ನಿರ್ಣಾಯಕ ಕಾರ್ಯಾಚರಣೆ ನಡೆಯುತ್ತಿರುವ ನಡುವೆಯೇ ಶನಿವಾರ ಬೆಳಗ್ಗೆ ಅರೇಹಳ್ಳಿ ಹೋಬಳಿ ಅನುಘಟ್ಟ ಗ್ರಾಪಂ ವ್ಯಾಪ್ತಿ ದೋಲನಮನೆ ಗ್ರಾಮದಲ್ಲಿ ಒಂಟಿ ಸಲಗ ಸಂಚರಿಸಿದೆ. ಬೆಳ್ಳಾವರ ಕಡೆಯಿಂದ ಬಂದ ಸಲಗ, ಗ್ರಾಮದ ಮುಖ್ಯರಸ್ತೆಯಲ್ಲೇ ಸಾಗಿದೆ. ನಾಯಿಗಳು ಬೊಗಳಲು ಆರಂಭಿಸಿದಾಗ ಎಚ್ಚರಗೊಂಡ ನಿವಾಸಿಗಳು ಆನೆ ಕಂಡು ಬೆಚ್ಚಿಬಿದ್ದಿದ್ದಾರೆ. ಕೆಲ ಕ್ಷಣ ರಸ್ತೆಯಲ್ಲಿ ಸಂಚರಿಸಿ ನಂತರ ತೋಟದ ಕಡೆಗೆ ಸಾಗಿದೆ.

ಕನ್ನಡಪ್ರಭವಾರ್ತೆ, ಬೇಲೂರು

ಇತ್ತೀಚೆಗೆ ನಡೆದ ಕಾಡಾನೆ ದಾಳಿಯಲ್ಲಿ ಇಬ್ಬರು ಮೃತಪಟ್ಟ ಹಿನ್ನೆಲೆ ರೈತರ ಆಕ್ರೋಶಕ್ಕೆ ಮಣಿದ ಸರ್ಕಾರ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆ ಗುಂಪಿನಿಂದ ಚದುರಿದ ಕಾಡಾನೆಗಳು ಗ್ರಾಮದ ಸಮೀಪ ಓಡಾಡುತ್ತಿರುವುದರಿಂದ ಜನರ ಆತಂಕ ಹೆಚ್ಚಾಗಿದೆ. ಶಾಲೆಗೆ ಮಕ್ಕಳನ್ನು ಕಳಿಹಿಸವು, ರೋಗಿಗಳು ಆಸ್ಪತ್ರೆಗೆ ತೆರಳಲು, ಕಾರ್ಮಿಕರು ತೋಟದ ಕೂಲಿ ಕೆಲಸಕ್ಕೆ ಹೋಗಲು ಹಿಂದೇಟು ಹಾಕುವಂತಾಗಿದೆ.

ಕಳೆದ ವಾರ ಎರಡೇ ದಿನಗಳ ಅಂತರದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ರೈತರ ಆಕ್ರೋಶಕ್ಕೆ ಮಣಿದು ಸರ್ಕಾರ ಭದ್ರಾ ಅಭಯಾರಣ್ಯಕ್ಕೆ ಕಾಡಾನೆ ಸ್ಥಳಾಂತರಿಸುವ ಕಾರ್ಯಾಚರಣೆಗೆ ಮುಂದಾಗಿದೆ. ಇದು ಕಾಫಿ ಕೊಯ್ಲಿನ ನಿರ್ಣಾಯಕ ಸಮಯ. ತೋಟಗಳಲ್ಲಿ ಕಾಫಿ ಕುಯ್ಯುವ ಕೆಲಸ ಭರದಿಂದ ಸಾಗಿದೆ. ಆದರೆ ಆನೆಗಳ ಸೆರೆ ಹಿಡಿಯುವ ಮತ್ತು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಯುತ್ತಿರುವ ಕಾರಣ ಕಾಡಾನೆಗಳ ಭಯದಿಂದ ಕಾರ್ಮಿಕರು ತೋಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದು ಕಾಫಿ ಬೆಳೆಗಾರಲಲ್ಲಿ ನಷ್ಟದ ಭಯ ಮತ್ತು ಆಕ್ರೋಶಕ್ಕೂ ಕಾರಣವಾಗಿದೆ. ಮುಖ್ಯ ರಸ್ತೆಯಲ್ಲಿ ಸಾಗಿದ ಸಲಗ

