ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆಯ ಮಹದೇಶ್ವರ ವನ್ಯಜೀವಿ ವಿಭಾಗದ ಬಪ್ಪರ್ ಜೋನ್ ವಲಯದ ಶಿರಗೋಡು ಗ್ರಾಮ ವ್ಯಾಪ್ತಿಗೆ ಬರುವ ರೈತ ವಿಜಯ್ ಜಮೀನಿನಲ್ಲಿ ಕಾಡಾನೆಗಳು 4 ಎಕರೆ ಬಾಳೆ ಫಸಲನ್ನು ತುಳಿದು ತಿಂದು ನಾಶಪಡಿಸಿದ ಬಗ್ಗೆ ರೈತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.ಬಾಳೆ ಮುಸುಕಿನ ಜೋಳ ಸೇರಿದಂತೆ ತೆಂಗಿನ ಗಿಡಗಳನ್ನು ರಾತ್ರಿ ಕಾಡಾನೆಗಳ ಹಿಂಡು ದಾಳಿ ಮಾಡಿ ಫಸಲನ್ನು ಹಾನಿ ಮಾಡಿವೆ. ಕಾಡುಪ್ರಾಣಿಗಳನ್ನು ರೈತನ ಜಮೀನಿಗೆ ಬರದಂತೆ ತಡೆಗಟ್ಟಲು ಅರಣ್ಯ ಇಲಾಕೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂಕ್ತ ಪರಿಹಾರಕ್ಕೆ ಅಗ್ರಹ:ದಿನನಿತ್ಯ ಕಾಡಾನೆಗಳು ರೈತನ ಜಮೀನಿಗೆ ಬಂದು ಫಸಲು ನಾಸಗೊಳಿಸಿ ಜೊತೆಗೆ ಕೃಷಿ ಚಟುವಟಿಕೆಯ ಪರಿಕರಗಳನ್ನು ಸಹ ತುಳಿದು ನಾಶಪಡಿಸಿದ್ದು ಲಕ್ಷಾಂತರ ರು. ನಷ್ಟವಾಗಿದೆ. ಬಾಳೆ ಫಸಲು ಕಟಾವಿಗೆ ಬಂದಿರುವ ಸಂದರ್ಭದಲ್ಲಿ ಲಕ್ಷಾಂತರ ರು. ಮೌಲ್ಯದ ಫಸಲನ್ನು ಹಾನಿ ಉಂಟು ಮಾಡಿರುವುದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ರೈತನ ಜಮೀನಿಗೆ ತೆರಳಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು. ಕಾಡಾನೆಗಳು ರೈತರ ಜಮೀನಿಗೆ ಬರದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತ ಸಂಘಟನೆ ವತಿಯಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ರೈತರು ತಿಳಿಸಿದ್ದಾರೆ.
ನಡು ರಸ್ತೆಯಲ್ಲಿ ನಿಂತ ಗಜರಾಜ:ಮಲೆ ಮಹದೇಶ್ವರ ಬೆಟ್ಟದ ಪಾಲಾರ್ ನಡು ರಸ್ತೆಯಲ್ಲಿ ಕಾಡಾನೆ ನಿಂತು ಕೆಲವು ಕಾಲ ಆತಂಕ ಉಂಟು ಮಾಡಿದ್ದು, ನಾಗರಿಕರು ಪಾದಾಚಾರಿಗಳು ಮತ್ತು ವಾಹನ ಸವಾರರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನ ಸವಾರರು ಕಾಡಾನೆ ನಡುರಸ್ತೆಯಲ್ಲಿ ನಿಂತಿರುವುದನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಎಚ್ಚರಿಕೆಯಿಂದ ವಾಹನ ಸವಾರರು ಓಡಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.