ಹರಿಹರಪುರ ಗ್ರಾಮದಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿದ ಕಾಡಾನೆಗಳು

| Published : Dec 06 2024, 08:57 AM IST

ಹರಿಹರಪುರ ಗ್ರಾಮದಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿದ ಕಾಡಾನೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬೆಳ್ಳಂಬೆಳಗ್ಗೆ ಹರಿಹರಪುರ ಗ್ರಾಮದ ಬೆಂಗಳೂರು- ಜಲಸೂರು ರಾಜ್ಯ ಹೆದ್ದಾರಿ ಪಕ್ಕದ ಜಮೀನಿನಲ್ಲಿ ಆನೆಗಳು ಕಾಣಿಸಿಕೊಂಡಿವೆ. ಗ್ರಾಮದ ಪಶು ಚಿಕಿತ್ಸಾಲಯದ ಮುಂದಿರುವ ನಿಂಗೇಗೌಡರ ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿವೆ. ಕಬ್ಬಿನ ಗದ್ದೆಗೆ ಹೊಂದಿಕೊಂಡಂತೆ ಇರುವ ಭತ್ತದ ಗದ್ದೆಯಲ್ಲಿ ಓಡಾಡಿರುವ ಆನೆಗಳು ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಗ್ರಾಮಸ್ಥರು ಆನೆ ಓಡಿಸಲು ಪ್ರಯತ್ನಿಸಿದ್ದರೂ ಅದು ಫಲ ನೀಡಿಲ್ಲ.

ಎಂ.ಕೆ.ಹರಿಚರಣ್ ತಿಲಕ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಳೆದ ಐದು ದಿನಗಳ ಹಿಂದೆ ತಾಲೂಕಿನ ಬಸ್ತಿ ಹೊಸಕೋಟೆ ಬಳಿಯ ಕೆಆರ್‌ಎಸ್ ಹಿನ್ನೀರಿನಲ್ಲಿ ಕಾಣಿಸಿಕೊಂಡ ಜೋಡಿ ಕಾಡಾನೆಗಳು ನಿನ್ನೆ ಬೆಳಗ್ಗೆ ಹರಿಹರಪುರ ಗ್ರಾಮದಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿವೆ.

ಬೆಳ್ಳಂಬೆಳಗ್ಗೆ ಹರಿಹರಪುರ ಗ್ರಾಮದ ಬೆಂಗಳೂರು- ಜಲಸೂರು ರಾಜ್ಯ ಹೆದ್ದಾರಿ ಪಕ್ಕದ ಜಮೀನಿನಲ್ಲಿ ಆನೆಗಳು ಕಾಣಿಸಿಕೊಂಡಿವೆ. ಗ್ರಾಮದ ಪಶು ಚಿಕಿತ್ಸಾಲಯದ ಮುಂದಿರುವ ನಿಂಗೇಗೌಡರ ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿವೆ.

ಕಬ್ಬಿನ ಗದ್ದೆಗೆ ಹೊಂದಿಕೊಂಡಂತೆ ಇರುವ ಭತ್ತದ ಗದ್ದೆಯಲ್ಲಿ ಓಡಾಡಿರುವ ಆನೆಗಳು ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಗ್ರಾಮಸ್ಥರು ಆನೆ ಓಡಿಸಲು ಪ್ರಯತ್ನಿಸಿದ್ದರೂ ಅದು ಫಲ ನೀಡಿಲ್ಲ. ಗ್ರಾಮಸ್ಥರ ಕೂಗಾಟದಿಂದ ರೊಚ್ಚಿಗೆದ್ದ ಆನೆಗಳು ಗ್ರಾಮಸ್ಥರ ಮೇಲೆ ತಿರುಗಿ ಬಿದ್ದಿವೆ. ತಕ್ಷಣ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರ ಒಳಗೆ ಸೇರಿ ಗ್ರಾಮಸ್ಥರು ಬಚಾವ್ ಆಗಿದ್ದಾರೆ.

ಡಿಸೆಂಬರ್ 1 ರಂದು ತಾಲೂಕಿನ ಬಸ್ತಿ ಹೊಸಕೋಟೆ ಬಳಿಯ ಕೆಆರ್‌ಎಸ್ ಹಿನ್ನೀರಿನಲ್ಲಿ ಕಾಣಿಸಿಕೊಂಡ ಕಾಡಾನೆಗಳು ಆನಂತರ ಗಡಿ ಗ್ರಾಮಗಳಾದ ಕಬ್ಬಲಗೆರೆಪುರ, ಹೆರಗನಹಳ್ಳಿ, ಬಸ್ತಿ ಹೊಸಕೋಟೆ, ವರಹನಾಥಕಲ್ಲಹಳ್ಳಿ, ಕುರುಬಹಳ್ಳಿ ಗ್ರಾಮಗಳ ಮುಳುಗಡೆ ಪ್ರದೇಶಕ್ಕೆ ದಾಂಗುಡಿಯಿಟ್ಟಿವೆ.

