ಸಾರಾಂಶ
- ರಾತ್ರಿಯಿಡೀ ತೋಟದಲ್ಲಿ ತಿಂದುಂಡು ಮುಂಜಾನೆಯೊಳಗೆ ಕಾಡು ಸೇರುವ ಪುಂಡಾನೆ । ಆನೆ ಸೆರೆಗೆ ಅನುಮತಿ ಕೋರಿ ಪತ್ರ
- ಐದಾರು ತಿಂಗಳಿನಿಂದಲೂ ಕಾಡಾನೆ, ಚಿರತೆ, ಕರಡಿ ದಾಳಿಗಳು ಹೆಚ್ಚುತ್ತಲೇ ಇವೆ, ದೂರು ನೀಡಿದರೂ ಕ್ರಮವಿಲ್ಲ: ಆಕ್ರೋಶ- - -
ಕನ್ನಡಪ್ರಭ ವಾರ್ತೆ ದಾವಣಗೆರೆವರ್ಷಗಳ ನಂತರ ಮತ್ತೆ ಚನ್ನಗಿರಿ ತಾಲೂಕಿನ ಅರಣ್ಯದಂಚಿನ ಗ್ರಾಮಗಳು, ತೋಟ, ಜಮೀನುಗಳಲ್ಲಿ ಕಾಡಾನೆ ದಾಂಗುಡಿ ಇಡುವ ಮೂಲಕ ಬೆಳೆ, ತೋಟದ ಬೆಳೆಗಳನ್ನು ನಾಶಪಡಿಸಿದ್ದು, ಗ್ರಾಮಸ್ಥರಲ್ಲಿ ಭಯ ಹುಟ್ಟು ಹಾಕಿದೆ.
ಚನ್ನಗಿರಿ ತಾಲೂಕಿನ ಗಂಡುಗನಹಂಕಲು ಹಾಗೂ ಗ್ರಾಮದಂಚಿನ ಅಡಕೆ ತೋಟ, ಜಮೀನುಗಳಿಗೆ, ನೆರೆಹೊರೆಯ ಗ್ರಾಮಸ್ಥರು ಕಾಡಾನೆ ದಾಳಿಯಿಂದಾಗಿ ತೋಟದ ಬೆಳೆ, ಜಮೀನಿನಲ್ಲಿ ಬೆಳೆದ ಬೆಳೆಗಳು ಹಾಳಾಗಿದ್ದು, ಎಲ್ಲರೂ ಪ್ರಾಣ ಕೈಯಲ್ಲಿಡಿದು ಜೀವನ ನಡೆಸುವಂತಾಗಿದೆ ಎಂದು ಚನ್ನಗಿರಿ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಎದುರು ಭಾನುವಾರ ಪ್ರತಿಭಟಿಸಿದರು.ಅರಣ್ಯ ಪ್ರದೇಶ ವ್ಯಾಪ್ತಿಯ ಗಂಡುಗನಹಂಕಲು ಗ್ರಾಮ, ಗ್ರಾಮದಂಚಿನ ಅಡಕೆ ತೋಟ, ಜಮೀನುಗಳಲ್ಲಿ ನಿತ್ಯವೂ ಕಾಡಾನೆ ಬೆಳೆಗಳನ್ನು ನಾಶಪಡಿಸುತ್ತಿದೆ. ಈ ಪುಂಡಾನೆಯನ್ನು ಹಿಡಿಯುವಂತೆ ಸಾಕಷ್ಟು ಸಲ ಅರಣ್ಯ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಐದಾರು ತಿಂಗಳಿನಿಂದಲೂ ಕಾಡಾನೆ, ಚಿರತೆ, ಕರಡಿ ದಾಳಿಗಳು ಹೆಚ್ಚುತ್ತಲೇ ಇವೆ. ಈ ಬಗ್ಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕ್ರೂರ ವನ್ಯಜೀವಿಗಳು ಕಂಡ ತಕ್ಷಣವೇ ಅರಣ್ಯ ಇಲಾಖೆಯವರಿಗೆ ಫೋನ್ ಮಾಡಿದರೂ ಸ್ಪಂದಿಸದೇ ಅಸಡ್ಡೆ ತೋರುತ್ತಿದ್ದಾರೆ. ಶನಿವಾರ ರಾತ್ರಿ ಅಡಕೆ ತೋಟಕ್ಕೆ ನುಗ್ಗಿರುವ ಕಾಡಾನೆಯು ಅಡಕೆ ಮರಗಳನ್ನೆಲ್ಲಾ ಕಿತ್ತುಹಾಕಿದೆ. ನೊಂದ ರೈತರು ಹೇಳಿದರೆ ಅಧಿಕಾರಿಗಳು ನಂಬುತ್ತಿಲ್ಲ. ಕಾಡಾನೆ ನಾಶಪಡಿಸಿದ ಅಡಕೆ ಮರಗಳನ್ನು ಬೇರು- ಮಣ್ಣಿನ ಸಮೇತವೇ ಟ್ರ್ಯಾಕ್ಟರ್‌ನಲ್ಲಿ ತುಂಬಿ ತಂದಿದ್ದೇವೆ ಎಂದು ನಾಶವಾದ ಬೆಳೆಯನ್ನು ತೋರಿ, ಆಕ್ರೋಶಗೊಂಡರು.