ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
೨೦ಕ್ಕೂ ಹೆಚ್ಚಿನ ಕಾಡಾನೆಗಳು ಭಾನುವಾರ ಮುಂಜಾನೆ ನಡೆಸಿದ ದಾಂಧಲೆಗೆ ಹತ್ತಾರು ಎಕರೆ ಭತ್ತದ ಪೈರು ನಾಶಗೊಂಡು ರೈತರಿಗೆ ಲಕ್ಷಾಂತರ ರು. ನಷ್ಟ ಸಂಭವಿಸಿದ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಅನುಘಟ್ಟ ಗ್ರಾಮ ಪಂಚಾಯಿತಿಯ ಕಡೇನಹಳ್ಳಿ-ಹಿರಿಗರ್ಜೆ ಗ್ರಾಮದ ವ್ಯಾಪ್ತಿಗೊಳಪಡುವ ಜಮೀನಿನಲ್ಲಿ ನಡೆದಿದೆ.ಈ ವೇಳೆ ಕಡೇನಹಳ್ಳಿ ಗ್ರಾಮದ ಯುವ ರೈತ ರುದ್ರೇಶ್ ಮಾತನಾಡಿ, ಭಾನುವಾರ ಮುಂಜಾನೆ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕಾಡಾನೆಗಳು ಇನ್ನೇನು ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಾಗಿದ್ದ ಭತ್ತದ ಬೆಳೆಯು ಕಾಡಾನೆ ದಾಳಿಗೆ ನಾಶಗೊಂಡಿದೆ. ಈ ಗ್ರಾಮದ ಈರಪ್ಪಗೌಡ, ರಾಮೇಗೌಡ,ದ್ಯಾವಪ್ಪಗೌಡ, ಆನಂದ, ಮಂಜುನಾಥ್ ಎಂಬುವವರ ರೈತರಿಗೆ ಸೇರಿದ ೯೯ ಸರ್ವೆ ನಂ.ನ ಗದ್ದೆಯಲ್ಲಿ ಸಮೃದ್ಧಿಯಾಗಿ ಬೆಳೆದಿದ್ದ ಪೈರು ಕಾಡಾನೆಗಳ ಓಡಾಟದಿಂದ ನೆಲ ಕಚ್ಚಿವೆ. ಕಾಡಾನೆಗಳ ಉಪಟಳದಿಂದ ರೈತರ ಪಡಿಪಾಟಲು ಹೇಳತೀರದಾಗಿದ್ದು ಅರಣ್ಯ ಇಲಾಖೆಯು ನಷ್ಟಗೊಂಡ ರೈತರಿಗೆ ಸೂಕ್ತ ಪರಿಹಾರ ಒದಗಿಸುವುದರ ಮೂಲಕ ನೆರವಿಗೆ ಧಾವಿಸಬೇಕು ಎಂದರು. ರೈತ ವೆಂಕಟೇಶ್ ಮಾತನಾಡಿ, ರಾತ್ರಿ ಇದ್ದಕ್ಕಿದ್ದಂತೆ ನಾಯಿ ಬೊಗಳುವ ಸದ್ದು ಕೇಳಿ ಎಚ್ಚರಗೊಂಡು ನೋಡಿದರೆ ಕಾಡಾನೆಗಳು ಘೀಳಿಡುವ ಶಬ್ಧ ಕೇಳಿತು. ಕೆಲವು ಗಂಟೆಗಳ ಕಾಲ ಇಲ್ಲೆ ಠಿಕಾಣಿ ಹೂಡಿದ್ದರಿಂದ ಸುತ್ತಮುತ್ತಲ ರೈತರ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಫಸಲು ನಾಶಗೊಂಡಿದ್ದು ಅತೀವ ನೋವುಂಟು ಮಾಡಿದೆ ಎಂದರು.
ಈ ವೇಳೆ ಮಂಜುನಾಥ್, ಕೃಷ್ಣಪ್ಪ, ಆನಂದ್, ರಮೇಶ, ಬಸವರಾಜು ಹಾಗೂ ಇನ್ನಿತರರು ಇದ್ದರು.