ಅಕ್ಕಿಹೆಬ್ಬಾಳು ಹೋಬಳಿಯ ತ್ರಿವೆಣಿ ಸಂಗಮ, ಅಂಬಿಗರಹಳ್ಳಿ ಕಟ್ಟಹಳ್ಳಿ, ಮತ್ತೀಕೆರೆ, ಮಡುವಿನಕೋಡಿ ಮುಂತಾದ ಕಡೆ ಸಂಚರಿಸಿದ ಆನೆಗಳು ತಡರಾತ್ರಿ ಹರಿಹರಪುರ ಗ್ರಾಮಕ್ಕೆ ಆಗಮಿಸಿವೆ. ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಆನೆಗಳು ಸೇರಿಕೊಂಡಿದ್ದು, ಗ್ರಾಮದ ಸುತ್ತಮುತ್ತಲ ಪ್ರದೇಶದ ಜನರು, ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಅರಣ್ಯ ಇಲಾಖೆ ವಿರುದ್ಧ ರೈತಸಂಘ ಆಕ್ರೋಶ:

ಕಳೆದ ಐದಾರು ದಿನಗಳಿಂದ ತಾಲೂಕಿನಲ್ಲಿಯೇ ಬಿಡು ಬಿಟ್ಟು ರೈತರ ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿರುವ ಆನೆಗಳನ್ನು ಅರೆವಳಿಕೆ ಕೊಟ್ಟು ಸಾಕಾನೆಗಳ ಸಹಾಯದಿಮದ ಸೆರೆ ಹಿಡಿಯುವ ಬದಲು ಅರಣ್ಯಾಧಿಕಾರಿಗಳು ಕಾಡಾನೆಗಳ ಹಿಂದೆ ಜೋಟಾಟ ಆಡುತ್ತಿದ್ದಾರೆಂದು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನೆಗಳು ಕಾಡಿನಿಂದ ನಾಡಿಗೆ ಬರುವುದು ಹೊಸದೇನಲ್ಲ. ಮೂರನೇ ಬಾರಿಗೆ ಆನೆಗಳು ತಾಲೂಕಿನಲ್ಲಿ ಕಾಣಿಸಿಕೊಂಡಿವೆ. ಪ್ರತಿ ಎರಡು ವರ್ಷಕ್ಕೊಮ್ಮೆ ಆನೆಗಳು ಹಳ್ಳಿಗಳ ಜಮೀನುಗಳಿಗೆ ಪ್ರವೇಶಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಸುತ್ತಮುತ್ತ ಆನೆಗಳು ವಾಸಿಸುವ ಯಾವುದೇ ಅರಣ್ಯ ಪ್ರದೇಶವಿಲ್ಲ. ಬಂಡೀಪುರ, ನಾಗರಹೊಳೆ, ಸಕಲೇಶಪುರ, ಬನ್ನೇರುಘಟ್ಟ ಸೇರಿದಂತೆ ಯಾವುದೇ ಅರಣ್ಯ ಪ್ರದೇಶ ಇಲ್ಲಿಂದ ಕನಿಷ್ಠ 100 ಕಿ.ಮೀ ದೂರದಲ್ಲಿವೆ. ಅರಣ್ಯಾಧಿಕಾರಿಗಳು ಆನೆಗಳನ್ನು ಸೆರೆಹಿಡಿದು ಕಾಡಿಗೆ ಸಾಗಿಸುವ ಬದಲು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