ಅರಣ್ಯ ಇಲಾಖೆಯಿಂದ ಬೆಳೆ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಉಬ್ರಾಣಿ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳು ಬರುತ್ತಿರುವುದು ಕಳೆದ 2 ದಶಕದಿಂದ ಹೆಚ್ಚಾಗಿದೆ. ಇಲಾಖೆ ಕಾಡಾನೆಗಳ ಹಾವಳಿ ತಪ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಕಾಡಾನೆ ದಾಳಿಯಿಂದಾಗಿ ಸುಮಾರು 45 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಕೆ ಮರಗಳು, ಮೆಕ್ಕೆಜೋಳ, ರಾಗಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ಪ್ರತಿ ದಿನ ಸಂಜೆ 6 ಗಂಟೆ ನಂತರ ಗ್ರಾಮದಂಚಿನ ತೋಟ, ಜಮೀನು, ಗ್ರಾಮಗಳಿಗೆ ಕಾಡಾನೆ ದಾಳಿ ಮಾಡುತ್ತಿದೆ ಎಂದು ಅಳಲು ತೋಡಿಕೊಂಡರು.
ಉಬ್ರಾಣಿ, ದುರ್ವಿಗೆರೆ, ಬಸವಾಪುರ, ಮಾನಮಟ್ಟಿ, ಕಗ್ಗಿ, ಮುಗಳಿಹಳ್ಳಿ, ಚಿಕ್ಕ ಮಳಲಿ ತಾಂಡಾ, ಚಿಕ್ಕ ಮಳಲಿ, ಬಂಡೀಗುಡ್ಡ, ಚಿಕ್ಕಸಂಗಿ, ಕೊಡಕಿಕೆರೆ ಗ್ರಾಮದ ತೋಟಗಳಿಗೆ, ಜಮೀನುಗಳಿಗೆ ಅರಣ್ಯ ಪ್ರದೇಶದಿಂದ ನಿತ್ಯ ಸಂಜೆ ಹಾಗೂ ರಾತ್ರಿ ಕಾಡಾನೆ ನುಗ್ಗುತ್ತಿವೆ. ಅಡಕೆ ಮರಗಳನ್ನು ಕೆಡವಿ, ಬೆಳೆಯನ್ನು ತಿಂದು, ರಾತ್ರೋರಾತ್ರಿ ಅಡಕೆ ಮರಗಳನ್ನೆಲ್ಲಾ ನೆಲಸಮ ಮಾಡಿ, ಸೂರ್ಯ ಹುಟ್ಟುವ ಮುನ್ನವೇ ಕಾಡಾನೆ ಕಾಡಿನಲ್ಲಿ ಮರೆಯಾಗುತ್ತಿದೆ. ಹಗಲು ಹೊತ್ತಿನಲ್ಲೇ ತೋಟ, ಹೊಲ-ಗದ್ದೆಗಳಿಗೆ ಹೋಗಲು ರೈತರು, ಗ್ರಾಮಸ್ಥರು ಹೆದರುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.ಕಾಡಿನಲ್ಲಿ ದನ ಸಾಕಣೆ ಬೇಡ:
ಗಂಡುಗನಹಂಕಲು ಗ್ರಾಮ ಅರಣ್ಯ ಪ್ರದೇಶಕ್ಕೆ ಸಮೀಪವಿದ್ದು, ಸಂಜೆ, ರಾತ್ರಿ, ಹಗಲು ಮನೆಯಿಂದ ಹೊರಬರುವುದೇ ಕಷ್ಟವಾಗಿದೆ. ತೋಟದಲ್ಲಿ ಮಲಗಲು ಮಾಡಿಕೊಂಡ ಗುಡಿಸಲುಗಳನ್ನೇ ನಾಶಪಡಿಸುತ್ತಿವೆ. ಅರಣ್ಯ ಇಲಾಖೆಯವರು ಅರಣ್ಯದಲ್ಲಿ ದನಗಳನ್ನು ಸಾಕಲು ಅವಕಾಶ ನೀಡಿದ್ದಾರೆ. ಅಲ್ಲಿ ಗದ್ದಲ ಆಗುವುದರಿಂದ ಕಾಡು ಪ್ರಾಣಿಗಳು ಗ್ರಾಮಗಳ ಕಡೆ ನುಗ್ಗುತ್ತಿವೆ. ಕಾಡಿನಲ್ಲಿ ದನ ಸಾಕುವವರನ್ನು ಅಲ್ಲಿಂದ ತೆರವು ಮಾಡಿಸಬೇಕು ಎಂದು ಒತ್ತಾಯಿಸಿದರು.ಗ್ರಾಮದ ಮುಖಂಡರಾದ ರುದ್ರೇಶ, ಗೋವಿಂದ ನಾಯ್ಕ, ಪ್ರಕಾಶ, ಹನುಮಂತ ನಾಯ್ಕ, ಚನ್ನಬಸಪ್ಪ, ಉಮೇಶ, ಶಿವನಾಯ್ಕ, ಮುನಿರ್ ನಾಯ್ಕ ಸೇರಿದಂತೆ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಇದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ಯುವ ಮುಖಂಡ ಮಾಡಾಳ ಮಲ್ಲಿಕಾರ್ಜುನ ಕಾಡಾನೆ ಹಿಡಿಯುವಂತೆ ಇಲಾಖೆಗೆ ಒತ್ತಾಯಿಸಿದರು.