ನಿರ್ಣಾಯಕ ಕಾರ್ಯಾಚರಣೆ ನಡೆಯುತ್ತಿರುವ ನಡುವೆಯೇ ಶನಿವಾರ ಬೆಳಗ್ಗೆ ಅರೇಹಳ್ಳಿ ಹೋಬಳಿ ಅನುಘಟ್ಟ ಗ್ರಾಪಂ ವ್ಯಾಪ್ತಿ ದೋಲನಮನೆ ಗ್ರಾಮದಲ್ಲಿ ಒಂಟಿ ಸಲಗ ಸಂಚರಿಸಿದೆ. ಬೆಳ್ಳಾವರ ಕಡೆಯಿಂದ ಬಂದ ಸಲಗ, ಗ್ರಾಮದ ಮುಖ್ಯರಸ್ತೆಯಲ್ಲೇ ಸಾಗಿದೆ. ನಾಯಿಗಳು ಬೊಗಳಲು ಆರಂಭಿಸಿದಾಗ ಎಚ್ಚರಗೊಂಡ ನಿವಾಸಿಗಳು ಆನೆ ಕಂಡು ಬೆಚ್ಚಿಬಿದ್ದಿದ್ದಾರೆ. ಕೆಲ ಕ್ಷಣ ರಸ್ತೆಯಲ್ಲಿ ಸಂಚರಿಸಿ ನಂತರ ತೋಟದ ಕಡೆಗೆ ಸಾಗಿದೆ.

ಅರೇಹಳ್ಳಿ ಹಾಗೂ ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಆನೆಗಳನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ಕಾರ್ಯಾಚರಣೆಗೆ ಒಟ್ಟು ಆರು ಥರ್ಮಲ್ ಡ್ರೋಣ್‌ ಬಳಸಲಾಗುತ್ತಿದೆ. ಕತ್ತಲಿನಲ್ಲೂ ಆನೆಗಳಿರುವ ಸ್ಥಳವನ್ನು ಗುರುತಿಸಬಲ್ಲ ಈ ಡ್ರೋಣ್‌ಗಳು 150 ರಿಂದ 200 ಮೀಟರ್ ಎತ್ತರದಲ್ಲಿ ಹಾರಾಡುತ್ತವೆ.

ಕಂಟ್ರೋಲ್ ವ್ಯವಸ್ಥೆ ಮೂಲಕ ಧ್ವನಿ ಸಂದೇಶ ನೀಡಿ ಆನೆಗಳನ್ನು ಬೆದರಿಸಿ ಮುಂದೆ ಸಾಗುವಂತೆ ಮಾಡಲಾಗುತ್ತಿದೆ. ಇದರಿಂದ ಸಿಬ್ಬಂದಿ ಆನೆಗಳ ಹತ್ತಿರ ಹೋಗದೆಯೇ ಅವುಗಳ ಚಲನವಲನ ನಿಯಂತ್ರಿಸಲು ಸಾಧ್ಯವಾಗುತ್ತಿದೆ. ಅಲ್ಲದೆ, ಆರೋಗ್ಯ, ಕಂದಾಯ, ಅರಣ್ಯ ಹಾಗೂ ಪೊಲೀಸ್ ಇಲಾಖೆ ಸುಮಾರು 400-500 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ತಾಲೂಕಿನ ಮಲೆನಾಡು ಭಾಗದ ಕಾಫಿ ಬೆಳಗಾರರು ಕಾಡಾನೆ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ. ಕಷ್ಟಪಟ್ಟು ಬೆಳೆದ ಕಾಫಿ ಮೆಣಸು ಅಡಿಕೆ ಬಾಳೆ ಹಾಗೂ ಇನ್ನಿತರ ಬೆಳೆಗಳು ಕಾಡಾನೆಗಳ ತುಳಿತಕ್ಕೆ ನಾಶವಾಗುತ್ತಿವೆ. ಕಾಡಾನೆ ಹಾವಳಿಯಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಇದರ ಜೊತೆಗೆ ಈಗ ಕಾಫಿ ಕೊಯ್ಲಿನ ಸಮಯವಾಗಿದ್ದು ಈಗ ನಡೆಸುತ್ತಿರುವ ಅರಣ್ಯ ಇಲಾಖೆ ಕಾರ್ಯಾಚರಣೆಯಿಂದ ಸಕಾಲಕ್ಕೆ ಕಾಫಿ ಬೀಜ ಕೊಯ್ಯಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಅರೇಹಳ್ಳಿ ಹೋಬಳಿ ಮಡೇನಹಳ್ಳಿ ಕಾಫಿ ಎಸ್ಟೇಟ್ ಮಾಲೀಕ ಹಾಗೂ ರೋಟರಿ ಮಾಜಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ಕಾಡಾನೆಗಳ ಹಾವಳಿಯಿಂದ ಈ ಭಾಗದ ಜನರು ಬೆಸತ್ತು ಹೋಗಿದ್ದಾರೆ. ಆದರೆ ಅರಣ್ಯ ಅಧಿಕಾರಿಗಳು ಮಾತ್ರ ನಮ್ಮ ಸಮಸ್ಯೆಗೆ ಸ್ಪಂದಿಸದೆ ಹಣವನ್ನು ಲೂಟಿ ಮಾಡುವುದರಲ್ಲಿ ನಿರತವಾಗಿದೆ. ಒಟ್ಚಾರೆಯಾಗಿ ಕಾಡಾನೆ ಹಾವಳಿಯಿಂದ ಶಾಶ್ವತ ಪರಿಹಾರ ದೊರಕಬೇಕು ಎಂದು ಆಗ್ರಹಿಸಿದ್ದಾರೆ.