ಕಾಡು ಪ್ರಾಣಿಗಳ ಹಾವಳಿ: ಕಳಸ ಬಂದ್‌ ಭಾಗಶಃ ಯಶಸ್ವಿ

| Published : Feb 08 2025, 12:32 AM IST

ಸಾರಾಂಶ

ಕಳಸ, ತಾಲೂಕಿನ ಹಳುವಳ್ಳಿ ಸಮೀಪದ ಲಲಿತಾದ್ರಿಯಲ್ಲಿ ಕಾಡು ಕೋಣ ತಿವಿದು ಕಾಫಿ ಬೆಳೆಗಾರರೊಬ್ಬರು ಮೃತಪಟ್ಟಿರುವ ಘಟನೆ ಹಿನ್ನಲೆಯಲ್ಲಿ ಶುಕ್ರವಾರ ಕರೆ ನೀಡಲಾಗಿದ್ದ ಕಳಸ ತಾಲೂಕು ಕೇಂದ್ರ ಬಂದ್‌ ಭಾಗಶಃ ಯಶಸ್ವಿಯಾಯಿತು.

ತೋಟಕ್ಕೆ ಕಾಡುಕೋಣ ಬಂದರೆ ಗುಂಡು ಹಾರಿಸುತ್ತೇವೆ: ಪ್ರತಿಭಟನಾಕಾರರ ಆಕ್ರೋಶ, ಬಂದ್‌ಗೆ ಸರ್ವ ಪಕ್ಷಗಳ ಬೆಂಬಲ

ಕನ್ನಡಪ್ರಭ ವಾರ್ತೆ, ಕಳಸ

ತಾಲೂಕಿನ ಹಳುವಳ್ಳಿ ಸಮೀಪದ ಲಲಿತಾದ್ರಿಯಲ್ಲಿ ಕಾಡು ಕೋಣ ತಿವಿದು ಕಾಫಿ ಬೆಳೆಗಾರರೊಬ್ಬರು ಮೃತಪಟ್ಟಿರುವ ಘಟನೆ ಹಿನ್ನಲೆಯಲ್ಲಿ ಶುಕ್ರವಾರ ಕರೆ ನೀಡಲಾಗಿದ್ದ ಕಳಸ ತಾಲೂಕು ಕೇಂದ್ರ ಬಂದ್‌ ಭಾಗಶಃ ಯಶಸ್ವಿಯಾಯಿತು.

ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡುವ ಮೂಲಕ ವರ್ತಕರು ಹಾಗೂ ಸಾರ್ವಜನಿಕರು ಬಂದ್‌ಗೆ ಬೆಂಬಲ ಸೂಚಿಸಿದ್ದರು. ಬಸ್‌ ಹಾಗೂ ಇತರೆ ವಾಹನಗಳ ಸಂಚಾರ, ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದರಿಂದ ಬಂದ್‌ ಜನ ಜೀವನದ ಮೇಲೆ ಅಷ್ಟೇನೂ ಪರಿಣಾಮ ಬೀರಲಿಲ್ಲ.

ಇದೇ ಸಂದರ್ಭದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಸಿಎ ಬ್ಯಾಂಕ್ ಅಧ್ಯಕ್ಷ ಮಂಜಪ್ಪಯ್ಯ, ಮಲೆನಾಡಿ ನಲ್ಲಿ ವನ್ಯಜೀವಿ ಮಾನವ ಸಂಘರ್ಷ ತಪ್ಪಿಸಲು ರಾಜ್ಯ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಆದರೆ, ಅರಣ್ಯ ಇಲಾಖೆ ಈವರೆಗೂ ವನ್ಯಪ್ರಾಣಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಿಲ್ಲ. ಕಾಫಿ, ಅಡಕೆ ತೋಟಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದೆ ಎಂದು ಹೇಳಿದರು.

