ಸಾರಾಂಶ
ಹಾನಗಲ್ಲ: ಆಹಾರ, ನೀರಿಗಾಗಿ ತಾಲೂಕಿನ ಕಾಡಿನತ್ತ ಬಂದ ಆನೆಗಳು ಪೈರನ್ನು ತಿಂದು ರೈತರನ್ನು ಹೈರಾಣ ಮಾಡಿದ್ದು ಒಂದಾದರೆ, ಅರಣ್ಯ ಇಲಾಖೆ ಆನೆಗಳನ್ನು ಓಡಿಸುವ ಯತ್ನಕ್ಕೆ ಸೊಪ್ಪು ಹಾಕದಿರುವುದು ಇನ್ನೊಂದು ತಲೆನೋವಾಗಿದೆ.ತಾಲೂಕಿನ ಗಡಿಯ ಪಕ್ಕದ ದಾಂಡೇಲಿ ಮತ್ತು ಬನವಾಸಿ ಕಾಡಿನಿಂದ ಹಾನಗಲ್ಲ ಕಾಡಿಗೆ ಲಗ್ಗೆ ಇಟ್ಟ ಎರಡು ಕಾಡಾನೆಗಳ ತಂಡ ಬೆಳೆಹಾನಿಗೆ ಕಾರಣವಾಗಿದ್ದು, ಅರಣ್ಯ ಇಲಾಖೆಗೆ ನುಂಗಲಾರದ ತುತ್ತಾಗಿದೆ. ಕಾಡಾನೆ ಓಡಿಸಲು 4 ತಂಡಗಳನ್ನು ರಚಿಸಿ ನಿತ್ಯ ನಿರಂತರ ಪ್ರಯತ್ನ ನಡೆಸಿದ್ದರೂ ಯಥೇಚ್ಛವಾಗಿ ನೀರು ಹಾಗೂ ಬೆಳೆದು ನಿಂತ ಪೈರು ಆಹಾರವಾಗಿ ಸಿಗುತ್ತಿರುವುದರಿಂದ ಇಲ್ಲಿನ ಕಾಡಾನೆಗಳು ಕದಲುತ್ತಿಲ್ಲ.ತಲಾ 3 ಕಾಡಾನೆಗಳ 2 ತಂಡ ಇಲ್ಲಿರುವುದು ಹಾಗೂ ಒಂದು ಪ್ರತ್ಯೇಕ ಆನೆಯೂ ಇರುವುದು ಕಂಡುಬಂದಿದೆ. ಒಟ್ಟು 7 ಆನೆಗಳು ರೈತರನ್ನು ಕಾಡುತ್ತಿವೆ. ಅರಣ್ಯ ಸಿಬ್ಬಂದಿಗೆ ತಲೆನೋವು ತಂದಿವೆ.ತಾಲೂಕಿನ ಬಾಳಿಹಳ್ಳಿ, ಹಿರೇಕಣಗಿ, ಹುಣಶೆಟ್ಟಿಕೊಪ, ಮೂಡೂರು, ಜಂಗಿನಕೊಪ್ಪ, ಶಿರಗೋಡ, ಮಾವಕೊಪ್ಪ, ಹನುಮಾಪುರ, ಹನುಮನಕೊಪ್ಪ, ಸರ್ಕಾರಿ ದ್ಯಾಮನಕೊಪ್ಪ, ಗಡಿಯಂಕನಹಳ್ಳಿ ಗ್ರಾಮಗಳಲ್ಲಿ ಕಾಡಾನೆಗಳು ರಾತ್ರಿ ಸಂಚರಿಸುತ್ತಿದ್ದು, ರೈತರ ಹೊಲ-ಗದ್ದೆಗಳಲ್ಲಿನ ಪೈರು ತಿಂದು ನಾಶಪಡಿಸುತ್ತಿವೆ. ರಾತ್ರಿಯೆಲ್ಲ ವಿವಿಧ ಬೆಳೆಗಳನ್ನು ತಿಂದು, ಹಗಲು ಹೊತ್ತಿನಲ್ಲಿ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೀಡು ಬಿಡುತ್ತವೆ. ಹನುಮನಕೊಪ್ಪ ಗ್ರಾಮದಲ್ಲಿ ಶೇಕಪ್ಪ ಸಾಗರವಳ್ಳಿ ಎಂಬ ರೈತನ ಭತ್ತದ ರಾಶಿ ತಿಂದಿವೆ. ಚಿಕ್ಕೇರಿ ಹೊಸಳ್ಳಿಯಲ್ಲಿ ಶಿವಾನಂದ ಕೇಸಕ್ಕಿ ಎಂಬ ರೈತರ ಭತ್ತದ ಬಣವೆಯನ್ನು ತಿಂದಿವೆ. ಯಲ್ಲಪ್ಪ ಜನಗೇರಿ ಅವರ ತೋಟದ ಬಾಳೆ, ಅಡಕೆ ಗಿಡಗಳನ್ನು ಕಿತ್ತು ಹಾಕಿವೆ. ಹುಣಶೆಟ್ಟಿಕೊಪ್ಪ ಗ್ರಾಮದ ಎ.ಎಸ್. ನಂದಿಕೋಲ ಎಂಬವರ ಹೊಲದಲ್ಲಿ ಕಲ್ಲಂಗಡಿ ಹಣ್ಣುಗಳನ್ನು ತುಳಿದಾಡಿ ಹಾಳು ಮಾಡಿವೆ. ರೈತರು ತಮ್ಮ ಬೆಳೆ ಉಳಿಸಿಕೊಳ್ಳುವ ಮಾರ್ಗ ತೋಚದೆ ಚಿಂತೆಯಲ್ಲಿದ್ದಾರೆ. ಡ್ರೋಣ್ ಬಳಕೆ: ತಾಲೂಕಿಗೆ ಆಗಮಿಸಿರುವ ಕಾಡಾನೆಗಳ ಚಲನವಲನ ಗುರುತಿಸಲು ಅರಣ್ಯ ಇಲಾಖೆ ಡ್ರೋಣ ಬಳಸಿ ಕಂಡುಹಿಡಿಯಲು ಯತ್ನಿಸುತ್ತಿದೆ. ಅರಣ್ಯದಲ್ಲಿರುವ ಜಲಮೂಲಗಳ ಬಳಿ ಡ್ರೋಣ ಮೂಲಕ ಕಾಡಾನೆ ಚಲನವಲನ ಗುರುತಿಸಲು ಮುಂದಾಗಿದ್ದಾರೆ. ಅರಣ್ಯ ಇಲಾಖೆಯ ಯಾವುದೇ ಸಾಹಸಕ್ಕೂ ಬಗ್ಗದ ಆನೆಗಳು ಮೇರೆ ಮೀರಿ ಪೈರನ್ನು ಹಾಳು ಮಾಡುತ್ತಿವೆ.
ಕಾರ್ಯಾಚರಣೆ: ಹಾನಗಲ್ಲ ತಾಲೂಕಿಗೆ ಬಂದಿರುವ ಕಾಡಾನೆಗಳನ್ನು ಮರಳಿಸಲು ನಮ್ಮ ಸಿಬ್ಬಂದಿ 4 ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಡಾನೆಗಳ ಮನಸ್ಥಿತಿ ಗಮನಿಸಿ ಕಾರ್ಯಾಚರಣೆ ಕೈಗೊಳ್ಳಬೇಕಿದೆ. ಅವುಗಳು ಪ್ರತಿವರ್ಷವೂ ಬಂದು- ಹೋಗುವ ಟ್ರ್ಯಾಕ್ ಬದಲಿಸದಂತೆ ಅದೇ ಮಾರ್ಗದಲ್ಲಿ ಮರಳಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಆನೆಗಳನ್ನು ಬೆನ್ನಟ್ಟುವುದು, ಓಡಿಸುವುದನ್ನು ಮಾಡಬಾರದು. ಇದರಿಂದ ಕಾಡಾನೆಗಳು ಮನುಷ್ಯರ ಮೇಲೆ ದಾಳಿ ಮಾಡುವ ಅಪಾಯವಿರುತ್ತದೆ ಎಂದು ಆರ್‌ಎಫ್‌ಒ ಗಿರೀಶ ಚೌಗಲೆ ತಿಳಿಸಿದರು.