ಸ್ಥಳಾಂತರ ವೇಳೆ ಮಾಹಿತಿ ಪಡೆದ ಶಾಸಕ ರಾಜೇಗೌಡ । ಕಾಡುಕೋಣ ಸೆರೆ ವರದಿ ಎಸ್‌ಒಪಿ ಪಿಸಿಸಿಎಫ್‌ಗೆ ಸಲ್ಲಿಕೆ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಅರೆನೂರು ಹಕ್ಕಿಮಕ್ಕಿಯಲ್ಲಿ ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದ ಕಾಡುಕೋಣವನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುವ ವೇಳೆ ಪಟ್ಟಣದಲ್ಲಿ ಶಾಸಕ ಟಿ.ಡಿ.ರಾಜೇಗೌಡ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಗೌಡ, ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಕೊಪ್ಪ ವಿಭಾಗ ದಲ್ಲಿ ಕಾಡುಕೋಣ ಸೆರೆ ಕಾರ್ಯಾಚರಣೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಆರಂಭಿಸಿ ಶುಕ್ರವಾರ ಒಂದು ಕಾಡುಕೋಣಕ್ಕೆ ಡಾರ್ಟ್ ಸಹ ಮಾಡಲಾಗಿತ್ತು. ಆದರೆ ಡಾರ್ಟ್ ಮಾಡಲಾದ ಪ್ರದೇಶ ಬಹಳ ಆಳವಾಗಿತ್ತು. ಅದರ ಜೀವಕ್ಕೆ ಹಾನಿಯಾಗುವ ಸಾಧ್ಯತೆಯಿತ್ತು. ಈ ಹಿನ್ನೆಲೆಯಲ್ಲಿ ಕೋಣ ಹಿಡಿಯದೆ ವಾಪಾಸ್ ಅರಣ್ಯಕ್ಕೆ ಬಿಡಲಾಯಿತು.ಶನಿವಾರ ಕೊಪ್ಪ ವಿಭಾಗದಿಂದ ಆಲ್ದೂರು ಭಾಗಕ್ಕೆಕಾರ್ಯಾಚರಣೆ ಸ್ಥಳಾಂತರಿಸಿ ಅರೆನೂರು ಹಕ್ಕಿಮಕ್ಕಿ ಭಾಗದಲ್ಲಿ ಜಮೀನುಗಳಿಗೆ ಹಾನಿ ಮಾಡಿದ್ದ ಒಂಟಿ ಕಾಡುಕೋಣವನ್ನು ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಮುಂದಿನ ದಿನಗಳಲ್ಲೂ ಸಹ ರೈತರ ಜಮೀನುಗಳಿಗೆ ನುಗ್ಗಿ ಹಾನಿ ಮಾಡುವ ಕಾಡುಕೋಣಗಳನ್ನು ಹಂತ ಹಂತವಾಗಿ ಸೆರೆ ಹಿಡಿದು ಸ್ಥಳಾಂತರ ಮಾಡಲಾಗುವುದು. ಕಾಡುಕೋಣಗಳ ಸೆರೆ ಬಗ್ಗೆ ಈ ಹಿಂದೆಯೇ ಹಲವು ಸಭೆಗಳಲ್ಲಿ ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿ, ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೆ. ಈ ಬಗ್ಗೆ ಆದೇಶವೂ ಆಗಿತ್ತು.

ದಕ್ಷಿಣ ಭಾರತದಲ್ಲೇ ಪ್ರಥಮ ಪ್ರಯೋಗ. ಅರಣ್ಯ ಇಲಾಖೆ ಪಿಸಿಸಿಎಫ್ ಕುಮಾರ್ ಪುಷ್ಕರ್, ವನ್ಯಜೀವಿ ವಿಭಾಗದ ಸಿಸಿಎಫ್ ಯಶ್‌ಪಾಲ್ ಕ್ಷೀರಸಾಗರ್, ಡಿಎಫ್‌ಒ ಶಿವಶಂಕರ್, ರಮೇಶ್ ಬಾಬು, ಅರವಳಿಕೆ ತಜ್ಞ ರಮೇಶ್‌ ಕುಮಾರ್, ಚಟ್ಟಿಯಪ್ಪ ಸೇರಿದಂತೆ ೮೦ಕ್ಕೂ ಅಧಿಕ ಸಿಬ್ಬಂದಿ ಈ ಕಾರ್ಯಾಚರಣೆಗೆ ಶ್ರಮಪಟ್ಟಿದ್ದಾರೆ ಎಂದರು.ವನ್ಯಜೀವಿ ವಿಭಾಗದ ಸಿಸಿಎಫ್ ಯಶ್‌ಪಾಲ್ ಕ್ಷೀರಸಾಗರ್ ಮಾತನಾಡಿ ಕಳೆದ 3-4 ದಿನಗಳಿಂದ ಕೊಪ್ಪ ಎಸ್ಟೇಟ್‌ನಲ್ಲಿ ಕಾರ್ಯಾಚರಣೆ ತಾಲೀಲಿನಲ್ಲಿ ಮದ್ಯಪ್ರದೇಶದ ಮಾದರಿಯಲ್ಲಿ ಕಾಡುಕೋಣ ಸೆರೆ ತರಬೇತಿ ನೀಡಲಾಗಿತ್ತು.ಕಾಡುಕೋಣಕ್ಕೆ ಹೇಗೆ ಡಾರ್ಟ್ ಮಾಡಬೇಕು? ವಾಪಾಸ್ ಪ್ರಜ್ಞೆ ಬರಲು ಎಷ್ಟು ಔಷಧಿ ನೀಡಬೇಕು, ಸೆರೆ ಹೇಗೆ ಹಿಡಿಯಬೇಕು, ಅದು ಎಷ್ಟು ತೂಕವಿರಲಿದೆ ಹಾಗೂ ಅದನ್ನು ಹೇಗೆ ಎತ್ತಬೇಕು ಎಂಬುದನ್ನು ಸಿಬ್ಬಂದಿಗೆ ತಿಳಿಸಲಾಗಿತ್ತು. ಕಾಡುಕೋಣ ಹಿಡಿಯುವ ಎಸ್‌ಒಪಿಯನ್ನು (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಮೂಲಕ ತಯಾರಿಸಲಾಗಿದೆ.ಎಸ್‌ಒಪಿ ರಚನೆ ಬಳಿಕ ಕೊಪ್ಪ ಎಸ್ಟೇಟ್‌ನಲ್ಲಿ ಕಾರ್ಯಾಚರಣೆಗೆ ಸಾಧ್ಯವಾಗದೆ ಆಲ್ದೂರು ಭಾಗಕ್ಕೆ ಕಾರ್ಯಾ ಚರಣೆ ಸ್ಥಳಾಂತರ ಮಾಡಿ ಜನವಸತಿ ಪ್ರದೇಶಕ್ಕೆ ಬರುತ್ತಿದ್ದ ಕಾಡುಕೋಣವನ್ನು ಡಾರ್ಟ್ ಮಾಡಿ ಸೆರೆ ಹಿಡಿಯಲಾಗಿದೆ.ಈ ಕಾಡುಕೋಣವನ್ನು ಶಿವಮೊಗ್ಗದ ಮೃಗಾಲಯಕ್ಕೆ ಸ್ಥಳಾಂತರಿಸಿ ವೈದ್ಯಕೀಯ ಪರೀಕ್ಷೆ ಮಾಡಬೇಕಿದೆ. ತಂಡಕ್ಕೆ ವಿಶ್ರಾಂತಿ ಬೇಕಿರುವ ಕಾರಣ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಪುನಃ ಆರಂಭಿಸಲಾಗುವುದು. ಕಾಡುಕೋಣ ಸೆರೆ ಎಸ್‌ಒಪಿ ವೈಜ್ಞಾನಿಕವಾಗಿ ಮೊದಲನೇಯದು. ಈ ಎಸ್‌ಒಪಿ ವರದಿ ಪಿಸಿಸಿಎಫ್ ಗೆ ಕಳುಹಿಸಿ ಇದರಲ್ಲಿ ಯಾವ ಕುಂದು ಕೊರತೆಗಳಿವೆ. ಕಾರ್ಯಾಚರಣೆಯಲ್ಲಿ ಏನೆಲ್ಲಾ ಆಗಬೇಕಿದೆ ಎಂಬುದನ್ನು ತಿಳಿಸಲಾಗುವುದು ಎಂದರು.

