ಹೆಬ್ರಿಯಲ್ಲಿ ಕಾಡಾನೆ ಹಾವಳಿ: ಗ್ರಾಮಸ್ಥರ ಪ್ರತಿಭಟನೆ

| Published : Jun 21 2024, 01:04 AM IST

ಸಾರಾಂಶ

ಒಂಟಿ ಸಲಗ ಹೆಬ್ರಿ, ಆಗುಂಬೆ ವ್ಯಾಪ್ತಿಯ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ. ಇದು ಸ್ಥಳೀಯರಿಗೆ ಹಾಗೂ ರಸ್ತೆಯಲ್ಲಿ ಸಾಗುವ ಜನರಲ್ಲಿ ಆತಂಕ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಹೆಬ್ರಿ ತಾಲೂಕಿನಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗವೊಂದನ್ನು ಕಾಡಿಗಟ್ಟುವಂತೆ ಆಗ್ರಹಿಸಿ ಸೀತಾನದಿ ಮೀನಾ ಪೂಜಾರಿ ಎಂಬವರ ಮನೆಯಲ್ಲಿ ನಾಗರಿಕರ ಸಮಿತಿ, ರೈತ ಸಂಘ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಕುದುರೆಮುಖ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು, ಪೋಲಿಸ್ ಇಲಾಖೆ ಉನ್ನತಾಧಿಕಾರಿಗಳು, ಹೆಬ್ರಿ ಠಾಣೆ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಗತಿಪರ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ, ಗುಲ್ಕಾಡು ಭಾಸ್ಕರ್, ಕಿಸಾನ್ ಸಂಘದ ರಾಜೀವ್‌ ಶೆಟ್ಟಿ, ನಾಡ್ಪಾಲು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ, ಜಲಜಾ ಪೂಜಾರ್ತಿ, ಅಷ್ಟೊಳ್ಳಿ ರಮೇಶ್ ಶೆಟ್ಟಿ, ವಿಜೇಂದ್ರ ಶೆಟ್ಟಿ ಸೀತಾನದಿ, ಸಂಜೀವ ನಾಯ್ಕ ಸೇರಿದಂತೆ ರೈತರು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ, ಹೆಬ್ರಿ ವಲಯ ಅರಣ್ಯ ಅಧಿಕಾರಿಗಳು ಮತ್ತು ವನ್ಯಜೀವಿ ವಿಭಾಗ ಅಧಿಕಾರಿಗಳು ಹಾಜರಿದ್ದು, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಒಂಟಿ ಸಲಗ ಹೆಬ್ರಿ, ಆಗುಂಬೆ ವ್ಯಾಪ್ತಿಯ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ. ಇದು ಸ್ಥಳೀಯರಿಗೆ ಹಾಗೂ ರಸ್ತೆಯಲ್ಲಿ ಸಾಗುವ ಜನರಲ್ಲಿ ಆತಂಕ ಮೂಡಿಸಿದೆ.

ಕಳೆದ ನಾಲ್ಕು ದಿನಗಳಿಂದ ಹೆಬ್ರಿ ತಾಲೂಕಿನ ನಾಡ್ಪಾಲು ನೆಲ್ಲಿಕಟ್ಟೆ ಮೀನಾ ಪೂಜಾರ್ತಿ ಎಂಬವರ ಮನೆ ಬಳಿ ಆನೆ, ರಾತ್ರಿ ವೇಳೆಯಲ್ಲಿ ದಾಳಿ‌ ಮಾಡುತ್ತಿದ್ದು, ಹಲಸು, ತೆಂಗು ಹಾಗೂ ಬಾಳೆ ನಾಶಮಾಡಿದೆ.

ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಕಳೆದ ಮೂವತ್ತು ವರ್ಷಗಳಿಂದ ಈ ಒಂಟಿ ಸಲಗವು ಸುಳ್ಯದ ಕುಕ್ಕೆ ಸುಬ್ರಹ್ಮಣ್ಯದಿಂದ ಬೆಳ್ತಂಗಡಿ ಮೂಲಕ ನಾರಾವಿ, ಮಾಳ ಘಾಟ್ ಮೂಲಕ ವಾಲಿಕುಂಜ ಬೆಟ್ಟದ ಮೇಲಿನ ಕಬ್ಬಿನಾಲೆಯ ತಿಂಗಳಮಕ್ಕಿ, ತೆಂಗುಮಾರ್, ಕಿಗ್ಗ, ಬರ್ಕಣ ಮಲ್ಲಂದೂರು, ಆಗುಂಬೆ ಮೂಲಕ ಹೊಸನಗರ ವರೆಗೆ ಸಂಚರಿಸುತ್ತದೆ. ಆದರೆ ಯಾವುದೇ ಪ್ರಾಣ ಹಾನಿ ಮಾಡಿಲ್ಲ.