ಕಾಡಾನೆ ದಾಳಿ: ಸಹೋದರರಿಗೆ ಗಾಯ

| Published : Jan 04 2025, 12:31 AM IST

ಸಾರಾಂಶ

ಹಳ್ಳಿಗಟ್ಟಿನಲ್ಲಿ ಬೈಕ್‌ನಲ್ಲಿದ್ದ ತೆರಳುತ್ತಿದ್ದ ಮೊಹಮ್ಮದ್ ಫೈಜನ್ ಹಾಗೂ ಅಬುರ್ ಉವೈಸ್ ಎಂಬವರು ಆನೆ ದಾಳಿಗೆ ತುತ್ತಾದ ಸಹೋದರರು. ಬೈಕ್ ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಏಕಾಏಕಿ ಬಂದ ಆನೆ ಇಬ್ಬರ ಮೇಲೆ ದಾಳಿ ನಡೆಸಿದೆ. ಅದೃಷ್ಟವಷಾತ್ ಇಬ್ಬರೂ ಸಹೋದರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಬೈಕ್‌ನಲ್ಲಿ ಸಾಗುತ್ತಿದ್ದ ವೇಳೆ ಯುವಕರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಸಿಐಟಿ ಕಾಲೇಜು ಬಳಿ ಶುಕ್ರವಾರ ಮುಂಜಾನೆ ನಡೆದಿದೆ.

ಬೈಕ್‌ನಲ್ಲಿದ್ದ ತೆರಳುತ್ತಿದ್ದ ಮೊಹಮ್ಮದ್ ಫೈಜನ್ ಹಾಗೂ ಅಬುರ್ ಉವೈಸ್ ಎಂಬವರು ಆನೆ ದಾಳಿಗೆ ತುತ್ತಾದ ಸಹೋದರರು. ಬೈಕ್ ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಏಕಾಏಕಿ ಬಂದ ಆನೆ ಇಬ್ಬರ ಮೇಲೆ ದಾಳಿ ನಡೆಸಿದೆ. ಅದೃಷ್ಟವಷಾತ್ ಇಬ್ಬರೂ ಸಹೋದರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನಲ್ಲಿ ಹುಲಿ ಹಾವಳಿ ಹೆಚ್ಚಾಗಿತ್ತು. ಇದೀಗ ಆನೆ ಹಾವಳಿ ಕೂಡ ಇರುವುದರಿಂದ ತಾಲೂಕಿನ ಕೆಲವು ಕಡೆಗಳಲ್ಲಿ ಆತಂಕ ಉಂಟಾಗಿದೆ.

ಕಾಡಾನೆ ದಾಳಿಗೆ ಒಳಗಾದ ಸಹೋದರರನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಇಬ್ಬರನ್ನು ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್‌ ಪೂವಯ್ಯ, ಕಳೆದ 25 ವರ್ಷಗಳಿಂದ ಜಿಲ್ಲೆಯಲ್ಲಿ ಆನೆ ಮತ್ತು ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದು ಇದುವರೆಗೂ ಕೂಡ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹಲವು ತೋಟಗಳಲ್ಲಿ ಹಿಂಡು ಹಿಂಡಾಗಿ ಬೀಡು ಬಿಟ್ಟಿರುವ ಆನೆಗಳನ್ನು ಬೇರೆ ಜಾಗ ಗುರುತಿಸಿ ಶಾಶ್ವತವಾಗಿ ಅವರನ್ನು ಗುರುತಿಸಲಾದ ಜಾಗದಲ್ಲಿ ನೆಲೆ ನಿಲ್ಲಿಸುವಂತೆ ಚಿಂತನೆ ಹಾಗು ಯೋಜನೆ ರೂಪಿಸಲಾಗುತ್ತಿದೆ ಎಂದಿದ್ದಾರೆ.

ಗಾಯಗೊಂಡ ಇಬ್ಬರು ಸಹೋದರರಿಗೂ ಕೂಡ ಪರಿಹಾರ ಮೊತ್ತವನ್ನು ಕೂಡ ನೀಡಲಾಗುತ್ತದೆ ಎಂದು ತಿಳಿಸಿದರು.