(ಬಾಕ್ಸ್)

ಪರಿಸರವಾದಿಗಳ ಕೊಡುಗೆ ಶೂನ್ಯಅರಣ್ಯ ಇಲಾಖೆ ಆರಂಭಿಸಿರುವ ಕಾಡುಕೋಣ ಸೆರೆ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಪರಿಸರವಾದಿಗಳ ನಡೆ ಖಂಡಿಸಿದ ಶಾಸಕ ರಾಜೇಗೌಡ ಕಾಡುಕೋಣ ಸೆರೆ ಅವೈಜ್ಞಾನಿಕ ಎನ್ನುವ ಪರಿಸರವಾದಿಗಳ ಕೊಡುಗೆ ಪರಿಸರಕ್ಕೆ ಶೂನ್ಯ. ಕಾಡುಪ್ರಾಣಿ-ಮಾನವ ಸಂಘರ್ಷ ಆದಾಗ ಕೋಟಿಗಟ್ಟಲೇ ಪರಿಹಾರ ನೀಡಬೇಕಾಗುತ್ತದೆ. ಜೀವ ಹಾನಿ, ಬೆಳೆ ಹಾನಿ ಆದರೆ ವಾಪಾಸ್ ಕೊಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮೂಲ ಕಾಡುಗಳಲ್ಲಿ ಪ್ರಾಣಿಗಳಿಗೆ ಪೂರಕ, ಅಗತ್ಯ ಬೆಳೆಗಳನ್ನು ಎನ್‌ಜಿಒಗಳು ಬೆಳೆಯಬೇಕು. ಅದರ ಬದಲು ಕಾಡಲ್ಲಿ ಮರ ತೆಗೆಯಬೇಡಿ, ಹುಲ್ಲು, ಬಿದಿರು, ಬೈನೆ ಮರ ನೆಡಬೇಡಿ ಎಂದೆಲ್ಲಾ ಹೇಳುತ್ತಾರೆ.


ಕಾಡು ಪ್ರಾಣಿಗಳು ಯಾವ ಆಹಾರ ಸೇವನೆ ಮಾಡುತ್ತದೆಯೋ ಅದನ್ನು ಕಾಡಲ್ಲಿ ಬೆಳೆವ ಕೆಲಸವಾಗಬೇಕು. ಆದರೆ ಅರಣ್ಯದಲ್ಲಿ ಆಹಾರ ದೊರೆಯದೆ ಕಾಡುಪ್ರಾಣಿಗಳು ನಾವುಗಳು ಬೆಳೆದಂತಹ ಬೆಳೆಗಳನ್ನು ನಾಶ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಪರಿಸರ ವಾದಿಗಳು ಪ್ರಾಣಿಗಳಿಗೆ ಪೂರಕವಾದ ಆಹಾರದ ಬಗ್ಗೆ ಗಮನಹರಿಸಲಿ ಎಂದು ಸಲಹೆ ನೀಡಿದರು. ಪರಿಸರವಾದಿಗಳು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಬೇಕು. ಕೇವಲ ಪುಸ್ತಕ ಹಿಡಿದು ಕೆಲಸ ಮಾಡುವುದಲ್ಲ ಎಂದರು. ೧೭ಬಿಹೆಚ್‌ಆರ್ ೩:

ಆಲ್ದೂರು ಸಮೀಪದ ಅರೆನೂರು ಹಕ್ಕಿಮಕ್ಕಿಯಲ್ಲಿ ಸೆರೆ ಹಿಡಿದ ಕಾಡುಕೋಣವನ್ನು ಶಿವಮೊಗ್ಗಕ್ಕೆ ಕೊಂಡೊಯ್ಯುವ ವೇಳೆ ಬಾಳೆಹೊನ್ನೂರಿನಲ್ಲಿ ಶಾಸಕ ಟಿ.ಡಿ.ರಾಜೇಗೌಡ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಯಶ್‌ಪಾಲ್ ಕ್ಷೀರಸಾಗರ್, ಶಿವಶಂಕರ್, ಡಾ.ರಮೇಶ್‌ಕುಮಾರ್ ಇದ್ದರು.