100 ಕಿಮೀ ದೂರ ಇರುವ ಅರಣ್ಯ ಪ್ರದೇಶದವರೆಗೆ ಕಾಡಾನೆಗಳನ್ನು ನಾಡಿನಿಂದ ಪಟಾಕಿ ಸಿಡಿಸಿ, ಗದ್ದಲ ಮಾಡಿ ಓಡಿಸಿಕೊಂಡು ಹೋದರೆ ಅವು ಸಾಗುವ ಮಾರ್ಗದುದ್ದಕ್ಕೂ ರೈತರ ಬೆಳೆ ನಾಶವಾಗುತ್ತದೆ. ಪ್ರಸ್ತುತ ಆನೆಗಳು ಓಡಾಡುತ್ತಿರುವ ಪ್ರದೇಶದಲ್ಲಿ ರೈತರು ಸಂವೃದ್ದವಾಗಿ ಭತ್ತ, ಕಬ್ಬು, ಅಡಿಕೆ, ಬಾಳೆ, ತೆಂಗು ಮುಂತಾದ ಬೆಳೆಗಳನ್ನು ಬೆಳೆದಿದ್ದಾರೆ ಎಂದು ತಿಳಿಸಿದ್ದಾರೆ.ರೈತರು, ಸಾರ್ವಜನಿಕರು ಆನೆಗಳನ್ನು ಕೆರಳಿಸಬಾರದು:

ನಾಡಿಗೆ ಬಂದಿರುವ ಕಾಡಾನೆಗಳನ್ನು ಕಾಡಿಗಟ್ಟುವ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಆದರೆ, ರೈತರು, ಸಾರ್ವಜನಿಕರು ಕೂಗಾಟದಿಂದ ಆನೆಗಳು ಕೆರಳುತ್ತಿವೆ. ಆನೆಗಳಿಗೆ ಗಾಬರಿ ಮಾಡುವ ಬದಲು ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅರಣ್ಯಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.

ಆನೆಗಳನ್ನು ಅರವಳಿಕೆ ನೀಡಿ ಸೆರೆ ಹಿಡಿಯಲು ಅಗತ್ಯವಾದ ಸೂಕ್ತ ವಾತಾವರಣ ಇಲ್ಲ. ಆನೆಗಳು ಹೇಮಾವತಿ ನದಿ ದಂಡೆ ಮತ್ತು ನೀರಾವರಿ ಪ್ರದೇಶದಲ್ಲಿ ಸಂಚರಿಸುತ್ತಿವೆ. ಅರವಳಿಕೆ ನೀಡಿದ ನಂತರ ಅವು ತೇವಾಂಶ ಇರುವ ಭೂಮಿಯಲ್ಲಿ ಕುಸಿದ್ದು ಬಿದ್ದರೆ ಅವುಗಳ ಜೀವಕ್ಕೆ ಅಪಾಯವಾಗುತ್ತದೆ. ಆದ್ದರಿಂದ ಅರಣ್ಯ ಇಲಾಖೆ ಆನೆಗಳನ್ನು ನೆರೆಯ ಕೃಷ್ಣರಾಜ ನಗರ ತಾಲೂಕಿನ ಅರಬಿತಿಟ್ಟು ಪ್ರದೇಶಕ್ಕೆ ಓಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.

ಆನೆಗಳು ಕಟಾವಿಗೆ ಬಂದಿರುವ ಭತ್ತದ ಗದ್ದೆಗಳು ಮತ್ತು ಕಬ್ಬಿನ ಗದ್ದೆಗಳನ್ನು ಹಾಳು ಮಾಡಿ ರೈತರ ವರ್ಷದ ಕೂಳನ್ನೆ ಕಸಿದುಕೊಳ್ಳುತ್ತಿವೆ. ಅರಣ್ಯ ಇಲಾಖೆ ಅರವಳಿಕೆ ಮದ್ದು ನೀಡಿ ಆನೆಗಳನ್ನು ಸೆರೆಹಿಡಿಯುವ ಮೂಲಕ ರೈತರ ಬೆಳೆಗಳ ಸಂರಕ್ಷಣೆ ಮಾಡಬೇಕು. ರೈತರಿಗೆ ಅಗ್ಗದ ಪರಿಹಾರ ನೀಡದೆ ಸಂಪೂರ್ಣ ಬೆಳೆ ನಷ್ಟದ ಪರಿಹಾರ ನೀಡಬೇಕು.

- ಪುಟ್ಟೇಗೌಡ ತಾಲೂಕು ರೈತಸಂಘದ ಅಧ್ಯಕ್ಷ

ಆನೆಗಳ ದಾಳಿಯಿಂದ ಬೆಳೆ ನಷ್ಟಕ್ಕೊಳಗಾದ ಎಲ್ಲಾ ರೈತರಿಗೂ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುವುದು. ಆನೆಗಳ ಸಂಚಾರದಿಂದ ಬೆಳೆ ನಷ್ಟ ಅನುಭವಿಸಿದ ರೈತರು ಫೋಟೋಗಳೊಂದಿಗೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ.

- ರಾಘವೇಂದ್ರ ಅರಣ್ಯಾಧಿಕಾರಿ