ಆನೆ ಎಂಬುದು ಒಂದು ದೊಡ್ಡ ಸಂದೇಶ ನೀಡುತ್ತದೆ

| Published : Aug 22 2024, 12:47 AM IST

ಸಾರಾಂಶ

- ವೀರನಹೊಸಹಳ್ಳಿಯಲ್ಲಿ ದಸರಾ ಗಜಪಯಣ ಕಾರ್ಯಕ್ರಮ

-----ಕನ್ನಡಪ್ರಭ ವಾರ್ತೆ ವೀರನಹೊಸಹಳ್ಳಿ (ಹುಣಸೂರು ತಾಲೂಕು)

ಆನೆ ಎಂಬುದು ಒಂದು ದೊಡ್ಡ ಸಂದೇಶ ನೀಡುತ್ತದೆ. ಆನೆ ಎಂಬುದು ಕಾಡಿನ ಸಂಪತ್ತು. ವನ್ಯಜೀವಿಗಳು ಹಾಗೂ ವನ್ಯ ಸಂರಕ್ಷಣೆ ದೇಶಕ್ಕೆ ಅತ್ಯಗತ್ಯ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯು ಬುಧವಾರ ಆಯೋಜಿಸಿದ್ದ ಗಜಪಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಹಾಗೂ ವನ್ಯ ಸಂರಕ್ಷಣೆ ಮಾಡದಿದ್ದರೆ ಮಾನವ ಉಳಿಯುವುದು ಕಷ್ಟ. ಈ ವರ್ಷ ಮೈಸೂರಿನಲ್ಲಿ 40 ಡಿಗ್ರಿವರೆಗೆ ಉಷ್ಣಾಂಶ ಇತ್ತು. ಇದಕ್ಕೆ ಕಾರಣ ಪರಿಸರವನ್ನು ಹಾಳು ಮಾಡುತ್ತಿರುವುದು. ಆದ್ದರಿಂದ ಪರಿಸರವನ್ನು ರಕ್ಷಿಸಲು ಎಲ್ಲರೂ ಪಣತೊಡಬೇಕು ಎಂದು ಕರೆ ನೀಡಿದರು.ಮಾನವ ಹಾಗೂ ಪ್ರಾಣಿ ಸಂಘರ್ಷ ನಡೆಯಲು ಕಾರಣ ಅರಣ್ಯ ನಾಶ ಮತ್ತು ಒತ್ತುವರಿ ಮಾಡುತ್ತಿರುವುದು ಇದನ್ನು ತಡೆಗಟ್ಟಬೇಕು ಎಂದರು. ಈ ಬಾರಿ ನಾಡಿನಲ್ಲಿ ಉತ್ತಮವಾಗಿ ಮಳೆಯಾಗಿದ್ದು ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಆದ್ದರಿಂದ ಮುಖ್ಯಮಂತ್ರಿಗಳು ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ತಿಳಿಸಿದ್ದಾರೆ. ಅದರಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು ಹುಣಸೂರು ತಾಲೂಕು ಅಭಿವೃದ್ಧಿ ಮಾಡಿಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಕಳೆದ ಬಾರಿ ಸರಳ ದಸರಾ ನಡೆಯಿತು. ಈ ಬಾರಿ ಅದ್ಧೂರಿ ದಸರಾ ನಡೆಸುವ ಬಗ್ಗೆ ಮುಖ್ಯಮಂತ್ರಿಗಳು ತಿಳಿಸಿದ್ದು, ಇದು ಸಂತಸ ತಂದಿದೆ. ಹುಣಸೂರು ತಾಲೂಕು ಹಿಂದುಳಿದಿದೆ, ಕಾಡಂಚಿನ ಪ್ರದೇಶವಾಗಿದ್ದು, ಪ್ರಾಣಿ ಮತ್ತು ಮಾನವ ನಡುವೆ ಸಂಘರ್ಷ ನಡೆಯುತ್ತಿದೆ, ಕಳೆದ ವರ್ಷ ಸೂಕ್ತ ಪರಿಹಾರ ಕೊಡಿಸಲಾಗಿತ್ತು. ಕಾಡಂಚಿನ ಗಡಿ ವಿವಾದ ನಡೆಯುತ್ತಿದೆ, ಸರ್ಕಾರ ಸಭೆ ನಡೆಸಿ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ರೈತರಿಗೆ ತೊಂದರೆಯಾಗಬಾರದೆಂದು ಕಳೆದ ಬಾರಿ ಮನವಿ ಮಾಡಿದ್ದೆ, ಇನ್ನೂ ಆಗಿಲ್ಲ. ಶೀಘ್ರವೇ ಕ್ರಮ ವಹಿಸಿ ಎಂದು ಮನವಿ ಮಾಡಿದರು.