. ಬೆಕ್ಕು ಪತ್ನಿಗೆ ಹಲವು ಬಾರಿ ಪರಚಿರುವ ಆರೋಪವಿದೆ. ಇದೇ ಕಾರಣದಿಂದ ಹಲವು ಬಾರಿ ಪತಿ-ಪತ್ನಿ ನಡುವೆ ಜಗಳಗಳು ನಡೆದಿದ್ದು, ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡಿದ್ದಾರೆ. ಹೀಗಾಗಿ ವರದಕ್ಷಿಣೆಗಾಗಿ ಹಲ್ಲೆ ಅಥವ ಪತಿಯ ಕ್ರೌರ್ಯಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಗೊತ್ತಾಗಲಿದೆ ಎಂದು ಪೀಠ ಹೇಳಿದೆ.
ಹಾಗೆಯೇ, ದೂರುದಾರರು ಮಹಿಳೆ ದಾಖಲಿಸಿರುವ ದೂರಿನಲ್ಲಿ ಅರ್ಜಿದಾರರು ತನ್ನ ಪತ್ನಿ ವಿರುದ್ಧ ದೌರ್ಜನ್ಯ (ಐಪಿಸಿ ಸೆಕ್ಷನ್ 498ಎ) ಅಪರಾಧ ನಡೆಸಿರುವುದನ್ನು ಬಹಿರಂಗಪಡಿಸುತ್ತಿಲ್ಲ. ಇಂತಹ ಕ್ಷುಲ್ಲಕ ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆ ಕಾರ್ಯಚರಣೆಗೆ ತಡೆಯೊಡ್ಡುತ್ತವೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ದೌರ್ಜನ್ಯದ ನಡೆಸಿದ ಆರೋಪದಲ್ಲಿ ಅರ್ಜಿದಾರರ ವಿರುದ್ಧ ತನಿಖೆ ನಡೆಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ ಎಂದು ತಿಳಿಸಿ ಪ್ರಕರಣದ ತನಿಖೆಗೆ ತಡೆ ನೀಡಿ ಆದೇಶಿಸಿದೆ.