ಸಾರಾಂಶ
ಮಡಬೂರು, ಸಾತ್ಕೋಳಿ,ಆರಂಬಳ್ಳಿ, ಮಾವಿನಕರೆ, ಮಳಲಿ ಭಾಗದಲ್ಲಿ 2-3 ಆನೆಗಳಿಂದ ಪ್ರತಿ ನಿತ್ಯ ಹಾನಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಮುತ್ತಿನಕೊಪ್ಪ, ಕಡಹಿನಬೈಲು ಗ್ರಾಮ ಪಂಚಾಯಿತಿಗೆ ಸೇರಿದ ಮಡಬೂರು, ಸಾತ್ಕೋಳಿ, ಆರಂಬಳ್ಳಿ, ಮಾವಿನಕೆರೆ, ಸೂಸಲವಾನಿ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಕಳೆದ 4-5 ದಿನಗಳಿಂದ ಕಾಡಾನೆಗಳ ಕಾಟ ವಿಪರೀತವಾಗಿದ್ದು ನೂರಾರು ಅಡಕೆ, ಬಾಳೆ ಮರಗಳನ್ನು ದ್ವಂಸ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಡಬೂರಿನ ಡಾ.ಅನಿಲ್ ಕುಮಾರ್ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು 150 ಕ್ಕೂ ಅಡಕೆ ಮರಗಳನ್ನು ಸಿಗಿದು ಹಾಕಿದೆ. ಮಡಬೂರಿನ ಕೇಶವಮೂರ್ತಿ, ವಿಜಯಕುಮಾರ್, ರಮಾಮಣಿ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ನೂರಾರು ಅಡಕೆ ಮರಗಳನ್ನು ಹಾಳುಮಾಡಿವೆ. ಕಡಹಿನಬೈಲು ಗ್ರಾಮ ಪಂಚಾಯಿತಿಯ ಚನಮಣೆ ಎಂಬಲ್ಲಿ ಕಾಡಾನೆಗಳು ಸಾವಿರಾರು ನೇಂದ್ರ ಬಾಳೆ ಹಾಳು ಮಾಡಿದೆ. ಮಂಗಳವಾರ ಮಾವಿನಕೆರೆ ದಯಾನಂದ್, ಮಳಲಿ ಕೃಷ್ಣಮೂರ್ತಿ ಅವರ ಅಡಕೆ ತೋಟಕ್ಕೆ ಬಂದ ಕಾಡಾನೆಗಳು ಅಡಕೆ ಮರಗಳನ್ನು ಹಾಳು ಮಾಡಿದೆ. ಕಳೆದ ಒಂದು ವಾರದಿಂದ ಮಡಬೂರು, ಮುಡಬ, ಮಲ್ಲಂದೂರು, ಆಲಂದೂರು, ನೇರ್ಲೆಕೊಪ್ಪ, ಮಳಲಿ, ದ್ವಾರಮಕ್ಕಿ, ಹೆಮ್ಮೂರು ಭಾಗದಲ್ಲೇ ಸುತ್ತಾಡುತ್ತಿರುವ ಕಾಡಾನೆಗಳು ಅಡಕೆ ತೋಟಗಳನ್ನು ನಾಶ ಮಾಡುತ್ತಾ ಆನೆ ನಡೆದಿದ್ದೇ ದಾರಿ ಎಂಬಂತೆ ಸಾಗುತ್ತಿವೆ.