ಕಾಡಿನಿಂದ ನಾಡಿಗೆ ಬಂದಿರುವ ಗಿರಿಜನರ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹುಣಸೂರು ತಾಲೂಕಿನ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಅರಸು ಭವನ ಪೂರ್ಣ ಗೊಳಿಸುವ ಮೂಲಕ ಹುಟ್ಟೂರು ಅಭಿವೃದ್ಧಿಗೆ ಕ್ರಮ ಹಾಗೂ ಮ್ಯೂಸಿಯಂ ಸ್ಥಾಪನೆ, ಅರಸು ಕಲಾಭವನ ಅಭಿವೃದ್ಧಿ, ಪುತ್ಥಳಿಗೆ ಕಾಯಕಲ್ಪ ಮಾಡಲು ಸರ್ಕಾರ ಗಮನಹರಿಸಬೇಕು ಎಂದು ಅವರು ಕೋರಿದರು.ಇದೇ ವೇಳೆ ದಸರಾ ಆನೆಗಳ ಮಾವುತರು ಮತ್ತು ಕಾವಾಡಿಗಳನ್ನು ಸಚಿವರು ಸನ್ಮಾನಿಸಿದರು. ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್, ಸಂಸದ ಸುನಿಲ್ ಬೋಸ್, ಅರಣ್ಯ ವಸತಿ ಧಾಮಗಳ ಅಧ್ಯಕ್ಷರಾದ ಶಾಸಕ ಅನಿಲ್ ಚಿಕ್ಕಮಾದು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಶಾಸಕ ಡಿ. ರವಿಶಂಕರ್, ದೊಡ್ಡಹೆಜ್ಜೂರು ಗ್ರಾಪಂ ಅಧ್ಯಕ್ಷೆ ಅಂಬಿಕಾ ಲೋಕೇಶ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಎಸ್ಪಿ ಎನ್. ವಿಷ್ಣುವರ್ಧನ್, ಹುಲಿ ಯೋಜನೆ ನಿರ್ದೇಶಕ ಡಾ.ಪಿ. ರಮೇಶ್ ಕುಮಾರ್, ಮೈಸೂರು ವೃತ್ತ ಸಿಎಫ್ ಡಾ.ಎಂ. ಮಾಲತಿಪ್ರಿಯಾ ಮೊದಲಾದವರು ಇದ್ದರು. ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ ಸ್ವಾಗತಿಸಿದರು.----ಕೋಟ್...ಜಗತ್ತಿನ ಅತಿ ದೊಡ್ಡ ಸವಾಲು ಹವಾಮಾನ ಬದಲಾವಣೆ. ಹವಾಮಾನ ವೈಪರಿತ್ಯ ತಡೆಗಟ್ಟಲು ಅರಣ್ಯ ಸಂರಕ್ಷಣೆ ಮಾಡಬೇಕು. ಕೇರಳದ ವಯನಾಡು ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿ ಅಪಾರ ಪ್ರಮಾಣದ ಸಾವು ನೋವು ಆಸ್ತಿ ಪಾಸ್ತಿ ಹಾನಿ ಆಗಿದೆ. ಅರಣ್ಯ ಸಂರಕ್ಷಣೆ ಕಾಯ್ದೆ ಇರುವುದರಿಂದ ಇಂದು ಕಾಡನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಮಾನವ ಮತ್ತು ಪ್ರಾಣಿ ಸಂಘರ್ಷಣೆ ನಡೆಯುತ್ತಿದೆ. ಪ್ರತಿ ವರ್ಷ 20 ರಿಂದ 30 ಜನ ಆನೆ ತುಳಿತದಿಂದ ಮರಣ ಹೊಂದುತ್ತಿದ್ದಾರೆ. ಇದನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಮಾಡಲಾಗುತ್ತಿದೆ.- ಈಶ್ವರ್ ಖಂಡ್ರೆ, ಅರಣ್ಯ ಸಚಿವ----ದಸರಾಕ್ಕೆ ಮೆರಗು ಇರುವುದು ಅಂಬಾರಿ ಹೊರುವುದು, ಅರ್ಜುನ ಆನೆ 8 ಬಾರಿ ಅಂಬಾರಿ ಹೊತ್ತಿತ್ತು. ಇದು ವೀರ ಮರಣ ಹೊಂದಿದ್ದು ಇದರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂದು ದಸರಾ ಹೈ ಪವರ್ ಕಮಿಟಿ ಸಭೆಯಲ್ಲಿ ಮನವಿ ಮಾಡಿದ್ದೇನೆ. ಈ ಬಾರಿ ಅದ್ಧೂರಿಯಾಗಿ ದಸರಾ ಆಚರಣೆ ಮಾಡುತ್ತಿದ್ದು, ಇದು ನಮಗೆ ಹೆಮ್ಮೆಯ ವಿಷಯ.- ಅನಿಲ್ ಚಿಕ್ಕಮಾದು, ಶಾಸಕ ಹಾಗೂ ಜಂಗಲ್ ಲಾಡ್ಜ್ ಅಧ್ಯಕ್ಷ