ವನ್ಯಜೀವಿ ರಕ್ಷಣೆ: ಬೀದಿ ನಾಟಕ ಪ್ರದರ್ಶನ

| Published : Feb 22 2024, 01:45 AM IST

ಸಾರಾಂಶ

ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಮರೇನಾಯಕನಹಳ್ಳಿ ಮತ್ತು ಗೊಂದಿಹಳ್ಳಿ ಗ್ರಾಮಗಳಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಮತ್ತು ಬೆಂಕಿ ಅನಾಹುತಗಳ ತಡೆಗಾಗಿ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಕರ್ನಾಟಕ ಅರಣ್ಯ ಇಲಾಖೆಯ ಆದೇಶದಂತೆ ಮಧುಗಿರಿ ಉಪ ವಿಭಾಗ ಮತ್ತು ಪ್ರಾದೇಶಿಕ ಅರಣ್ಯ ವಲಯ ಕೊರಟಗೆರೆ ಇವರ ವತಿಯಿಂದ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಮರೇನಾಯಕನಹಳ್ಳಿ ಮತ್ತು ಗೊಂದಿಹಳ್ಳಿ ಗ್ರಾಮಗಳಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಮತ್ತು ಬೆಂಕಿ ಅನಾಹುತಗಳ ತಡೆಗಾಗಿ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.

ಅರಣ್ಯ ಇಲಾಖೆ ಆಯೋಜಿಸಿದ್ದ ಬೀದಿ ನಾಟಕ ಕುರಿತು ಮಾತನಾಡಿದ ವಲಯ ಅರಣ್ಯಾಧಿಕಾರಿ ರವಿ ಸಿ., ಹೆಚ್ಚು ಅರಣ್ಯ ಪ್ರದೇಶಗಳು ಇರುವ ಗ್ರಾಮಗಳಲ್ಲಿ ಸಾರ್ವಜನಿಕರು ಇಲಾಖೆಯ ಜೊತೆ ಸೇರಿ ಬೇಸಿಗೆ ಕಾಲದಲ್ಲಿ ಅರಣ್ಯಕ್ಕೆ ಬೆಂಕಿ ಬೀಳುವ ಮುನ್ನ ಜಾಗ್ರತೆ ವಹಿಸಬೇಕು. ಜೊತೆಗೆ ಪ್ರಾಣಿ ಪಕ್ಷಿಗಳ ಸಂಕುಲವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡಗಳನ್ನು ನೆಡಬೇಕು. ಅರಣ್ಯ ಸಂರಕ್ಷಣೆಯ ಜೊತೆಗೆ ಅರಣ್ಯ ಸಂಪತ್ತು ಉಳಿಸಬೇಕು ಎಂದು ತಿಳಿಸಿದರು.

ಗ್ರಾಮದ ಹಿರಿಯರು ಹಾಗೂ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪುಟ್ಟನರಸಪ್ಪ ಮಾತನಾಡಿ, ಗ್ರಾಮಕ್ಕೆ ಸೇರಿದ ಅರಣ್ಯ ಪ್ರದೇಶವು ಅತ್ಯಂತ ಸಮೃದ್ದಿ ಹೊಂದಿದ್ದು, ಅರಣ್ಯ ಸಂಪತ್ತನ್ನು ನಾಶ ಮಾಡಬಾರದು. ಅರಣ್ಯ ಇಲಾಖೆಗೆ ಇನ್ನು ಹೆಚ್ಚಿನ ಸಹಕಾರವನ್ನು ಗ್ರಾಮದ ಎಲ್ಲರೂ ನೀಡಬೇಕು. ಕಾಡಲ್ಲಿ ಅತ್ಯಂತ ಹೆಚ್ಚಾಗಿ ಗಿಡ ಮರ ಹುಲ್ಲು ಬೆಳೆದಿದ್ದು ಬೇಸಿಗೆ ಕಾಲದಲ್ಲಿ ಬೆಂಕಿ ಬೀಳುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಆದ್ದರಿಂದ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಂತೆ ಅವರ ಜೊತೆ ಸದಾ ಇದ್ದು ಅರಣ್ಯ ಸಂಪತ್ತನ್ನು ಉಳಿಸಬೇಕು ಎಂದರು.

ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ರವಿ ಸಿ., ಉಪ ವಲಯ ಅರಣ್ಯಾಧಿಕಾರಿ ನಾಗರಾಜು, ಗಸ್ತು ಅರಣ್ಯ ಪಾಲಕ ಮಂಜುನಾಥ್ ಬಿ.ಸಿ., ತಿಮ್ಮಾಪುರ ಅರಣ್ಯ ರಕ್ಷಣಾ ಸಿಬ್ಬಂದಿಗಳಾದ ಪವನ್, ತಿಪ್ಪೇಸ್ವಾಮಿ, ಗ್ರಾಮಸ್ಥರಾದ ಪುಟ್ಟನರಸಪ್ಪ, ರಂಗಹನುಮಯ್ಯ, ಮುದ್ದರಂಗಪ್ಪ, ನಾಗರಾಜು, ಮಂಜುಸ್ವಾಮಿ ಎಂ.ಎನ್., ಚಿಕ್ಕನರಸಯ್ಯ ಹಾಗೂ ಗ್ರಾಮಸ್ಥರು, ಮಹಿಳೆಯರು, ಶಾಲಾ ಮಕ್ಕಳು ಹಾಜರಿದ್ದರು.