ಅಡಕೆ ಕೊನೆ ತೆಗೆಯಲು ಭಯ: ಈ ಹಿಂದೆ ಕಾಡಾನೆಗಳು ರಾತ್ರಿ ಹೊತ್ತಿನಲ್ಲಿ ಗ್ರಾಮಗಳಿಗೆ ನುಗ್ಗಿ ಅಡಕೆ, ಬಾಳೆ, ತೆಂಗಿನ ಮರಗಳನ್ನು ನಾಶ ಮಾಡುತ್ತಿತ್ತು. ಹಗಲು ಹೊತ್ತಿನಲ್ಲಿ ಕಾಡಿನ ಪೊದೆಗಳಲ್ಲಿ ಅಡಗಿ ನಿಲ್ಲುತ್ತಿತ್ತು. ಈಗ ಕಾಡಾನೆಗಳಿಗೆ ಭಯ ಕಡಿಮೆಯಾಗಿ ಹಗಲು ಹೊತ್ತಿನಲ್ಲೂ ಅಡಕೆ ತೋಟಕ್ಕೆ ನುಗ್ಗುತ್ತಿದೆ. ಮಡಬೂರು ವಿಜಯಕುಮಾರ್ ಎಂಬುವರ ಅಡಕೆ ತೋಟಕ್ಕೆ ಮಂಗಳವಾರ ಹಗಲು ಹೊತ್ತಿನಲ್ಲೇ ದಾಳಿ ಇಟ್ಟಿದೆ. ಜನರು ಕಂಡರೂ ಭಯ ಇಲ್ಲದಂತೆ ರಾಜಾರೋಷವಾಗಿ ಗ್ರಾಮಗಳಿಗೆ ನುಗ್ಗಿ ಬರುತ್ತಿರುವ ಕಾಡಾನೆಗಳನ್ನು ಕಂಡು ರೈತರು ಭಯ ಭೀತರಾಗಿದ್ದಾರೆ. ಈಗ ಅಡಕೆ ಕೊಯ್ಲಿನ ಸಮಯವಾಗಿದ್ದು ರೈತರು ಅಡಕೆ ಕೊನೆ ತೆಗೆಯಲು ತೋಟಕ್ಕೆ ಹೋಗಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರು ಈ ಭಾಗದ ರಸ್ತೆಯಲ್ಲಿ ಓಡಾಡಲು ಸಹ ಭಯ ಪಡಬೇಕಾಗಿದೆ. ಯಾವ ಸಂದರ್ಭದಲ್ಲಿ ಕಾಡಾನೆಗಳು ಎದುರಾಗುತ್ತದೆಯೋ ಎಂಬ ಭಯ ಗ್ರಾಮಸ್ಥರಲ್ಲಿ ಕಾಡುತ್ತಿದೆ.ಈ ಹಿಂದೆ ಕಾಡಿನಲ್ಲಿ ದನಗಳು ಓಡಾಡುತ್ತಿದ್ದಂತೆ ಈಗ ಕಾಡಾನೆಗಳು ಓಡಾಡುತ್ತಿವೆ. ಕಾಡಾನೆಗಳು ಅಡಕೆ, ಭತ್ತ, ಬಾಳೆ, ತೆಂಗಿನ ಗಿಡಗಳನ್ನು ಮಾತ್ರ ನಾಶ ಮಾಡಿ ಕಾಡಿಗೆ ಸೇರುತ್ತಿರುವುದರಿಂದ ರೈತರು ಕೇವಲ ಆರ್ಥಿಕ ನಷ್ಟದ ಬಗ್ಗೆ ಮಾತ್ರ ಚಿಂತಿಸುತ್ತಿದ್ದರು. ಆದರೆ, ಸೀತೂರು ಗ್ರಾಮದ ಕೆರೆಗದ್ದೆ ಉಮೇಶ್ ಎಂಬ ರೈತರನ್ನು ಕಾಡಾನೆ ತುಳಿದು ಹಾಕಿದ ಮೇಲೆ ರೈತರಿಗೆ ಈಗ ಜೀವ ಭಯ ಕಾಡುತ್ತಿದೆ. ಹಗಲು ಹೊತ್ತಿನಲ್ಲೇ ಮನೆ ಸೇರಿಕೊಳ್ಳುತ್ತಿದ್ದಾರೆ. ಸರ್ಕಾರ ಕಾಡಾನೆಗಳು ನಾಡಿಗೆ ನುಗ್ಗುತಿರುವ ಈ ಸಮಸ್ಯೆಯನ್ನು ಹಗುರವಾಗಿ ತೆಗೆದುಕೊಳ್ಳದೆ ಗಂಭೀರವಾಗಿ ಪರಿಗಣಿಸಿ ಮಲೆನಾಡಿನ ಈ ದೊಡ್ಡ ಸಮಸ್ಯೆಯನ್ನು ಪರಿಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಐದಳ್ಳಿ ಸುತ್ತಮುತ್ತ ಮತ್ತೆ ಕಾಡಾನೆ ಹಾವಳಿಚಿಕ್ಕಮಗಳೂರು: ತಾಲೂಕಿನ ಐದಳ್ಳಿ ಗ್ರಾಮದ ಸುತ್ತಮುತ್ತ ಮತ್ತೆ ಕಾಡಾನೆಗಳ ಉಪಟಳ ಹೆಚ್ಚಳವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಳೆದ ಮೂರು ತಿಂಗಳಿಂದ ಒಂಟಿ ಸಲಗ ಬೀಡು ಬಿಟ್ಟಿದ್ದು, ಗ್ರಾಮದ ಸುತ್ತಮುತ್ತ ಓಡಾಡುತ್ತಿದೆ. ಮುಂಜಾನೆ ಹಾಗೂ ಕತ್ತಲಾಗುತ್ತಿದ್ದಂತೆ ಗ್ರಾಮದ ಸಮೀಪದಲ್ಲಿ ಓಡಾಡುತ್ತಿದೆ. ಹಾಗಾಗಿ ಸ್ಥಳೀಯರು, ವಿದ್ಯಾರ್ಥಿಗಳು ಸಂಚರಿಸಲು ಭಯಪಡುತ್ತಿದ್ದಾರೆ. ಹಲವು ದಿನಗಳ ಹಿಂದೆ ಕಾಡಾನೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮವಾಗಿಲ್ಲ. ಕೂಡಲೇ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕೆಂದು ಐದಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
-- ಕೋಟ್ --ಕಳೆದ 1 ವಾರದಿಂದ 2 ರಿಂದ 3 ಕಾಡಾನೆಗಳು ಪ್ರತಿ ನಿತ್ಯ 10 ರಿಂದ 15 ಕಿಮಿ ಸಂಚರಿಸುತ್ತಾ ಅಡಕೆ, ಬಾಳೆಯನ್ನು ದ್ವಂಸ ಮಾಡುತ್ತಿದೆ. ಲಕ್ಕವಳ್ಳಿಯ ವನ್ಯಜೀವಿ ಅರಣ್ಯ ಭಾಗಕ್ಕೆ ಹೊಂದಿಕೊಂಡಂತೆ ಇರುವ ಮಡಬೂರು, ಎಕ್ಕಡಬೈಲು, ಆರಂಬಳ್ಳಿ, ಜಾವಗಲ್, ಚೆನ್ನಮಣಿ, ಜೇನುಕಟ್ಟೆಸರದ ಭಾಗದಲ್ಲಿ ರೈಲ್ವೆ ಹಳಿಗಳ ಬ್ಯಾರಿಕೇಡ್ ಹಾಕಿದರೆ ಕಾಡಾನೆಗಳು ಆ ಭಾಗದಿಂದ ಬರಲು ಸಾದ್ಯವಾಗುವುದಿಲ್ಲ. ಇದರಿಂದ 40 ರಿಂದ 50 ಹಳ್ಳಿಗಳಿಗೆ ಕಾಡಾನೆಗಳ ಕಾಟ ತಪ್ಪುತ್ತದೆ.
ನಾಗರಾಜ,ರೈತ, ಗಾಂಧಿ ಗ್ರಾಮ, ಕಡಹಿನಬೈಲು ಗ್ರಾಪಂ
-- ಕೋಟ್ --ರಮಾಮಣಿ, ಅಡಕೆ ಬೆಳೆಗಾರರು, ಮಡಬೂರು, ಮುತ್ತಿನಕೊಪ್ಪ ಗ್ರಾಪಂ
ಕಳೆದ 1 ವಾರದಿಂದ ಕಾಡಾನೆಗಳ ಕಾಟದಿಂದ ಅಡಕೆ ತೋಟಕ್ಕೆ ಹೋಗಲು ಭಯವಾಗುತ್ತಿದೆ. ಕಷ್ಟಪಟ್ಟು ಬೆಳೆದ ಜಮೀನು ಕಾಡಾನೆಯಿಂದ ನಾಶವಾಗುತ್ತಿರುವುದನ್ನು ಕಂಡು ಸಂಕಟವಾಗುತ್ತಿದೆ. ಅಡಕೆಯೇ ನಮ್ಮ ಕುಟುಂಬಕ್ಕೆ ಪ್ರಮುಖ ಆದಾಯ. ಅಡಕೆ ಮರಗಳೇ ನಾಶವಾದರೆ ನಾವು ಬದುಕುವುದು ಹೇಗೆ.. ಶಾಸಕರು, ಅರಣ್ಯ ಮಂತ್ರಿಗಳ ಗಮನ ನೀಡಿ ಭದ್ರಾ ವನ್ಯ ಜೀವಿ ಅರಣ್ಯದಿಂದ ಕಾಡಾನೆಗಳು ಈಚೆಗೆ ಬಾರದಂತೆ ತಡೆಗೋಡೆ ನಿರ್ಮಿಸಿಕೊಡಬೇಕು.