ಮೇಲಾಧಿಕಾರಿಗಳಿಗೆ ಪತ್ರ:ಗ್ರಾಮಸ್ಥರ ಮನವಿ ಸ್ವೀಕರಿಸಿದ ಚನ್ನಗಿರಿ ವಲಯ ಅರಣ್ಯಾಧಿಕಾರಿ ಶ್ವೇತಾ ಅವರು ಕಾಡಾನೆಯನ್ನು ಸೆರೆಹಿಡಿಯುವ ಬಗ್ಗೆ ಅನುಮತಿ ಕೋರಿ ಇಲಾಖೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅಲ್ಲದೇ, ಅಲ್ಲಿಯವರೆಗೆ ಗ್ರಾಮದಿಂದ ಆನೆಯನ್ನು ದೂರ ಓಡಿಸಲು, ಕಾಡಿನೊಳಗೆ ಕಳಿಸಲು ಇಲಾಖೆಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಗ್ರಾಮದ ಸುತ್ತಲೂ ಕಂದಕ ತೆಗೆಯುವ ಕಾಮಗಾರಿಯನ್ನೂ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
- - -(ಕೋಟ್ಸ್) ಚನ್ನಗಿರಿ ತಾಲೂಕಿನಲ್ಲಿ ಆನೆಗಳ ಪುಂಡಾಟ, ಹಾವಳಿ ಹೆಚ್ಚುತ್ತಿದೆ. ತೋಟ, ಜಮೀನುಗಳಿಗೆ ದಾಳಿ ಮಾಡಿ, ಜನರ ಜೀವನ ತೆಗೆದುಕೊಂಡಿದ್ದ ಮೂರು ಕಾಡಾನೆಗಳನ್ನು ಹಿಡಿಯುವಂತೆ ಅರಣ್ಯ ಇಲಾಖೆ ಮೇಲೆ ಒತ್ತಡ ಹೇರಿದ್ದರಿಂದ ಹರಸಾಹಸ ಮಾಡಿ, ಅವುಗಳನ್ನು ಹಿಡಿಯಲಾಗಿತ್ತು. ಆನೆ ಹಾವಳಿ ತಪ್ಪಿಸಲು ಕಂದಕ ಮಾಡಿಸಿದ್ದರೂ ಅದನ್ನೆಲ್ಲಾ ದಾಟಿಕೊಂಡು, ಕಾಡಾನೆಗಳು ಸೇರಿದಂತೆ ಕಾಡು ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ. ಜನರು ತೀವ್ರ ಹೋರಾಟ ಮಾಡುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತು, ಗ್ರಾಮಸ್ಥರಿಗೆ, ದನ-ಕರುಗಳಿಗೆ ರಕ್ಷಣೆ ನೀಡಬೇಕು. ಕಾಡಾನೆ ಹಿಡಿಯಬೇಕು.
- ಮಾಡಾಳ್ ಮಲ್ಲಿಕಾರ್ಜುನ, ಬಿಜೆಪಿ ಯುವ ಮುಖಂಡ- - -
-25ಕೆಡಿವಿಜಿ1, 2, 3.ಜೆಪಿಜಿ:ಚನ್ನಗಿರಿ ತಾಲೂಕಿನ ಗಂಡುಗನ ಹಂಕಲು ಗ್ರಾಮದ ಜಮೀನು, ತೋಟಗಳಿಗೆ ಕಾಡಾನೆ ನುಗ್ಗಿ ಅಡಕೆ ಮರಗಳ ನಾಶಪಡಿಸಿದ್ದನ್ನು ಖಂಡಿಸಿ, ಗ್ರಾಮಸ್ಥರು ಕುಟುಂಬ ಸಮೇತ ಅರಣ್ಯ ಇಲಾಖೆ ಕಚೇರಿ ಬಳಿ ಆಗಮಿಸಿ ಪುಂಡಾನೆ ಶೀಘ್ರ ಸೆರೆಹಿಡಿಯಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))