ಕಾಡಾನೆ ಕ್ಯಾಪ್ಟನ್ ಮತ್ತೆ ವಾಪಸ್ ಭೀಮನನ್ನು ಭೇಟಿಯಾಗಿದ್ದು ಮತ್ತೆ ಹಳೆಯ ಸೇಡಿನೊಂದಿಗೆ ಕಾದಾಟಕ್ಕೆ ಮುಂದಾಗಬಹುದು ಎಂಬ ಆತಂಕ ಎದುರಾಗಿದೆ. ಆನೆಗಳು ರಸ್ತೆಗಳಲ್ಲೇ ನಿರ್ಭಯವಾಗಿ ಸಂಚರಿಸುತ್ತಿದ್ದು, ಕೆಲವೆಡೆ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿರುವ ಮಾಹಿತಿ ದೊರೆತಿದೆ. ಇದರಿಂದ ರಾತ್ರಿ ವೇಳೆ ಗ್ರಾಮಸ್ಥರು ಹೊರಗೆ ಹೋಗಲು ಹೆದರಿಕೆಯ ವಾತಾವರಣ ನಿರ್ಮಾಣವಾಗಿದೆ.
ಬೇಲೂರು: ತಾಲೂಕಿನ ಕೋಗೋಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ‘ಭೀಮ’ ಹಾಗೂ ‘ಕ್ಯಾಪ್ಟನ್’ ಎಂದು ಗುರುತಿಸಲ್ಪಟ್ಟ ಕಾಡಾನೆಗಳು ಸಂಚರಿಸಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ.ಕೆಲವು ತಿಂಗಳ ಹಿಂದೆ ಜಗಭೋರನಹಳ್ಳಿ ಸಮೀಪ ಭೀಮ ಹಾಗೂ ಕ್ಯಾಪ್ಟನ್ ಎನ್ನುವ ಕಾಡಾನೆಗಳು ಪರಸ್ಪರ ಕಾದಾಟಕ್ಕೆ ಇಳಿದಿದ್ದವು. ಕಾಡಾನೆಗಳ ಸಂಘರ್ಷದಲ್ಲಿ ಭೀಮ ಎಂಬ ಆನೆಯ ಒಂದು ಕೋರೆ ಮುರಿದುಹೋಗಿತ್ತು. ಆನಂತರ ಇವೆರಡು ಆನೆಗಳು ಬೇರೆಯಾಗಿದ್ದವು. ಆದರೆ ಈಗ ಕಾಡಾನೆ ಕ್ಯಾಪ್ಟನ್ ಮತ್ತೆ ವಾಪಸ್ ಭೀಮನನ್ನು ಭೇಟಿಯಾಗಿದ್ದು ಮತ್ತೆ ಹಳೆಯ ಸೇಡಿನೊಂದಿಗೆ ಕಾದಾಟಕ್ಕೆ ಮುಂದಾಗಬಹುದು ಎಂಬ ಆತಂಕ ಎದುರಾಗಿದೆ. ಆನೆಗಳು ರಸ್ತೆಗಳಲ್ಲೇ ನಿರ್ಭಯವಾಗಿ ಸಂಚರಿಸುತ್ತಿದ್ದು, ಕೆಲವೆಡೆ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿರುವ ಮಾಹಿತಿ ದೊರೆತಿದೆ. ಇದರಿಂದ ರಾತ್ರಿ ವೇಳೆ ಗ್ರಾಮಸ್ಥರು ಹೊರಗೆ ಹೋಗಲು ಹೆದರಿಕೆಯ ವಾತಾವರಣ ನಿರ್ಮಾಣವಾಗಿದೆ.ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆದರೆ ಆನೆಗಳ ನಿರಂತರ ಚಲನವಲನದಿಂದ ಕಾರ್ಯಾಚರಣೆ ಸವಾಲಿನದ್ದಾಗಿದೆ ಎಂದು ತಿಳಿದುಬಂದಿದೆ.ಸ್ಥಳೀಯರು ಮಕ್ಕಳನ್ನು ಹಾಗೂ ವೃದ್ಧರನ್ನು ಹೊರಗೆ ಬಿಡದಂತೆ ಎಚ್ಚರಿಕೆ ವಹಿಸುತ್ತಿದ್ದು, ರಾತ್ರಿ ವೇಳೆಯಲ್ಲಿ ವಿಶೇಷ ಜಾಗ್ರತೆ ಕೈಗೊಳ್ಳಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಲಕ್ಷ್ಮಿನಾಗರಾಜು, ನಾಗೇಶ್ ಸುನಿಲ್, ಮಹೇಶ್ ಹಾಗೂ ಕೋಗೋಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.