ಕಾಡು ಕೋಣಗಳು ಕಾರ್ಮಿಕರು, ರೈತರನ್ನು ಬಲಿ ಪಡೆಯುತ್ತಿವೆ. ಅರಣ್ಯ ಇಲಾಖೆಯವರು ರೈತರ ಹೆಣ ಬಿದ್ದಾಗ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಾರೆಯೇ ಹೊರತು ಕಾಡುಕೋಣಗಳ ಹಾವಳಿ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇನ್ನು ಮುಂದೆ ತೋಟಗಳಲ್ಲಿ ಕಾಡುಕೋಣಗಳು ಕಂಡು ಬಂದಲ್ಲಿ ಮಲೆನಾಡಿನ ಎಲ್ಲ ಕೃಷಿಕರೂ ಅವುಗಳಿಗೆ ಗುಂಡು ಹೊಡೆಯುವುದನ್ನು ಶುರು ಮಾಡೋಣ ಆಗ ಮಾತ್ರ ಸರಕಾರ ನಮ್ಮ ರಕ್ಷಣೆಗೆ ತಕ್ಕ ಕಾನೂನು ರೂಪಿಸುತ್ತದೆ ಎಂದರು.

ಬಿಜೆಪಿ ಮುಖಂಡ ಶೇಷಗಿರಿ ಮಾತನಾಡಿ, ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಜನ ಗುಳೆ ಹೋಗುವ ಸ್ಥಿತಿ ನಿರ್ಮಾಣ ಆಗುತ್ತಿದೆ. ವನ್ಯಜೀವಿಗಳ ಹಾವಳಿ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಹೋರಾಟ ಸಮಿತಿ ರಚನೆ ಮಾಡಿ ಪ್ರಬಲವಾಗಿ ದನಿ ಎತ್ತಬೇಕು. ಇಲ್ಲದಿದ್ದರೆ ಮಲೆನಾಡಿನಲ್ಲಿ ಕೃಷಿಕರಿಗೆ ಉಳಿಗಾಲವಿಲ್ಲ. ಇಡೀ ಮಲೆನಾಡಲ್ಲಿ ಕಾಡಾನೆ, ಕಾಡುಕೋಣಗಳ ಹಾವಳಿಯಿಂದ ರೈತರು, ಸಾರ್ವಜನಿಕರು ಬದುಕಲು ಸಾಧ್ಯವಾಗದಂತಾಗುತ್ತದೆ ಎಂದರು.ಕೃಷಿಕ ಟಿ.ವಿ. ವೆಂಕಟಸುಬ್ಬಯ್ಯ ಮಾತನಾಡಿ, ಕಳೆದ 3 ವರ್ಷಗಳಲ್ಲಿ ಕಾಡುಕೋಣ ಹಾವಳಿಯಿಂದ ಅನೇಕ ಬೆಳೆಗಾರರಿಗೆ ಗಾಯಗಳಾಗಿವೆ. ಮೂವರು ಈಗಾಗಲೇ ಮೃತಪಟ್ಟಿದ್ದಾರೆ. ನಮಗೆ ಕೃಷಿ ಬಿಟ್ಟರೆ ಬೇರೆ ವೃತ್ತಿ ಗೊತ್ತಿಲ್ಲ. ತೋಟಗಳಲ್ಲಿ ಕಾಡುಕೋಣಗಳ ಹಾವಳಿಯಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಆದ್ದರಿಂದ ತೋಟಕ್ಕೆ ಕಾಡುಕೋಣ ಬಂದರೆ ನಾವು ಗುಂಡು ಹಾರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜೆಡಿಎಸ್ ಮುಖಂಡ ಜ್ವಾಲನಯ್ಯ ಮಾತನಾಡಿ, ವನ್ಯಜೀವಿಗಳ ಹಾವಳಿ ಬಗ್ಗೆ ಅಧಿಕಾರಿಗಳಿಗೆ ಜಾಣ ಕಿವುಡು ಇದೆ. ನಮ್ಮ ಹೋರಾಟ ನಿಲ್ಲಿಸದೆ ಸತತವಾಗಿ ಚಳವಳಿ ರೂಪಿಸಬೇಕಿದೆ. ನಾವು ಜಮೀನಿಗೆ ಹೋಗದಿದ್ದರೆ ಅಧಿಕಾರಿಗಳಿಗೆ ಅನ್ನ ಸಿಗುವುದಿಲ್ಲ ಎಂಬುದನ್ನು ಮರೆಯಬಾರದು ಎಂದರು.

ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಮಲೆನಾಡಿನ ಕಾಫಿ ಬೆಳೆಗಾರರು ದೇಶದ ಸಂಪತ್ತಿಗೆ ಕೊಡುಗೆ ಕೊಡುತ್ತಿದ್ದಾರೆ. ಜೊತೆಗೆ ಪರಿಸರ ರಕ್ಷಣೆ ಮಾಡುತ್ತಿದ್ದಾರೆ. ಲಕ್ಷಾಂತರ ಉದ್ಯೋಗ ಸೃಷ್ಟಿ ಆಗುತ್ತಿದೆ. ಇದನ್ನು ಗಮನಿಸಿ ಸರಕಾರ ಕಾಡುಕೋಣ, ಕಾಡಾನೆಗಳ ಹಾವಳಿ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಮಾತನಾಡಿ, ಮಲೆನಾಡಿನಲ್ಲಿ ಕಾಫಿ, ಅಡಿಕೆ ನಂಬಿ ಜೀವನ ನಡೆಯುತ್ತಿದೆ. ಕುದುರೆ ಮುಖದಲ್ಲಿದ್ದ ಕಾಡುಕೋಣಗಳು ಕಳಸ ತಾಲೂಕಿನ ಎಲ್ಲ ಕಾಫಿ ತೋಟಕ್ಕೆ ಬಂದಿವೆ. ಅರಣ್ಯ ಇಲಾಖೆ ಹುಲ್ಲುಗಾವಲಿನಲ್ಲಿ ಅಕೇಶಿಯಾ ನೆಡುತೋಪು ಮಾಡಿದ ನಂತರ ಅವು ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿವೆ ಎಂದರು.ಕಾಂಗ್ರೆಸ್‌ ಮುಖಂಡ ಪ್ರಭಾಕರ್, ವಿಶ್ವನಾಥ್, ಎಂ.ಬಿ.ಸಂತೋಷ್, ಕೇಶವೇಗೌಡ, ನಾಗಭೂಷಣ್, ರವಿ, ಸುಂದರ ಶೆಟ್ಟಿ ಭಾಗವಹಿಸಿದ್ದರು. ತಹಸೀಲ್ದಾರ್ ಶಾರದಾ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ವಲಯ ಅರಣ್ಯಾಧಿ ಕಾರಿ ನಿಶ್ಚಿತ್ ಅವರಿಗೆ ಕೃಷಿಕರು ಮನವಿ ಸಲ್ಲಿಸಿದರು.-- ಬಾಕ್ಸ್--

ಅಪಾಯ ತರುವ ಮೃಗಗಳಿಗೆ ಗುಂಡು ಹೊಡೆವ ಅನುಮತಿ ನೀಡಿಕಾಡುಕೋಣಗಳ ದಾಳಿಯಿಂದ ಕೃಷಿಕರ ಜೀವಕ್ಕೆ ಅಪಾಯವಿದ್ದು ಕೃಷಿಕರ ಜೀವ ಉಳಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ರೈತರ ಪ್ರಾಣ ಹಾನಿ ಮಾಡುತ್ತಾ, ಬೆಳೆ ನಾಶ ಮಾಡುತ್ತಿರುವ ವನ್ಯಮೃಗಗಳನ್ನು ಅರಣ್ಯ ಇಲಾಖೆ ಹಿಡಿದು ದಟ್ಟ ಕಾಡಿಗೆ ರವಾನಿಸಬೇಕು. ತೋಟಗಳಲ್ಲಿ ಬೆಳೆ ಹಾನಿ ಮಾಡುತ್ತಾ ಕೃಷಿಕರ ಜೀವಕ್ಕೆ ಅಪಾಯ ತರುವ ವನ್ಯ ಮೃಗ ಗಳಿಗೆ ಗುಂಡು ಹೊಡೆಯಲು ಅನುಮತಿ ಕೊಡಬೇಕೆಂಬ ಬೇಡಿಕೆಗಳ ಮನವಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮುಖಂಡರು ಸಲ್ಲಿಸಿದರು. 7 ಕೆಸಿಕೆಎಂ 1

ಕಾಡು ಪ್ರಾಣಿಗಳ ಉಪಟಳ ನಿಯಂತ್ರಿಸುವಂತೆ ಆಗ್ರಹಿಸಿ ಶುಕ್ರವಾರ ಕಳಸ ತಾಲೂಕು ಕೇಂದ್ರ ಬಂದ್‌ ಹಿನ್ನಲೆಯಲ್ಲಿ ಸರ್ವ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಯವರು ಪ್ರತಿಭಟನಾ ಮೆರವಣಿಗೆ ನಡೆಸಿದರು.