ಸುಳ್ಯ ನಗರ ಪಂಚಾಯಿತಿ ವ್ಯಾಪ್ತಿಯ ದುಗ್ಗಲಡ್ಕದಲ್ಲಿ ಆನೆಗಳ ಹಿಂಡು ಕೃಷಿ ತೋಟಗಳಿಗೆ ದಾಳಿ ಮಾಡಿ ಅಪಾರ ನಷ್ಟ ಉಂಟು ಮಾಡಿ ಜನರು ಆತಂಕ ಪಡುವಂತೆ ಮಾಡಿವೆ.

ಸುಳ್ಯ: ಸುಳ್ಯ ನಗರ ಪಂಚಾಯಿತಿ ವ್ಯಾಪ್ತಿಯ ದುಗ್ಗಲಡ್ಕದಲ್ಲಿ ಆನೆಗಳ ಹಿಂಡು ಕೃಷಿ ತೋಟಗಳಿಗೆ ದಾಳಿ ಮಾಡಿ ಅಪಾರ ನಷ್ಟ ಉಂಟು ಮಾಡಿ ಜನರು ಆತಂಕ ಪಡುವಂತೆ ಮಾಡಿವೆ.ಕಳೆದ ಒಂದು ವಾರದಿಂದ ಕಂದಡ್ಕದ ಅಜಯಕೃಷ್ಣ ಎಂಬವರ ಜಾಗದಲ್ಲಿ ಬೀಡು ಬಿಟ್ಟಿರುವ ೬ ಕಾಡಾನೆಗಳು ರಾತ್ರಿ ಹೊತ್ತು ತೋಟಗಳಿಗೆ ನುಗ್ಗಿ ಬಾಳೆ, ತೆಂಗು, ಅಡಿಕೆ ಮರಗಳನ್ನು ಧ್ವಂಸ ಮಾಡುತ್ತಿವೆ. ಕಂದಡ್ಕದ ಅಜಯಕೃಷ್ಣ, ಹೇಮಂತ ಕುಮಾರ್ ಕಂದಡ್ಕ, ಯಶವಂತ ಕುಡೆಕಲ್ಲು ಅವರ ತೋಟಕ್ಕೆ ಅಪಾರ ಹಾನಿ ಮಾಡಿರುವ ಆನೆಗಳು ಕಳೆದ ರಾತ್ರಿ ದುಗ್ಗಲಡ್ಕದ ಪೇಟೆಯವರೆಗೂ ಬಂದು ಪೇಟೆಯಲ್ಲಿ ಮನೆ ಇರುವ ಚಂದ್ರಶೇಖರ ಗೌಡ ಮೋಂಟಡ್ಕ ಅವರ ತೋಟದಲ್ಲಿ ಅಪಾರ ಹಾನಿ ಮಾಡಿವೆ.

ನ.ಪಂ. ಮಾಜಿ ಅಧ್ಯಕ್ಷೆ ಶೀಲಾವತಿ ಮಾಧವ, ಮಣಿಕಂಠ ದುಗ್ಗಲಡ್ಕ, ದಿನೇಶ್ ಮಣಿಯಾಣಿ, ಉಮೇಶ್ ದೀವಟಿಗೆ, ಬಾಲಚಂದ್ರ ಕುಂಬೆತ್ತಿಬನ, ಬಾಬು ನಾಯ್ಕ, ಹೇಮಂತ ಕುಂಬೆತ್ತಿಬನ, ದಿನೇಶ್ ಕೊಯಿಕುಳಿ ಮೊದಲಾದವರ ತೋಟಗಳಲ್ಲೂ ಹಾನಿ ಮಾಡಿವೆ. ಕಂದಡ್ಕದಲ್ಲೇ ಬೀಡು ಬಿಟ್ಟಿರುವುದರಿಂದ ಯಾವಾಗ ಆನೆ ಬರುವುದೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.