ಸಾರಾಂಶ
ರಿಪ್ಪನ್‍ಪೇಟೆ: ಪಟ್ಟಣದ ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯನ್ನು ಗ್ರಾಮಾಡಳಿತವು 15ನೇ ಹಣಕಾಸು ಅನುದಾನದಲ್ಲಿ ಅಭಿವೃದ್ಧಿಪಡಿಸಿದ ಕಾಮಗಾರಿಯ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಪಂ ಯೋಜನಾ ನಿರ್ದೇಶಕ ನಂದಿನಿ ಆರ್.ಬಿ., ಅಭಿಯಂತರರಿಗೆ ಗುರುವಾರ ಸೂಚಿಸಿದರು.
ಪಟ್ಟಣದ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2023-24 ನೇ ಸಾಲಿನ ಗ್ರಾಪಂ ವಾರ್ಷಿಕ ಜಮಾಬಂಧಿ ಕಾರ್ಯಕ್ರಮದಲ್ಲಿ ಚಿಕ್ಕಬೀರನ ಕೆರೆಯನ್ನು ಕಳೆದೊಂದು ವರ್ಷದ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನಮ್ಮೂರು-ನಮ್ಮಕೆರೆ ಯೋಜನೆ ಮತ್ತು ಗ್ರಾಮಸ್ಥರ ನೆರವಿನಿಂದ ₹13 ಲಕ್ಷ ವೆಚ್ಚದಲ್ಲಿ ಹೂಳು ತೆಗೆದು ದಂಡೆ ನಿರ್ಮಿಸುವ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗಿತ್ತು.ಗ್ರಾಮಾಡಳಿತವು ಇದೇ ಕೆರೆ ಕಾಮಗಾರಿಗೆಂದು ₹7 ಲಕ್ಷ ಮೊತ್ತವನ್ನು ಇರಿಸಿಕೊಂಡು, ಕಾಮಗಾರಿಗೆ ಒಟ್ಟು ₹4 ಲಕ್ಷದ 98 ಸಾವಿರ ವೆಚ್ಚ ಮಾಡಿರುವುದಾಗಿ ಜಮಾಬಂಧಿಯಲ್ಲಿ ಪ್ರಸ್ತಾಪಿಸಿದಾಗ ಆಕ್ಷೇಪವೆತ್ತಿದ ಗ್ರಾಮಸ್ಥರು ಕಾಮಗಾರಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಯೋಜನಾ ನಿರ್ದೇಶಕರು ಸಭೆಯಲ್ಲಿದ್ದ ಜಿ.ಪಂ.ಅಭಿಯಂತರ ಓಂಕಾರಪ್ಪರವರಿಗೆ ಸಮಗ್ರ ವರದಿ ನೀಡಲು ಸೂಚನೆ ನೀಡಿದರು. ಗ್ರಾಪಂ ವ್ಯಾಪ್ತಿಯಲ್ಲಾದ ವಿವಿಧ ಕಾಮಗಾರಿಗಳ ಬಗ್ಗೆ ಗ್ರಾಮಾಡಳಿತವು ಲೆಕ್ಕಪತ್ರವನ್ನು ಮಂಡಿಸಿತು. ನಂತರ ಚಿಪ್ಪಿಗರಕೆರೆಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ಗಣಪತಿ, ಮಲ್ಲಿಕಾರ್ಜುನ, ಮಂಜುಳ ಪಿಡಿಓ ನಾಗರಾಜ್, ಇನ್ನಿತರರಿದ್ದರು.