ಮಳೆ ನಡುವೆ ಕಾಡಾನೆಗಳ ಉಪಟಳ

| Published : Jul 27 2024, 12:47 AM IST

ಸಾರಾಂಶ

ಬೇಲೂರು ತಾಲೂಕಿನಲ್ಲಿ ವಿಪರೀತ ಮಳೆಯ ನಡುವೆ ಅರೇಹಳ್ಳಿ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಕಾಡಾನೆಗಳ ಗುಂಪು ಗ್ರಾಮದ ಚಂದ್ರವತಿ, ಶಂಕರ, ಸಂಕಪ್ಪ, ಸಂತೋಷ್ ಶೆಟ್ಟಿರವರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡಿದೆ, ಇದರಿಂದ ಬೇಸೆತ್ತ ಚಂದ್ರವತಿಯವರು ಕಾಡಾನೆಗಳ ಹಾವಳಿಯಿಂದ ನಿಯಂತ್ರಿಸಿಕೊಳ್ಳಲು ತಾನು ಬೆಳೆದಿದ್ದ ಬಾಳೆ ಗಿಡಗಳನ್ನು ಸ್ವತಃ ತಾನೇ ಕಡಿದು ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನಾದ್ಯಂತ ಸುರಿಯುತ್ತಿರುವ ಭರ್ಜರಿ ಮಳೆಯ ಕಾಟ ಒಂದೆಡೆಯಾದರೆ ಇದರ ಜೊತೆಗೆ ಕಾಡಾನೆಗಳ ಹಾವಳಿಯಿಂದ ಬೆಳೆ ಹಾಳಾಗುತ್ತಿದ್ದು ರೈತರು ಕಂಗಾಲಾಗಿದ್ದಾರೆ. ವಿಪರೀತ ಮಳೆಯ ನಡುವೆ ಅರೇಹಳ್ಳಿ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು ಇತ್ತೀಚಿಗೆ ಸುತ್ತಮುತ್ತಲಿನ ಕೆಲವು ರೈತರು ಹಾಗೂ ಕಾಫಿ ತೋಟಗಳ ಮಾಲೀಕರು ಕಾಡನೆಗಳ ಹಾವಳಿಯಿಂದ ತಾತ್ಕಾಲಿಕವಾಗಿ ಬಚಾವಾಗಲು ಸೋಲಾರ್‌ ಬೇಲಿ ನಿರ್ಮಿಸಿದ್ದು ಅದರಿಂದ ತುಸು ನಿಯಂತ್ರಣವಾಗಿರುವುದು ಕೇಳಿ ಬಂದಿದೆ.ಅದರಂತೆ ಲಿಂಗಾಪುರ ಗ್ರಾಮದಲ್ಲಿ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಸೋಲಾರ್‌ ವಿದ್ಯುತ್ ಬೇಲಿಯನ್ನು ಅಳವಡಿಸಿದ ನಂತರ ಗ್ರಾಮಕ್ಕೆ ಕಾಣಿಸಿಕೊಳ್ಳದೆ ಬೇರೆಡೆ ತೆರಳಿದ್ದವು. ಅದರಿಂದ ಸಾರ್ವಜನಿಕರು ,ರೈತರು ತುಸು ನಿರಾಳರಾಗಿದ್ದರು, ಆದರೆ ಕಳೆದ ರಾತ್ರಿ ಕಾಡಾನೆಗಳ ಗುಂಪು ಗ್ರಾಮದ ಚಂದ್ರವತಿ, ಶಂಕರ, ಸಂಕಪ್ಪ, ಸಂತೋಷ್ ಶೆಟ್ಟಿರವರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡಿದೆ, ಇದರಿಂದ ಬೇಸೆತ್ತ ಚಂದ್ರವತಿಯವರು ಕಾಡಾನೆಗಳ ಹಾವಳಿಯಿಂದ ನಿಯಂತ್ರಿಸಿಕೊಳ್ಳಲು ತಾನು ಬೆಳೆದಿದ್ದ ಬಾಳೆ ಗಿಡಗಳನ್ನು ಸ್ವತಃ ತಾನೇ ಕಡಿದು ಹಾಕಿದ್ದಾರೆ, ಮನೆಯ ಹತ್ತಿರ ಇರುವ ಅಲ್ಪ ಜಮೀನಿನಲ್ಲಿ ಏನಾದರೂ ಕೃಷಿ ಮಾಡೋಣವೆಂದರೆ ಕಾಡಾನೆಗಳ ಹಾವಳಿ ನೆನಪಿಗೆ ಬರುತ್ತದೆ, ಅದಲ್ಲದೆ ಕಳೆದೆರಡು ವಾರಗಳಿಂದ ವಿಪರೀತ ಸುರಿಯುತ್ತಿರುವ ಮಳೆಯ ನಡುವೆ ವಿದ್ಯುತ್ ಇಲ್ಲದ ಕಗ್ಗತ್ತಲಲ್ಲಿ ಕಾಡಾನೆ ಬಂದರೂ ಸುಳಿವು ಇರುವುದಿಲ್ಲ. ಈ ಬಗ್ಗೆ ಶಾಶ್ವತ ಪರಿಹಾರಕ್ಕಾಗಿ ಯಾವಾಗ ಕಾಲ ಬರುತ್ತದೋ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಸಂಕಪ್ಪ ಅಳಲು ತೋಡಿಕೊಂಡರು.